ಮಧುಗಿರಿ ಪಟ್ಟಣದ ಜೋಳೆನ ಹಳ್ಳಿಕೆರೆ ತುಂಬಿದಾಗ ಅಲ್ಲಿಯ ರೈತರು ನೀರಿಗೆ ಮಾಡುವ ಪೂಜೆ. ಕೆರೆ ತುಂಬಿದಾಗ ಸಂಪ್ರದಾಯವಾಗಿ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ, ಕೆರೆಗೆ ಹಾಲು ತುಪ್ಪವನ್ನು ತರ್ಪಣ ನೀಡುತ್ತಾರೆ. ಅಂದು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಆ ವರ್ಷ ಬೆಳೆಯುವ ಬೆಳೆಯ ಬಗ್ಗೆ ಚರ್ಚಿಸುತ್ತಾರೆ. ಕೆರೆಯ ನೀರಿನ ಪೂಜೆ ಮುಂದಿನ ಕೃಷಿಯ ಆಗುಹೋಗುಗಳನ್ನು ಚರ್ಚಿಸುವ ವೇದಿಕೆ ಯಾಗುತ್ತದೆ. ಕೆರೆಯಲ್ಲಿ ನೀರು ತುಂಬಿದಾಗ ಧಣಿಗಳ ಆದೇಶದಂತೆ ಗುರಿಕಾರನು ತಳವಾರನಿಗೆ ವಿಷಯ ತಿಳಿಸುತ್ತಾನೆ. ತಳವಾರನು ಪ್ರತಿ ಹಳ್ಳಿಯಲ್ಲಿ ಡಂಗುರ ಸಾರಿ, ಎಲ್ಲ ಅಚ್ಚುಕಟ್ಟುದಾರರನ್ನು ಮಧುಗಿರಿ ಪಟ್ಟಣದ ಪ್ರಖ್ಯಾತ ಗ್ರಾಮದೇವತೆಯಾದ ದಂಡಿನ ಮಾರಮ್ಮನ ದೇವಸ್ಥಾನದ ಬಳಿ ಸೇರಲು ತಿಳಿಸುತ್ತಾನೆ. ಅಲ್ಲಿಯ ವಿಶೇಷವೆಂದರೆ ಆ ಊರಿನ ಮುನ್ನೂರು ಜನ ರೈತರೂ ಸೇರುವುದು. ನೀರುಗಂಟಿ ಮತ್ತು ಪಣ್ಣೆಗ್ರಾಮದ ರೈತರ ಲೆಕ್ಕಾಚಾರದಂತೆ ಕರೆಯ ನೀರಿನ ಮಟ್ಟ ನೋಡಿಕೊಂಡು ಬೆಳೆ ಪದ್ಧತಿಯನ್ನು ಚರ್ಚಿಸುತ್ತಾರೆ. ಕೆರೆ ಪೂರ್ಣ ತುಂಬಿದರೆ ಆ ವರ್ಷ ಭತ್ತ ಬೆಳೆಯಲು ತೀರ್ಮಾನಿಸುತ್ತಾರೆ. ಅಲ್ಲದೇ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ತಡಿ ಫಸಲನ್ನು ಬೆಳೆಯ ನಿರ್ಧರಿಸುತ್ತಾರೆ. ಅಲ್ಪಸ್ವಲ್ಪ ತುಂಬಿದಾಗ ಕಡ್ಡಾಯವಾಗಿ ಎಲ್ಲಾ ರೈತರು ತಡಿಫಸಲನ್ನು ಬೆಳೆಯಲು ಮಾತ್ರ ಒಪ್ಪಿಗೆ ಕೊಡುತ್ತಾರೆ. ಈ ಚೋಳೆನಹಳ್ಳಿ ಕೆೆಗೆ 300 ಜನ ರೈತರು ಸಾಗುವಳಿದಾರರು ಮಧುಗಿರಿ ಪಟ್ಟಣ ಕಂಬತ್ತಹಳ್ಳಿ ಮತ್ತು ವೀರಮಾನಹಳ್ಳಿಯ ರೈತರೇ ಈ ಕೆರೆಯ ಅಚ್ಚುಕಟ್ಟುದಾರರು.