ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಮಾಧವ ಮಂತ್ರಿ ಮತ್ತು ರಾಮಸ್ವಾಮಿ ನಾಲಾ ವ್ಯಾಪ್ತಿಯಲ್ಲಿ ಭತ್ತದ ನಾಟಿ ಮುಗಿದ ನಂತರ ಮಹಿಳೆಯರು ನಾಟಿ ಹಬ್ಬವನ್ನು ಮಾಡುತ್ತಾರೆ. ಇಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ. ಅಂದು ಮಹಿಳೆಯರು ತಮ್ಮ ಇಷ್ಟದೇವರ ಗುಡಿಗೆ ಬೆಳಗಿನ ಜಾವವೇ ಹೋಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಮನೆಗೆ ಬಂದು ಪತಿಗೆ ಹಾಗೂ ಮಕ್ಕಳಿಗೆ ಇಷ್ಟವಾದ ವಸ್ತುಗಳನ್ನು ತಂದುಕೊಟ್ಟು ಸಂತೈಸುತ್ತಾರೆ. ಹಬ್ಬ ನಮ್ಮದು,  “ನಾವು ನಮಗೆ ಇಷ್ಟ ಬಂದ ಹಾಗೆ ಇರುತ್ತೇವೆ. ಗಂಡಸರನ್ನು ಖುಷಿ ಪಡಿಸುತ್ತೇವೆ ” ಎಂದು ಬೀಗುತ್ತಾರೆ. ಅಲ್ಲಿಯ ಬನದ ದೇವರಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಹಾಡು, ನೃತ್ಯದಲ್ಲಿ ತೊಡಗುತ್ತಾರೆ. ಕೆಲವು ಭಾಗಗಳಲ್ಲಿ  ಭತ್ತದ ಗದ್ದೆಗಳ ದಂಡೆಯ ಮೇಲೆ ಈ ಹಬ್ಬವನ್ನು ಆಚರಿಸುತ್ತಾರೆ. ಹಾಡು, ಕುಣಿತದ ನಂತರ ಹಳ್ಳಿ ಮರದಯ್ಯ ಹಾಗೂ ಬಳಗಾಜಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಒಂದು ಐತಿಹ್ಯದ ಪ್ರಕಾರ ಹಳ್ಳಿಮರದಯ್ಯ ಹಾಗೂ ಬಳಗಾಜಮ್ಮ ಎಂಬ ಪ್ರೇಮಿಗಳ ಪ್ರೇಮ ಭಗ್ನಗೊಂಡು ಹುತಾತ್ಮರಾದ ಸ್ಥಳ ಇದು ಎಂದು ಹೇಳುತ್ತಾರೆ. ಅವರುಗಳ ಹಾಡಿನಲ್ಲಿ ಗಂಗರಸರ ರಾಜಧಾನಿ ತಲಕಾಡಿನ ಹಿರಿಮೆ, ಗ್ರಾಮದೇವತೆ ಬಂಡರಸಮ್ಮನ ಬಗೆಗೆ, ಮಹಿಷಾಸುರ ಮರ್ದಿನಿಯು ಮಹಿಷಾಸುರನ ಕೊಂದು ಮರದಲಗೆ ತೋಳಿವಾಗ, ಕಬ್ಬಿನ ಗದ್ದೆಯೊಳಕ್ಕೆ ಹೊಕ್ಕು ಕದ್ದು ಕಬ್ಬು ತಿನ್ನುವಾಗ ವಾರಸುದಾರ ಬಂದದ್ದನ್ನು ನೋಡಿ ಹೆದರಿ ನಡುಗಿ ಹೋದ ಸನ್ನಿವೇಶವನ್ನೂ ಬಿಡದೇ ಹಾಡುತ್ತಾರೆ : “ಕಬ್ಬಿನ ಗದ್ದೆ ಹೊಕ್ಕಿರುವೆ, ಕಬ್ಬಾ ಮುರಿದಿರುವೆ”.

ಈ ಹಬ್ಬದ ಆಚರಣೆ ಮಾಡುವವರು ಬಡವರ್ಗದವರೆ ಹೆಚ್ಚು. ಗೌಡರ ಜಮೀನಿಗೆ ಕೆಲಸಕ್ಕೆ ಹೋದಾಗ ಹಬ್ಬದ ತಯಾರಿಗಾಗಿ ಬೇಗ ಬಿಡಿ ಎಂದು ಗೌಡರನ್ನು ಕೇಳುವ ಹಾಡುಗಳು ಇಲ್ಲಿವೆ. ಹತ್ತಾಳ ಕಟ್ಕೊಂಡು, ಹಿತ್ತಾಳೆ ಕಾಸ್ಕೊಂಡು, ಹೊತ್ತಾಗಿ ನಮ್ಮ ಗೇಯ್ಯುವ ಗೌಡ್ರು, ಹೊತ್ತಾಯ್ತು ನಮ್ಮ ಬಿಡಿ ಬನ್ನಿ,

ನಾಟಿ ಹಬ್ಬದಲ್ಲಿ ಆಯಾಯ ಗ್ರಾಮದ ಹೆಣ್ಣುಮಕ್ಕಳು ಅಲ್ಲಿನ ಗ್ರಾಮದೇವತೆಯ ಗುಡಿಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಬಾಳೆ ಎಲೆ, ಬುತ್ತಿ, ಸಕ್ಕರೆ, ಕಾಯಿ ಪ್ರಸಾದ ಹೊತ್ತು ತಮಟೆ ವಾಲಗದೊಂದಿಗೆ ದೇವರ ಗುಡಿಗೆ ಹೋಗುವುದು ಪದ್ಧತಿ.