ದಾಸಪ್ಪನಾದವನು ತನ್ನ ಮಗನಿಗೂ ಅಥವಾ ಆಸಕ್ತ ಊರಿನ ಬಾಲಕನಿಗೂ ದಾಸ ದೀಕ್ಷೆ ನೀಡುವುದು. ದೀಕ್ಷೆ ಪಡೆಯುವ ಹುಡುಗನ  ಬಂಧುಗಳು ಹಾಗೂ ಕುಟುಂಬದವರು ಇದರಲ್ಲಿ ಭಾಗವಹಿಸುತ್ತಾರೆ. ದೀಕ್ಷೆ ಪಡೆಯುವವರ ಮನೆಯ ಮುಂದೆ ಚಪ್ಪರ ಹಾಕಿ, ತಳಿರುತೋರಣಗಳಿಂದ ಶೃಂಗರಿಸುತ್ತಾರೆ. ದೀಕ್ಷೆ ಪಡೆಯುವ ಹುಡುಗನಿಗೆ ಅರಿಶಿಣ, ಸೀಗೇಕಾಯಿ ನುಂಗಿಸಿ ಸ್ನಾನ ಮಾಡಿಸುತ್ತಾರೆ. ಹುಡುಗನನ್ನು ವಾದ್ಯಮೇಳಗಳೊಂದಿಗೆ ಸೋಬಾನೆಯವರು, ಕಳಶ ಹೊತ್ತ ಗರತಿ ಅಲ್ಲದೇ ಊರಿನ ಮುಖ್ಯಸ್ಥರು, ಮುತ್ತೈದೆಯರು ದೀಕ್ಷೆಗೆ ಸಿದ್ಧ ಮಾಡಿದ ಹೊಳೆಯ ದಡಕ್ಕೆ ಬರುತ್ತಾರೆ. ಅಲ್ಲಿ ಕಂಬಳಿಯೊಂದನ್ನು ಹಾಸಿ, ಹತ್ತಾರು ಜೋಡಿ ವೀಳ್ಯೆದೆಲೆ ಅಡಿಕೆ ಜೊತೆಗೆ ಕಳಶ, ಬಾಳೆಹಣ್ಣು ತೆಂಗಿನಕಾಯಿ ಅಲ್ಲದೇ ದಾಸಯ್ಯನ ಪೂಜಾ ಸಾಮಾನುಗಳಾದ ದೇವರ ಅಡುಗೆ, ಬಿಲ್ಲುಬಾಣ ಇತ್ಯಾದಿಗಳನ್ನು ಇಟ್ಟು ಜಾಗಟೆ ಬಾರಿಸಿ, ಗೋವಿಂದಾ, ಗೋವಿಂದಾ ಎಂದು ಹೇಳುತ್ತಾ ಎಲ್ಲರೂ ಒಂದೇ ಸಾರಿ ಬಾಂಕಿಯನ್ನು ಊದುತ್ತಾರೆ. ಆಗ ಮುಖ್ಯ ದಾಸಯ್ಯನು ತಿರುಮಂತ್ರ ಸ್ತುತಿಸುತ್ತಿರುತ್ತಾನೆ. ಅಲ್ಲಿ ನೆರೆದ ದಾಸಯ್ಯಗಳು ನಾನಾ ರೀತಿಯಲ್ಲಿ ಗೋವಿಂದ ಹಾಡುತ್ತಾರೆ. ಸೋಬಾನದವರು ಹಾಡು ಹೇಳುತ್ತಿರುತ್ತಾರೆ. ಹೀಗೆ ಪೂಜೆ ಮುಗಿದ ಮೇಲೆ ದೀಕ್ಷೆ ಪಡೆದ ಹುಡುಗನನ್ನು ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಬೀದಿ ಗೊಂದರಂತೆ ಕಾಯಿಬೆಲ್ಲದ ಮಣೇವು ಹಾಕಿಕೊಂಡು ಹುಡುಗನ ಮನೆಯ ಮುಂದೆ ಬರುತ್ತಾರೆ.

