ದೀಪಾವಳಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡಹಬ್ಬ ಎಂದು ಕರೆಯುತ್ತಾರೆ. ಅಂದು ಎಲ್ಲರ ಮನೆ ಮುಂದೆಯು ಹಣತೆಯಲ್ಲಿ  ಎಣ್ಣೆ ದೀಪಗಳು ಸಂಜೆಯಿಂದ ಬೆಳಗಿನ ತನಕ ಉರಿಯುತ್ತವೆ. ದೀಪಕ್ಕೆ ನೀಡುವ ಭಕ್ತಿಯನ್ನೇ ತಮ್ಮ ದನಕರುಗಳಿಗೆ ನೀಡುತ್ತಾರೆ.

ದೊಡ್ಡ ಹಬ್ಬದ ಮೂರು ದಿನಗಳು ಹಿಂದಿನಿಂದಲೇ ಗೋವುಗಳ ಅಲಂಕಾರಕ್ಕೆ ಬೇಕಾದ ಬಿದಿರಿನ ಕಟ್ಟಿಗೆಯ ಮೋಹಕ ಬಾಸಿಂಗ ತಯಾರಿಸುತ್ತಾರೆ. ಹಬ್ಬದ ಬೆಳಿಗ್ಗೆ ದನಕರುಗಳಿಗೆ ಮೈತೊಳೆಸಿ ಗೆಜ್ಜೆ, ಗಂಟೆ, ಡಾಬು ಶೃಂಗರಿಸಿ, ಅಡಿಕೆ ಹೂ, ಗೋಟಡಿಕೆ, ಪಚ್ಚೆತೆನೆ, ಫಲಪುಷ್ಪ, ವೀಳ್ಯದೆಲೆ ಕಟ್ಟುತ್ತಾರೆ. ದೊಡ್ಡ ಹಬ್ಬದ ಬೆಳಿಗ್ಗೆ ತಮ್ಮ ತಮ್ಮ ದನಕರುಗಳಿಗೆಲ್ಲ ವಿಶೇಷವಾಗಿ ಶೃಂಗರಿಸಿ, ಕೊಂಬಿಗೆ ಬಣ್ಣ, ನೆತ್ತಿಗೆ ಬಾಸಿಂಗ, ಕೊರಳಿಗೆ ಹೂವುಗಳಿಂದ ಅಲಂಕರಿಸುತ್ತಾರೆ. ಬಲಿಷ್ಠ ಎತ್ತುಗಳ ಕೊರಳು ಅಥವಾ ಕೋಡಿಗೆ ಬೆಲೆ ಬಾಳುವ ಬೆಳ್ಳಿ ಅಥವಾ ಚಿನ್ನದ ಆಭರಣಗಳನ್ನು, ನೋಟುಗಳನ್ನು ಕಟ್ಟಿ ಆರತಿ ಬೆಳಗಿ, ಹೊಟ್ಟೆ ತುಂಬಾ ಮೇವು, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ದನ ಕಾಯುವ ಹುಡುಗರನ್ನು ಪ್ರೀತಿ ಯಿಂದ ಕಾಣುತ್ತಾರೆ.

ಊಟದ ನಂತರ ಸಂಜೆ ಶೃಂಗರಿಸಿದ ದನಗಳನ್ನು ಊರಿನ ಬಯಲಿಗೆ ತರುತ್ತಾರೆ. ತೆಂಗಿನಕಾಯಿ ಆಟ, ಭೂತದ ಪೂಜೆ ಮಾಡಿ ಭರ್ಜರಿ ಜಾಗಟೆ ಬಾರಿಸಿ, ದನಗಳನ್ನು ಅಟ್ಟಿಸಿ ಓಡಿಸುತ್ತಾರೆ. ಕಟ್ಟಿದ ಎಲ್ಲಾ ವಸ್ತುಗಳನ್ನು ಸಂಜೆ ಯಾವ ಎತ್ತು, ಮನೆಗೆ ತರುತ್ತದೆಯೋ ಎಂದು ಕಾದು ನೋಡುತ್ತಾರೆ.