ಕಾಮನ ಹಬ್ಬದಲ್ಲಿ ಊರಿನ ನೇಕಾರರು ರಚಿಸುವ ಕಾಮಣ್ಣಮೂರ್ತಿ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತ್ತು ಸುತ್ತಲಿನ ಭಾಗಗಳಲ್ಲಿ ನೋಡಬಹುದು. ಬಯಲು ಪ್ರದೇಶದಲ್ಲಿ ಒಂದು ಚೌಕಾಕಾರದ ಮಗ್ಗವನ್ನು ಸಂಪ್ರದಾಯಬದ್ಧವಾಗಿ ಸೃಷ್ಟಿಸಿ, ಅದನ್ನು ನೇಕಾರನೊಬ್ಬನು ತನ್ನ ಪತ್ನಿಯ ಜೊತೆ ನೇಯುವುದರಲ್ಲಿ ಮಗ್ನನಾಗಿರುತ್ತಾನೆ. ತಮಾಷೆಯಾಗಿ ಕಂಡರೂ ನೇಕಾರ ಸುಂದರ ಬದುಕು ಬಾಳುತ್ತಾನೆ ಎನ್ನುವ ಸಂಕೇತವಾಗಿ ಈ ನೇಯು ಕಾಮಣ್ಣ ಕಂಡುಬರುತ್ತದೆ. ಪುರುಷನೇ ಇಲ್ಲಿ ನೇಕಾರನ ಮಡದಿಯ ಪಾತ್ರವನ್ನು ಹಾಕಿಕೊಂಡಿರುತ್ತಾನೆ. ಈ ದೃಶ್ಯವನ್ನು ಅಬಾಲವೃದ್ಧರಾಗಿ ಎಲ್ಲರೂ ಆನಂದದಿಂದ ವೀಕ್ಷಿಸುತ್ತಾರೆ. ಮಗ್ಗಕ್ಕಾಗಿ ಸಾಲ ನೀಡಿದ ಸಾಹುಕಾರ ನೇಕಾರ ದಂಪತಿಗಳನ್ನು ಸಾಲ ಕೊಡೆಂದು ಪೀಡಿಸುವ ರೀತಿ ನೆರೆದ ಜನರನ್ನು ನಕ್ಕುನಲಿಸುತ್ತದೆ. ಒಂದು ಕಡೆ ಮನರಂಜನೆ ಯಾದರೂ ಅದರ ಒಡಲಲ್ಲಿ ನೇಕಾರರ ಕಷ್ಟದ ಬದುಕಿದೆ, ಸಾಲಗಾರರ ಕಾಟದ ಮಜಲುಗಳಿವೆ ಎನ್ನುವುದನ್ನು ಕಾಮಣ್ಣ ಎಳೆ ಎಳೆಯಾಗಿ ಜನರ ಮುಂದೆ ತೆರೆದು ತೋರುತ್ತಾನೆ. ನಂತರ ಬೂದಗಾಮನನ್ನು ಸುಟ್ಟು, ಅದರ ಬೆಂಕಿಯಿಂದ ಮನೆಯ ಒಲೆಯ ಬೆಂಕಿಯನ್ನು ಹೊತ್ತಿಸಿಕೊಂಡು ಕಡಲೆ ಹುರಿದು ತಿನ್ನುತ್ತಾರೆ.

ಕಾಮದಹನದ ಮರುದಿನ ಎಲ್ಲರೂ ಸೇರಿ ಓಕುಳಿಯಾಡುವ, ಪರಸ್ಪರರು ಬಣ್ಣ ಎರಚಿಕೊಳ್ಳುವ ಆಚರಣೆಯಲ್ಲಿ ಭಾಗವಹಿಸುತ್ತಾರೆ.