ಚಪ್ಪರದಡಿಯಲ್ಲಿ ಶೃಂಗಾರ ಮಾಡಿದ ಕುರಿಯೊಂದನ್ನು ಕಂಬಕ್ಕೆ ಕಟ್ಟಿ ಹಾಕಿರುತ್ತಾರೆ. ಮೆರವಣಿಗೆಯಿಂದ ಬಂದ ಮುಖ್ಯದಾಸಯ್ಯನು ಕುರಿಯನ್ನು ಅರಿಶಿಣ ಕುಂಕುಮ, ಹೂಹಾರ ಗಳೊಂದಿಗೆ ಪೂಜಿಸಿ ಅದರ ಮುಂಗಾಲುಗಳನ್ನು ಮೇಲಕ್ಕೆತ್ತಿಕೊಂಡು ಹಿಂದಿನ ಕಾಲುಗಳನ್ನು ಬಿಗಿ ಯಾಗಿ ಹಿಡಿದುಕೊಂಡು ಅದರ ಕುತ್ತಿಗೆಯನ್ನು ಹಲ್ಲಿನಿಂದ ಕಚ್ಚಿ ರಕ್ತ ಕುಡಿಯುತ್ತಾನೆ. ಕುರಿ ಸತ್ತ ನಂತರ ಕೆಳಗೆ ಬಿಡುತ್ತಾನೆ. ಇದನ್ನು ಗಾವು ಸಿಗಿಯುವುದು ಎನ್ನುತ್ತಾರೆ. ಕೊನೆಯಲ್ಲಿ ಕುರಿಯ ಮಾಂಸ ದಾಸಯ್ಯನಿಗೆ ಸೇರುತ್ತದೆ.

ದೀಕ್ಷೆ ಪಡೆಯುವ ಹುಡುಗನನ್ನು ಮನೆಯ ಒಳಗೆ, ಆಗಲೇ ಸಿದ್ಧಕೊಂಡ ಹಸೆಮಣೆಯ ಮೇಲೆ ಕೂರಿಸಿ, ಕಾಯಿಸಿದ ಶಂಖ ಹಾಗೂ ಚಕ್ರ ಮುದ್ರೆಗಳನ್ನು ಒಂದೊಂದು ತೋಳಿಗೂ ಒಂದರಂತೆ ಹಾಕುತ್ತಾರೆ. ನಂತರ ಜೋಳಿಗೆ ಹಿಡಿದು ಹತ್ತಾರು ಮನೆಗೆ ಭಿಕ್ಷೆ ಬೇಡಿ, ಧಾನ್ಯ ಇತ್ಯಾದಿಗಳಿಂದ ಅಡುಗೆ ಮಾಡಿಸಿ, ಬಾಡೂಟ ಮಾಡಿಸುತ್ತಾರೆ. ಅಂದು ಸೇರಿದ ಎಲ್ಲರಿಗೂ ಬಾಡೂಟದ ವ್ಯವಸ್ಥೆ ಇರುತ್ತದೆ.

ದೀಕ್ಷೆ ಪಡೆದವರು ಹತ್ತಾರು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಂಜಲು ತಿನ್ನಬಾರದು. ಕಂಚಿನ ತಟ್ಟೆಯಲ್ಲಿ ಊಟ ಮಾಡಬಾರದು; ಭಿಕ್ಷೆ ವೃತ್ತಿಯೆಂದು ತಿಳಿಯಬೇಕು; ಏನು ಕೊಟ್ಟರೂ ವೆಂಕಟರಮಣನಿಗೆ ಅರ್ಪಿತ ಎಂದು ಸ್ವೀಕರಿಸಬೇಕು. ಆಸೆಯನ್ನು ಬಿಡಬೇಕು. ಯಾರು ಕರೆದರೂ ಆಚರಣೆ ನಡೆಸಿಕೊಡಬೇಕು. ಎಲ್ಲಾ ಕೆಲಸವನ್ನು ದೇವರ ಕಾರ್ಯವೆಂದು ಭಾವಿಸಬೇಕು.