ಕರ್ನಾಟಕದ ಆಚರಣೆಗಳ ಮಾಹಿತಿಯುಳ್ಳ ಈ ಕೃತಿ ಜಾನಪದ ಅಧ್ಯಯನ ವಿಭಾಗದ ಯೋಜನೆಗಾಗಿ ಸಿದ್ಧಪಡಿಸಲಾಗಿದೆ. ಕರ್ನಾಟಕ ಜನಪದ ಆಚರಣೆಗಳ ಲೋಕ ದೊಡ್ಡದು. ಅವುಗಳನ್ನು ಹಿಡಿದಿಡಲು ಸುಮಾರು ನೂರಾರು ಸಂಪುಟಗಳೇ ಬೇಕಾಗುತ್ತದೆ. ದೀರ್ಘವಾದ ಸಮಯವು ಬೇಕು. ವಾರ್ಷಿಕ ಯೋಜನೆಗೆ ಇರುವ ಅವಧಿಯಲ್ಲಿ ನನಗೆ ಲಭ್ಯವಾಗಿರುವ ಆಚರಣೆಗಳ ಪ್ರಾಥಮಿಕ ಮಾಹಿತಿಗಳನ್ನು ಇಲ್ಲಿ ಕೊಡಲಾಗಿದೆ. ಅಂದರೆ ಆಚರಣೆಗಳು ನಡೆಯುವ ಸಂದರ್ಭ, ವಿಧಾನ, ನಂಬಿಕೆ. ನಿಷೇಧ, ಪದ್ಧತಿಗಳ – ಮಾಹಿತಿ ವಿವರ ಇಲ್ಲಿದೆ. ಇಲ್ಲಿರುವ ಒಂದೊಂದು ಆಚರಣೆಗಳು ವೈವಿಧ್ಯತೆಯಿಂದ ಕೂಡಿವೆ. ಅವುಗಳಲ್ಲಿ ಮಡುಗಟ್ಟಿದ ಪಾರಂಪರಿಕ ಜ್ಞಾನವಿದೆ. ಸಹಸ್ರಾರು ವರ್ಷಗಳ ಅನುಭವಗಳ ಪಾಕಗಳು ಇವು. ಸದಾ ಜೀವಮುಖಿಯಾಗಿರುವ ಅವು ಬಹುತ್ವವನ್ನು ಬೆಂಬಲಿಸುತ್ತವೆ. ಸಕ್ಕರೆ ಲೇಪನದ ಮಾತ್ರೆಗಳಿದ್ದಂತೆ. ಸಕಾಲದಲ್ಲಿ ಮನುಷ್ಯನನ್ನು ಎಚ್ಚರಿಸಿ, ಅನುಕೂಲಗಳನ್ನು ಪಡೆದುಕೊಳ್ಳುವಂತೆ ನಂಬಿಕೆಗಳ ಮೂಲಕ ಒತ್ತಾಯಿಸುತ್ತವೆ. ಅವುಗಳು ನೀಡುವ ದರ್ಶನ ಮತ್ತು ಜ್ಞಾನಗಳು ಆಧುನಿಕ ಜ್ಞಾನವನ್ನು ಮೀರಿಸುತ್ತವೆ. ನಿಸರ್ಗ ವ್ಯಾಪಾರಗಳಾದ ಸೂರ್ಯೋದಯ, ಚಂದ್ರೋದಯ, ವಿಕೋಪಗಳಾದ ಗುಡುಗು, ಸಿಡಿಲು, ಚಂಡಮಾರುತ ಇತ್ಯಾದಿಗಳ ಭಯವೇ ಅವುಗಳನ್ನು ದೈವೀಕರಿಸಿವೆ. ನಿಸರ್ಗದ ಶಕ್ತಿಯಿಂದ ಪಾರಾಗಲು ಹಾಗೂ ಶಮನ ಮಾಡುವ ಉದ್ದೇಶದಿಂದ ಆಚರಣೆಗಳು ಉದಿಸಿವೆ. ಮಾನವನ ಬದುಕನ್ನು ರೂಪಿಸುವಲ್ಲಿ, ಸಂಸ್ಕೃತಿಯ ಪೋಷಣೆಯಲ್ಲಿ, ನಾಗರಿಕತೆಯನ್ನು ಬೆಳೆಸುವಲ್ಲಿ ಸಂಪ್ರದಾಯ ಆಚರಣೆಗಳು ಮಹತ್ವದ ಪಾತ್ರ ವಹಿಸಿವೆ.

