ದಕ್ಷಿಣ ಕರ್ನಾಟಕದ ಭಾಗದಲ್ಲಿ ನುಸಿಯಮ್ಮನ ಹಬ್ಬ ಆಚರಣೆಯಲ್ಲಿದೆ. ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಈ ಆಚರಣೆಯನ್ನು ನೋಡಬಹುದು. ತೆಂಗಿನ ಮರಗಳಿಗೆ  ನುಸಿರೋಗ ಬಂದ ಮೇಲೆ ಜನಿಸಿದ ಹಬ್ಬವಾಗಿದೆ. ತೆಂಗಿನ ಮರಗಳಿಗೆ ನುಸಿ ಪೀಡೆ ಆರಂಭವಾಗಿ ನಷ್ಟ ಅನುಭವಿಸಿದ ರೈತರು ಈ ಆಚರಣೆಯ ಮೊರೆ ಹೋಗಿದ್ದಾರೆ. ಪ್ಲೇಗ್ ಅಮ್ಮ ಇದ್ದ ಹಾಗೆ ನುಸಿಯಮ್ಮ. ಜನಪದರು ತಮ್ಮ ಒಂದೊಂದು ಕಪ್ಟಗಳನ್ನು ಪರಿಹರಿಸಲು ಒಂದೊಂದು ದೇವತೆಗಳನ್ನೇ ಸೃಷ್ಟಿ ಮಾಡುತ್ತಾರೆ. ಹಾಗೆ ಸೃಷ್ಟಿಯಾದ ದೈವಗಳಲ್ಲಿ ನುಸಿಯಮ್ಮನೂ ಒಂದು. ಒಂದು ರೀತಿ ಗಡಿಮಾರಿಯ ಆಚರಣೆಯನ್ನು ನೆನಪಿಗೆ ತರುತ್ತದೆ.

ಹಬ್ಬದ ದಿನ ಮನೆಯ ಹಿರಿಯನೊಬ್ಬ ತೋಟಕ್ಕೆ ತೆರಳಿ, ತೆಂಗಿನ ತೋಟದ ಎಲ್ಲಾ ತೆಂಗಿನ ಮರಗಳಿಗೂ ಮೂರು ನಾಮ ಹಾಕುತ್ತಾರೆ. ಪೂಜೆಗಾಗಿ ತೋಟದ ಯಾವುದಾದರೂ ಒಂದು ತೆಂಗಿನ ಮರಕ್ಕೆ ನುಸಿಯಮ್ಮನ ಸಿಂಗಾರ ಮಾಡುತ್ತಾರೆ. ರವಿಕೆ, ಸೀರೆ, ಬಳೆ ಹೂಹಾರ, ಸಿಂಧೂರಗಳಿಂದ ಅಲಂಕರಿಸಿ, ಒಂದು ಸಣ್ಣ ಚಪ್ಪರವನ್ನು ಮಾಡುತ್ತಾರೆ. ಇದು ಊರೊಟ್ಟಿನ ಆಚರಣೆಯಾದುದರಿಂದ ಊರಿನವರು ಸೇರಿ ಹಬ್ಬದ ದಿನವನ್ನು ಗೊತ್ತು ಮಾಡಿ, ಡಂಗುರ ಹೊಡೆಸಿ, ಹಬ್ಬವನ್ನು ಸಾರುತ್ತಾರೆ. ಹಬ್ಬದ ದಿನ ಶುಭ್ರ ವಸ್ತ್ರದಾರಿಗಳಾಗಿ ಗ್ರಾಮದ ಅಧಿದೇವತೆಗೆ ಸಾಮೂಹಿಕ ಪೂಜೆ ಸಲ್ಲಿಸಿದ ನಂತರ ಅವರವರ ತೋಟದ ಕಡೆ ನಡೆಯುತ್ತಾರೆ. ತಂಬಿಟ್ಟಿನ ಆರತಿ ತಟ್ಟೆಯನ್ನು ತಲೆಯ ಮೇಲೆ ಹೊತ್ತ ಮುತ್ತೈದೆಯರು ಗಂಡಸರು ಹಾಗೂ ಮಕ್ಕಳೊಡನೆ ಚಪ್ಪರದ ಬಳಿ ಒಂದು ಕಳಶ ಸ್ಥಾಪಿಸಿ, ಒಬ್ಬಟ್ಟಿನ ಎಡೆ ಸಲ್ಲಿಸಿ, ದೀಪ ಬೆಳಗುತ್ತಾರೆ. ಗಡಿ ದಾಟಿ ದೂರ ಹೋಗುವಂತೆ ನುಸಿಯಮ್ಮನನ್ನು ಬೇಡಿಕೊಳ್ಳುತ್ತಾ, ನುಸಿಯಮ್ಮನಾಗಿ ಅಲಂಕೃತಗೊಂಡ ತೆಂಗಿನ ಮರವನ್ನು ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತಾರೆ. ಆರತಿ ಬೆಳಗುವಾಗ ‘ಕೆಂಪಮ್ಮಾ, ಬೇವಿನ ಮರದಮ್ಮಾ, ಅಟ್ಟೀ ಲಕ್ಕಮ್ಮಾ ಕಾಪಾಡ್ರವ್ವ, ನುಸಿಯಮ್ಮ ಮುಂದ್ಲೂರ ಕಡೆಗೆ ಓಗ್ಬುಡವ್ವಾ’ ಎಂದು ಪ್ರಾರ್ಥಿಸುತ್ತಾರೆ. ನಂತರ ಎಲ್ಲರೂ ನಮಸ್ಕರಿಸಿ, ಮನೆಯ ಹಾದಿ ಹಿಡಿಯುತ್ತಾರೆ. ಆಗಲೇ ಸಿದ್ಧಗೊಂಡ ಹಬ್ಬದ ಹೋಳಿಗೆ ಊಟವನ್ನು ಸವಿಯುತ್ತಾರೆ.