ಹಿರಿಯರ ಹಬ್ಬವಾದ ಪಿತೃಪಕ್ಷವು ಕರ್ನಾಟಕದಾದ್ಯಂತ ಆಚರಣೆಗೊಳ್ಳುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಈ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಕಿತ್ತು ತಿನ್ನುವ ಬಡತನವಿದ್ದರೂ ಈ ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಾರೆ. “ಹೊಲ ಮಾರಿಯಾದರೂ ಹಬ್ಬ ಮಾಡು” ಎನ್ನುವ ನಾಣ್ಣುಡಿ ಹಬ್ಬಕ್ಕಾಗಿ ಸಾಲವನ್ನು ಮಾಡಲು ಜನ ಅಂಜುವುದಿಲ್ಲ ಎನ್ನುವುದನ್ನು ಧ್ವನಿಸಿದೆ.

ಮಹಾಲಯ ಅಮಾವಾಸ್ಯೆಯ ಹಿಂದೆ-ಮುಂದಿನ ಶುಕ್ರವಾರ ಅಥವಾ ಮಂಗಳವಾರವನ್ನು ಆಯ್ಕೆ ಮಾಡಿಕೊಂಡು ಹಬ್ಬವನ್ನು ನಿಶ್ಚಯ ಮಾಡಿಕೊಳ್ಳುತ್ತಾರೆ. ಕೆಲವರು ಆಯುಧ ಪೂಜೆಯ ದಿನವೂ ಮಾಡುವುದಿದೆ. ಹಿರಿಯರ ನೆನೆಯುವ ಈ ಹಬ್ಬ ಒಂದೊಂದು ಭಾಗದಲ್ಲಿ ಒಂದೊಂದು ಬಗೆಯಲ್ಲಿರುತ್ತದೆ. ಕೆಲಭಾಗಗಳಲ್ಲಿ ಎಲ್ಲಾ ಹಬ್ಬಗಳಿಗಿಂತ ದೊಡ್ಡ ಹಬ್ಬವಾಗಿ ಆಚರಿಸಿದರೆ, ಕೆಲ ಕಡೆ ಎಡೆ ಇಟ್ಟು ಆಚರಿಸುತ್ತಾರೆ.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು, ರಾಮನಗರ, ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚು ಭಯ-ಭಕ್ತಿಯಿಂದ ಆಚರಿಸುತ್ತಾರೆ.

ನಿಧನರಾಗಿರುವ ತಂದೆ, ತಾಯಂದಿರಿಗೆ ಗೌರವ ಸಲ್ಲಿಸುವುದೇ ಪಿತೃಪಕ್ಷ ಹಬ್ಬದ ಉದ್ದೇಶ ಆಗಿದೆ. ಹಬ್ಬದ ದಿನ ರಾತ್ರಿ ಕೋಣೆ ಯೊಂದರಲ್ಲಿ ಕಳಶವನ್ನು ಇಟ್ಟು, ಹೊಸ ಬಟ್ಟೆಗಳನ್ನು ಉಡಿಸಿ, ಎಡೆ ಇಟ್ಟು ಪೂಜಿಸುತ್ತಾರೆ. ಹಿರಿಯರು ಇಷ್ಟಪಡುತ್ತಿದ್ದ ಬಗೆ ಬಗೆಯ ಭಕ್ಷ್ಯ ಭೋಜನಗಳಾದ ಮೀನು, ಕುರಿ, ಕೋಳಿ ಮಾಂಸದಿಂದ ಮಾಡಿದ ಅಡುಗೆ, ಬಗೆ ಬಗೆಯ ಹಣ್ಣುಗಳು, ಚಿಕ್ಕಿನುಂಡೆ, ಚಕ್ಕುಲಿ, ನಿಪ್ಪಟ್ಟು ಕೋಡುಬಳೆ, ಕಜ್ಜಾಯ, ಶ್ಯಾವಿಗೆ, ರಾಗಿ ಮುದ್ದೆ, ಮೈಸೂರು ಪಾಕ್ ಸೇರಿದಂತೆ ಬೇಕರಿಯಿಂದ ತಂದ ಬಗೆಬಗೆಯ ತಿನಿಸುಗಳು ಅಲ್ಲದೆ ಅವರು ಬಳಸುತ್ತಿದ್ದ ಹೊಗೆಸೊಪ್ಪು, ನಶ್ಯ, ಬೀಡಿ, ಸಿಗರೇಟು ಮದ್ಯವನ್ನು ಇಟ್ಟು ಧೂಪ ಹಾಕುತ್ತಾರೆ. ಕೆಲವು ಭಾಗಗಳಲ್ಲಿ ಹಬ್ಬದ ದಿನ ಬರೀ ಸಸ್ಯಾಹಾರಿ ಭಕ್ಷ್ಯಗಳನ್ನೇ ಎಡೆ ಇಟ್ಟು ಪೂಜಿಸುವ ಪದ್ಧತಿ ಇದ್ದು, ಮಾರನೇ ದಿನ ಮಾಂಸಾಹಾರಿ ತಿನಿಸುಗಳನ್ನು ಮಾಡಿ ಎಡೆ ಇಟ್ಟು ಪೂಜಿಸಿ, ಬಂಧು-ಬಾಂಧವರನ್ನು, ಸ್ನೇಹಿತರನ್ನು ಕರೆದು ಭರ್ಜರಿ ಭೋಜನ ಏರ್ಪಡಿಸುವುದು ರೂಢಿ. ಅಲ್ಲದೆ ಬಂಧುಗಳಿಗೆ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕರ್ಜಿಕಾಯಿ, ಪಕೋಡ, ಮೊದಲಾದ ತಿನಿಸುಗಳನ್ನು ಚೀಲದಲ್ಲಿ ಹಾಕಿ ಕೊಟ್ಟು ಕಳುಹಿಸುವ ಪದ್ಧತಿಯನ್ನು ಹಾಸನ ಜಿಲ್ಲೆಯ ಹಲವು ಕಡೆ ರೂಢಿಯಲ್ಲಿದೆ.

ವ್ಯಕ್ತಿ ಸತ್ತ ಮೇಲೆ ಇನ್ನಿಲ್ಲದ ಭಯ-ಭಕ್ತಿ ತೋರುವ ಜನ ಬದುಕಿದ್ದಾಗ ಹಿರಿಯರನ್ನು ಕಡೆಗಣಿಸುವ ಪದ್ಧತಿ ವಿಪರ್ಯಾಸವಾಗಿದೆ.