ಮದುವೆಯ ಸಂದರ್ಭದಲ್ಲಿ ನಡೆಯುವ ಒಂದು ಶಾಸ್ತ್ರ. ಗಂಡಿನ ಮನೆಯವರ ಆಹ್ವಾನದಲ್ಲಿ ಒಂದು ಶುಭ ದಿನ ನೋಡಿ ಹೆಣ್ಣಿನ ಮನೆಯವರು ಗಂಡಿನ ಮನೆಗೆ ಹೋಗುತ್ತಾರೆ. ಮೂರು, ಐದು ಅಥವಾ ಒಂಬತ್ತು ಜನರೊಡಗೂಡಿ ಹೋಗುವ ರೂಢಿಯಿದೆ. ಹೆಣ್ಣು  ಗಂಡಿನ ತಾರಾಬಲ ಸರಿ ಹೊಂದಿ, ಮಾತುಕತೆಗೂ ಮುನ್ನ ‘ದೀಪಶಾಸ್ತ್ರ’ ನೋಡುತ್ತಾರೆ. ನಡುಮನೆಯಲ್ಲಿ ಸಗಣಿ ಉಂಡೆಯ ಮೇಲೆ ಹಣತೆ ಹಚ್ಚಿ ಇಡುತ್ತಾರೆ. ಅದಕ್ಕೆ ಅರಿಶಿಣ-ಕುಂಕುಮ ಹಚ್ಚಿ, ಹೂ ಮುಡಿಸಿ ಪೂಜಿಸುತ್ತಾರೆ. ದೀಪದ ಎದುರಿಗೆ ಗಂಡು ಹೆಣ್ಣಿನವರು ಕುಳಿತು ಉರಿಯುತ್ತಿರುವ ದೀಪವನ್ನೇ ಗಮನಿಸುತ್ತಾರೆ. ದೀಪದ ಕುಡಿ ನೇರವಾಗಿ ಉರಿಯುತ್ತಿದ್ದರೆ, ಗಂಡು ಹೆಣ್ಣಿನ ಸಂಸಾರ ಮುಂದೆ ಚೆನ್ನಾಗಿ ನಡೆಯುತ್ತದೆಂದೂ, ದೀಪದ ಕುಡಿ ಅಲುಗಾಡುತ್ತಿದ್ದರೆ ಮುಂದೆ ನಡೆಯುವ ಸಂಸಾರ ಚೆನ್ನಾಗಿರುವುದಿಲ್ಲವೆಂದು ತೀರ್ಮಾನಿಸಿ, ಸಂಬಂಧ ಬೆಳೆಸುವುದಿಲ್ಲ. ಇದೇ ಬಗೆಯಲ್ಲಿ ದೇವರಲ್ಲಿ ಪ್ರಸಾದ ಕೇಳುವುದು, ಜಾತಕ ನೋಡುವುದು ಇತ್ಯಾದಿ ಶಕುನಗಳಿಂದ ಮುಂದಿನ ಆಗು ಹೋಗುಗಳನ್ನು ನೋಡಿ ತೀರ್ಮಾನಕ್ಕೆ ಬರುತ್ತಾರೆ.