ಕುರಿಗಳಿಗೆ ಬರುವ ನೀಲಿ ರೋಗದ ನಿವಾರಣೆಗೆ ಹಿಂಡಿನ ಕುರಿಯೊಂದನ್ನು ಬಲಿಕೊಡುವ ವಿಶಿಷ್ಟ ಆಚರಣೆ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಚಲಿತ ವಿದೆ. ಜೀವಂತ ಕುರಿಯೊಂದನ್ನು ತಲೆಕೆಳಗಾಗಿ ಮರಕ್ಕೆ ಕೆಂಪು ದಾರದಿಂದ ನೇಣು ಹಾಕುವುದರೊಂದಿಗೆ ಬಲಿ ನೀಡಲಾಗುತ್ತದೆ. ಈ ಬಗೆಯ ವಿಚಿತ್ರ ಹರಕೆಯನ್ನು ಕೊಪ್ಪಳ ಜಿಲ್ಲೆಯ ಇಳಕಲ್ಲ ಗುಡ್ಡ, ಗಿಣಿಗೇರ, ಇಂದರಗಿ, ವೆಂಕಟಾಪುರ, ಚಿಲ್ಕಮುಕಿ, ಲೇಬಗೇರಾ ಮುಂತಾದ ಊರುಗಳಲ್ಲಿ ಕಾಣಬಹುದಾಗಿದೆ. ಜನ ತಿರುಗಾಡುವ ದಾರಿಗಳ ಪಕ್ಕದಲ್ಲಿ ಕುರಿಗಳನ್ನು ತಲೆಕೆಳಗು ಮಾಡಿ ತೂಗು ಹಾಕುವುದು ರೂಢಿ. ಮಂದೆಯ ಕುರಿಗಳಲ್ಲಿ ಯಾವುದೇ ಒಂದಕ್ಕೆ ರೋಗ ಬಂದರೂ ಒಂದು ಮರಿಯನ್ನು ಅಮ್ಮನಿಗೆ ಮೇಲಿನ ರೀತಿಯಲ್ಲಿ ಬಲಿಕೊಡುತ್ತಾರೆ. ಹೀಗೆ ಕಾಲಿಗೆ ಕೆಂಪು ದಾರವನ್ನು ಕಟ್ಟಿಸಿಕೊಂಡು, ಮರದ ರೆಂಬೆಯಲ್ಲಿ ನೇತಾಡುವ ಕುರಿ ಮರಿ ನೀರು, ಆಹಾರವಿಲ್ಲದೆ ಅರಚಿ ಒದ್ದಾಡಿ, ರಕ್ತಕಾರಿ ಸಾಯುತ್ತದೆ. ಹೆದ್ದಾರಿ ಬದಿಯಲ್ಲಿ ಬರುವ ಹುಣಿಸೆ, ಆಲ, ಕರಿಜಾಲಿ, ಬಸುರಿ ಅಥವಾ ಬಾರೆ ಮರಗಳೇ ಬಲಿಕಂಬಗಳು.