ಉತ್ತರ ಕರ್ನಾಟಕದಲ್ಲಿ ಸೀಗಿಹುಣ್ಣಿಮೆ ಸಂದರ್ಭದಲ್ಲಿ ಆಚರಿಸುತ್ತಾರೆ. ಸುಗ್ಗಿಯ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಬರುವ ವಿಜಯದಶಮಿಯಲ್ಲಿ ಬರುವ ಸೀಗಿ ಹುಣ್ಣಿಮೆಯಲ್ಲಿ ರೈತರು ಹಬ್ಬವನ್ನು ಆಚರಿಸುತ್ತಾರೆ. ಅಂದು ಪಾಂಡವರ ಎಡೆಗಾಗಿಯೇ ವಿಶೇಷವಾಗಿ ತಯಾರಿಸಿದ ಕರಿಗಡಲು ಎನ್ನುವ ತಿನಿಸನ್ನು ಮಾಡುತ್ತಾರೆ. ತಮ್ಮ ಹೊಲದ ಮಧ್ಯದಲ್ಲಿ ಐದು ಕಲ್ಲುಗಳನ್ನು ಸಾಲಾಗಿ ಇರಿಸಿ, ಸ್ವಲ್ಪ ದೂರದಲ್ಲಿ ಸಣ್ಣಕಲ್ಲನ್ನು ಇಡುತ್ತಾರೆ. ಎಲ್ಲಾ ಕಲ್ಲುಗಳಿಗೂ ಕೆಮ್ಮಣ್ಣು ಹಚ್ಚುತ್ತಾರೆ. ಐದು ಕಲ್ಲುಗಳನ್ನು ಪಾಂಡವರೆಂದು, ಒಂದು ಕಲ್ಲನ್ನು ಕಳ್ಳಪ್ಪ (ಕರ್ಣ)ನೆಂದು ಕರೆಯುತ್ತಾರೆ.

ಆರು ಕಲ್ಲುಗಳನ್ನು ಅರಿಶಿಣ, ಕುಂಕುಮ ಹಾಗೂ ಹೂಗಳಿಂದ ಶೃಂಗರಿಸಿ, ಎಡೆ ಮಾಡುತ್ತಾರೆ. ಆರತಿ ಎತ್ತಿ ಪೂಜಿಸಿದ ನಂತರ ಕಳ್ಳಪ್ಪನ ಎದುರಿನ ಎಡೆಯನ್ನು ಅಲ್ಲಿಯೇ ಹುಗಿಯುತ್ತಾರೆ.  ಪಾಂಡವರ ಕಲ್ಲಿನ ಎಡೆಗಳನ್ನು ಎತ್ತಿ, ಅದರ ತಿನಿಸನ್ನು ಸಣ್ಣ ಸಣ್ಣ ಚೂರು ಮಾಡಿ, ‘ಹುಲ್ಲುರಿಗೂ ಚಲಾಂಬ್ರಗೊ’ ಎಂದು ಕೊಡುತ್ತ ಹೊಲದ ಮೇಲೆ ಚಲ್ಲಾಡುತ್ತಾರೆ. ಇದನ್ನು ‘ಚರಗ’ ಚಲ್ಲುವುದು ಎಂದು ಕರೆಯುತ್ತಾರೆ. ಹೀಗೆ ಮಾಡು ವುದರಿಂದ ಹೊಲದಲ್ಲಿ ಬೆಳೆ ಸಮೃದ್ಧವಾಗಿ ಬರುವುದೆಂದು ನಂಬುತ್ತಾರೆ.

