ತಿರುಪತಿಗೆ ಯಾತ್ರೆ ಕೈಗೊಂಡ ಭಕ್ತರನ್ನು ಊರಿನ ಜನರು ಒಟ್ಟಾಗಿ ಸೇರಿ ಬೀಳ್ಕೊಡುವ ಆಚರಣೆ. ಊಟದಲ್ಲಿ ಬಾಡು ಹಾಗೂ ಹೆಂಡದ ಪಾನೀಯಗಳಿರಲೇಬೇಕು ಎಂಬುದು ಈ ಆಚರಣೆಯ ವಿಶೇಷ.  ಇಲ್ಲಿ ಮಾಂಸ, ಹೆಂಡ, ಪ್ರಸಾದ ಹಾಗೂ ತೀರ್ಥದ ಸ್ಥಾನ ಪಡೆದು ಪೂಜನೀಯವಾಗಿವೆ. ಪಾಣ ಸೇವೆಯನ್ನು ಪಾನೀಯ ಸೇವೆ ಎಂದು ಕರೆಯುತ್ತಾರೆ. ಯಾತ್ರೆ ಹೊರಡುವ ದಿನ ಊರಿನವರೆಲ್ಲ ನಿಗದಿತ ಸ್ಥಳದಲ್ಲಿ ಸೇರಿ ಬಾನಿ, ಅರವಿ, ಮಡಕೆಗಳಲ್ಲಿ ಹುಳಿಹೆಂಡ, ಬೋಂಡ, ವಡೆ, ಖಾರದ ತಿನಿಸುಗಳನ್ನೆಲ್ಲ ಒಂದು ಭಾಗದಲ್ಲಿಟ್ಟು, ಅಲ್ಲಿಯೇ ದೇವರನ್ನು ಮತ್ತು ಜೋಳಿಗೆಗಳನ್ನಿಟ್ಟು, ದಾಸಯ್ಯ ಪೂಜಿಸುತ್ತಾನೆ. ತೀರ್ಥವಾಗಿ ಹೆಂಡವನ್ನು, ಪ್ರಸಾದವಾಗಿ ಮಾಂಸವನ್ನು ನೀಡುತ್ತಾನೆ.

ಹಿಂದೆ ತಿರುಪತಿ ಯಾತ್ರೆ ಹೊರಟವರು ಹಿಂತಿರುಗಿ ಊರಿಗೆ ಬರುವುದು ಅಪರೂಪವಾಗಿತ್ತು. ಯಾತ್ರೆಯ ವೇಳೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ದಾರಿಯ ಮಧ್ಯೆ ತೀರಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಯಾತ್ರೆಗೆ ಹೊರಟವರನ್ನು ಜೀವನದಲ್ಲಿ ಇದೇ ಕೊನೆ ಬಾರಿ ಭೇಟಿ ಎನ್ನುವ ಹಾಗೆ ಆಲಿಂಗಿಸಿಕೊಂಡು ಬೀಳ್ಕೊಡುತ್ತಿದ್ದರು. ಅಂದು ಹತ್ತಾರು ಕುರಿ, ಕೋಳಿಗಳನ್ನು ಕಡಿದು ಮಾಂಸದ ಔತಣ ಏರ್ಪಡಿಸಿ, ಕುಡಿಯಲು ಹೆಂಡವನ್ನು ಕೊಡುತ್ತಿದ್ದರು. ಈಗ ಈ ಆಚರಣೆ ಇಲ್ಲ.