ಮಲೆನಾಡಿನ ಒಕ್ಕಲಿಗರಲ್ಲಿರುವ ನೆಲದ ಮೇಲಿನ ಎಡೆ ಸ್ವೀಕರಿಸುವ ಆಚರಣೆ. ಇದನ್ನು ಸಾಮಾನ್ಯವಾಗಿ ಹರಕೆ ಹೊತ್ತವರು ನವರಾತ್ರಿ ದಿನಗಳಲ್ಲಿ ನಡೆಸುತ್ತಾರೆ. ಹರಕೆ ಹೊತ್ತವರು ಎಡೆಯ ಸಾಮಾಗ್ರಿಗಳೆಲ್ಲವನ್ನೂ ದೇವಸ್ಥಾನಕ್ಕೆ ನೀಡುತ್ತಾರೆ. ಹರಕೆ ಹೊತ್ತವರು ಎಡೆಯ ಅಡುಗೆ ಹಾಗೂ ಪೂಜಾ ಕಾರ್ಯದ ಸಿದ್ಧತೆ ಮಾಡಿಕೊಂಡಿರುತ್ತಾರೆ. ಹರಕೆ ಒಪ್ಪಿಸುವವರು ‘ವೃದ್ದಿ’ ಸೂತಕಾದಿಗಳಿಂದ ದೂರವಿರಬೇಕು.

ಹರಕೆ ಹೊತ್ತ ಕುಟುಂಬದ ವ್ಯಕ್ತಿಗಳು ಹರಕೆ ದಿನ ಸ್ನಾನ ಮಾಡಿ, ಮಡಿಯುಟ್ಟು ದೇವಸ್ಥಾನದ ಬಳಿ ಬರುತ್ತಾರೆ. ಹರಕೆ ಸಲ್ಲಿಸಲೆಂದೇ ಸಗಣಿಯಿಂದ ಸಾರಿಸಿದ ಗುಡಿಯ ಮುಂದಿನ ಸ್ಥಳದಲ್ಲಿ ಸಾಲಾಗಿ ಕುಳಿತುಕೊಳ್ಳುತ್ತಾರೆ. ದೇವತೆಗೆ ಹಣ್ಣು ಹೂಗಳಿಂದ ಶೃಂಗರಿಸಿ, ನೈವೇದ್ಯ ಅರ್ಪಿಸಿದ ಪೂಜಾರಿಯ ಆರತಿ ಎತ್ತುತ್ತಾರೆ. ನಂತರ ಹರಕೆ ಒಪ್ಪಿಸಲು ಸಾಲಾಗಿ ಕುಳಿತವರಿಗೆ ಬರಿ ನೆಲದ ಮೇಲೆ ಎಡೆ ಬಡಿಸುತ್ತಾರೆ. ನೆಲದ ಎಡೆಯನ್ನು ಹರಕೆ ಒಪ್ಪಿಸುವವರು ಸ್ವಲ್ಪವೂ ಅಸಹ್ಯಪಟ್ಟುಕೊಳ್ಳದೆ ಸ್ವೀಕರಿಸುತ್ತಾರೆ. ಈ ಆಚರಣೆಯ ಹಿನ್ನೆಲೆಯಲ್ಲಿ ಅವರುಗಳೆಲ್ಲ ಬೆಳಗಿನಿಂದಲೇ ಉಪವಾಸವಿರುತ್ತಾರೆ.