ಪಾಂಡವರ ಪೂಜೆಯನ್ನು ಎಳ್ಳೆಮವಾಸ್ಯೆಯಲ್ಲಿಯೂ ಆಚರಿ ಸುತ್ತಾರೆ. ಪಾಂಡವರು ವನವಾಸ ವನ್ನು ಮುಗಿಸಿಕೊಂಡು ಹಿಂದಿರುಗಿದ ನೆನಪಿಗಾಗಿ ಪಾಂಡವರ ಪೂಜೆ ನಡೆದು ಬಂದಿದೆಯೆಂದೂ, ಕುರುಕ್ಷೇತ್ರದ ಯುದ್ಧದ ಸಂದರ್ಭದಲ್ಲಿ ಕರ್ಣನಿಗೆ ತನ್ನ ಜನ್ಮರಹಸ್ಯ ತಿಳಿದ ಮೇಲೆ ತನ್ನ ತಮ್ಮಂದಿರಾದ ಪಾಂಡವರೊಂದಿಗೆ ಸೇರಿಕೊಳ್ಳದೇ ಸ್ವಜನದ್ರೋಹ ಕುರುಹಾಗಿ ಕಲ್ಲಪ್ಪಕಲ್ಲು ಸೃಷ್ಟಿಯಾಗಿ, ಪಾಂಡವರ ಕಲ್ಲುಗಳ ಹಿಂದೆ ಇಡಲಾಯಿತೆಂದು ಹೇಳುತ್ತಾರೆ. ಕರ್ಣನಿಗೆ ಇಡುವ ಎಡೆ, ಕುಂತಿ, ಕರ್ಣನಿಗಿತ್ತ ಅಮೃತ ಕಳಶವೆಂದೂ, ಅದು ಯಾರಿಗೂ ತಿಳಿಯದಿರಲೆಂದೂ ಅದನ್ನು ಅಲ್ಲಿಯೇ ಮುಚ್ಚುತ್ತಾರೆಂದು ಜನ ಹೇಳುತ್ತಾರೆ.

ದೀಪಾವಳಿಯಲ್ಲಿ ಪಾಂಡವರ ಪೂಜೆ ಮಾಡುವ ಪದ್ಧತಿ ಇದೆ. ಹಸುವಿನ ಸಗಣಿಯಿಂದ ಐದು ಗೊಂಬೆಗಳನ್ನು ಮಾಡಿ, ಸಗಣಿ ಪಾತ್ರೆಯಲ್ಲಿರಿಸಿ, ಹೊನ್ನಂಬ್ರಿ, ಆಣ್ಣಿ, ಉತ್ಪಾಣಿ ಇತ್ಯಾದಿ ಹೂಗಳಿಂದ ಶೃಂಗರಿಸಿ, ಪೂಜಿಸುತ್ತಾರೆ. ಪೂಜೆಯ ನಂತರ ತಮ್ಮ ಮನೆಯ ಮಾಳಿಗೆ ಮೇಲೆ ಐದು ದಿನಗಳವರೆಗೆ ಇರಿಸಿ, ನಂತರ ತೋಟದಲ್ಲಿ ಅವುಗಳನ್ನು ಪೂರ್ವ ದಿಕ್ಕಿಗೆ ಮುಖಮಾಡಿ ಹುಗಿಯುತ್ತಾರೆ. ಅಲ್ಲದೆ ಗೂಡಿನ ಪೂಜೆ ಮಾಡುವ ಸಂದರ್ಭದಲ್ಲಿಯೂ ಪಾಂಡವರ ಪೂಜೆ ಮಾಡುವ ಪದ್ಧತಿ ಇದೆ.

ಮಹಾನವಮಿ, ದೀಪಾವಳಿ ಹಬ್ಬಗಳಲ್ಲಿ ರೈತರು ಪಾಂಡವರನ್ನು ನೆನಪಿಸಿಕೊಳ್ಳುವ ರೂಢಿಯಿದೆ. ಮಹಾನವಮಿ ಹಬ್ಬದಂದು ಪಾಂಡವರು ಅಜ್ಞಾತವಾಸದಿಂದ ಹೊರಬಂದು ಬನ್ನಿಮಂಟಪದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ಹೊರಕ್ಕೆ ತಂದರಂತೆ. ಈ ಹಿನ್ನೆಲೆಯಲ್ಲಿಯೇ ಅಂದು ಗ್ರಾಮದೇವತೆಗಳು ಬನ್ನಿ ಮರಕ್ಕೆ ಹೋಗಿ, ಬನ್ನಿ ಎಲೆಗಳ ವಿನಿಮಯ ನಡೆಯುತ್ತವೆ. ಅಲ್ಲದೇ ಆಯುಧ ಪೂಜೆಯು ನಡೆಯುತ್ತದೆ. ಅಲ್ಲಿಂದ ಮುಂದೆ ದೀಪಾವಳಿಯವರೆಗೆ ಪಗಡೆ ಆಡುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಪಾಂಡವರ ಪೂಜೆಯು ನಡೆಯುತ್ತದೆ.