ದುಷ್ಟಶಕ್ತಿಗಳಿಂದ ತನ್ನನ್ನು ರಕ್ಷಿಸುವ ದೈವವನ್ನು ಸಂಪ್ರೀತಗೊಳಿಸುವಂತೆ ಪ್ರಾರ್ಥಿಸಿ ತನ್ನಿಷ್ಟದ ಆಹಾರ ಪದಾರ್ಥಗಳನ್ನು ಸಲ್ಲಿಸುತ್ತಾ ಬರಲಾಗಿದೆ. ತನಗೆ ಸಿಕ್ಕಾಗ ಸಂತೋಷ ಪಟ್ಟಿರುವುದು, ಸಿಗದಿದ್ದಾಗ ದುಃಖಪಟ್ಟಿರುವುದು; ಎರಡನ್ನು ಆಚರಣೆಗಳ ಮೂಲಕ ಜರುಗಿಸಿಕೊಂಡಿರುವುದು ಹಾಗೂ ಕಳೆದಿರುವುದನ್ನು ಮರೆಯಲು ಪ್ರಯತ್ನಿಸಲಾಗಿದೆ. ಅವುಗಳೆಲ್ಲವು ಅವನ ಅನುಭವದ ಹಿನ್ನೆಲೆಯಲ್ಲಿ ನಡೆಯುತ್ತಾ ಬಂದಿವೆ. ಕಾಲದ ಗಡಣದಲ್ಲಿ ನುಸುಳಿ ನುಸುಳಿ ಅದರ ಓರೆಕೋರೆಗಳನ್ನು ಕಳಚಿಕೊಂಡು ನೇರವಾಗಿ, ಅರ್ಥವುಳ್ಳ ಆಶಯ ಗಳಿಂದ ತುಂಬಿದ ಆಚರಣೆಗಳು ಉಳಿದು, ತಲೆಮಾರಿನಿಂದ ತಲೆಮಾರಿಗೆ ಹರಿಯಲಾರಂಭಿಸಿದವು. ಅವುಗಳಲ್ಲಿ ವಿಜ್ಞಾನವಿದೆ. ಮಾನವಿಕ ವಿಚಾರಗಳಿವೆ. ಈ ಜ್ಞಾನವನ್ನು ಪರಂಪರೆಯಿಂದ ಪರಂಪರೆಗೆ ಆಚರಣೆಗಳ ಮೂಲಕ ಸಾಗಿಸುತ್ತವೆ. ಒಟ್ಟಾರೆಯಾಗಿ ಅವು ಒಳಿತನ್ನು ತುಂಬಿಕೊಂಡು ಸದಾ ನಮ್ಮೊಂದಿಗೆ ಬರುತ್ತಿವೆ.

ಆಚರಣೆಗಳಲ್ಲಿ ಉಪಕಾರಿ ಪ್ರಾಣಿ, ಪಕ್ಷಿ, ಸಸ್ಯ ಹಾಗೂ ಪ್ರಾಕೃತಿಕ ವಸ್ತುಗಳನ್ನು ಪೂಜ್ಯನೀಯವಾಗಿ ಕಾಣಲಾಗಿದೆ. ಅವುಗಳ ಸಂರಕ್ಷಣೆಗಾಗಿ ಹಲವು ಬಗೆಯ ನಂಬಿಕೆ ನಿಷೇಧಗಳನ್ನು ಹೆಣೆಯಲಾಗಿದೆ. ಅವುಗಳು ಆಚರಣೆಗಳ ಮುಖಾಂತರ ಮತ್ತೆ ಮತ್ತೆ ಜೀವಂತ ಗೊಳ್ಳುತ್ತಿರುತ್ತವೆ. ಈ ಜೀವಂತಗೊಳಿಸುವ ಕ್ರಿಯೆ ದೊಡ್ಡದು. ಇದರಲ್ಲಿ ಜೀವಮುಖಿಯಾದ ಯಾವ ವಸ್ತುವು ನಾಶವಾಗಲೇಬಾರದು ಎನ್ನುವ ಎಚ್ಚರಿಕೆಯಿದೆ. ಆದರೆ ಆಧುನಿಕ ವ್ಯವಸ್ಥೆ ನಮ್ಮ ಪಾರಂಪರಿಕ ಜ್ಞಾನವನ್ನು ಮರೆಯಿಸುವ ಕುತಂತ್ರ ಮಾಡುತ್ತಿದೆ. ಇದಕ್ಕಾಗಿ ನಾನಾ ರೀತಿಯ ನಾಜೂಕಿನ ವೇಷಗಳನ್ನು ಧರಿಸುತ್ತಿದೆ. ಅದರ ಹಿಂದೆ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಹುನ್ನಾರವಿದೆ. ಆದರೆ ಈಗಿರುವ ಒಂದು ಸಂತೋಷದ ಸಂಗತಿ ಎಂದರೆ ಜನರು ಹಳೆಯದರತ್ತ ಹೊರಟಿದ್ದಾರೆ. ಆದರೆ ಇದು ಬೆರಳಣಿಕೆಯಷ್ಟು ಮಾತ್ರ. ಆಚರಣೆಗಳಲ್ಲಿ ಹುದುಗಿರುವ ಜೀವಮುಖಿ ಅಂಶಗಳನ್ನು ಗಮನಿಸಬೇಕು. ಅವುಗಳು ಸಾರುವ ಸಂದೇಶವನ್ನು ಅರಿಯಬೇಕು. ಅವುಗಳಲ್ಲಿರುವ ಆರೋಗ್ಯಪೂರ್ಣ ಜೀವನ, ಪ್ರಕೃತಿ ಸಂರಕ್ಷಣೆ ಮುಂತಾದವುಗಳ ಅರಿವಿನ ಸೂತ್ರಗಳನ್ನು, ನಂಬಿಕೆ, ನಿಷೇಧಗಳ ಮೂಲಕ ಅರ್ಥೈಸಿಕೊಳ್ಳಬೇಕು. ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶವನ್ನು ಪೂಜಿಸದ ಆಚರಣೆಗಳಿಲ್ಲ. ಮಣ್ಣು ಅಥವಾ ಸೆಗಣಿಯಿಂದ ಮಾಡಿದ ಗಣಪ ನೆಲವನ್ನು ಸಂಕೇತಿಸಿದರೆ, ಕಲಶದಲ್ಲಿರುವ ನೀರು ಜಲವನ್ನು ಸಂಕೇತಿಸುತ್ತದೆ. ದೀಪಗಳು ಅಗ್ನಿಯನ್ನು, ಸರ್ವವ್ಯಾಪಿಯಾಗಿದ್ದು ಸ್ಪರ್ಶ ಗುಣವನ್ನು ಹೊಂದಿರುವ ಗಾಳಿ, ವಾಯುವನ್ನು, ಆಳ ಅಗಲಗಳಿಲ್ಲದ ನಿರ್ವಾತ ಪ್ರದೇಶವು ಆಕಾಶವನ್ನು ಸಾಂಕೇತಿಸಿವೆ. ಪಂಚಭೂತಗಳ ಸಮಪ್ರಮಾಣದ ಮಿಲನದಿಂದ ಜೀವೋತ್ಪತ್ತಿಯಾಗುವುದು. ಮತ್ತೆ ಜೀವ ಲಯವಾಗಿ ಅಲ್ಲಿಯೇ ಸೇರುವುದು. ಇವು ಜನಪದ ಸಂಸ್ಕೃತಿಯ ಜ್ಞಾನ ವಿಶಾಲತೆಗೆ ಸಾಕ್ಷಿ ನೀಡಿವೆ. ಆಚರಣೆಗಳಲ್ಲಿ ನಿಸರ್ಗದ ಯಾವುದೇ ವಸ್ತು, ಪ್ರಾಣಿ, ಪಕ್ಷಿ, ಮರ, ಗಿಡ, ಕಲ್ಲು ಇತ್ಯಾದಿಗಳು ಸಮಯಾನುಸಾರ ಪೂಜ್ಯನೀಯವಾಗಿರುತ್ತವೆ. ವಿಜ್ಞಾನ ಹಾಗೂ ಮಾನವಿಕಗಳ ಜ್ಞಾನಪಾಕವಾಗಿದ್ದು, ಕಾಲಕಾಲಕ್ಕೆ  ಅಗತ್ಯವಿರುವ ವಸ್ತು-ವಿಚಾರಗಳ ಬಗೆಗೆ  ಗಮನಹರಿಸುವಂತೆ ಒತ್ತಾಯಿಸುತ್ತವೆ.

ನೀರು, ನೆಲ, ದೀಪ ಮತ್ತು ಸಸ್ಯವಿಲ್ಲದ ಪೂಜೆ ಇಲ್ಲವೆಂದೇ ಹೇಳಬೇಕು. ಕಲಶದಲ್ಲಿ ಮಣ್ಣಿನ ಮಡಕೆ, ಅದರಲ್ಲಿ ತುಂಬಿದ ನೀರು, ಅದರ ಕಂಠದಲ್ಲಿ ಸಿಂಗರಿಸಿದ ಎಲೆ, ಕಾಯಿ, ಹೂ ಹಾಗೂ ಕಲಶದ ತಳದಲ್ಲಿರುವ ಅಕ್ಕಿ ಇತ್ಯಾದಿಗಳು ಜೀವಮುಖಿ ವಸ್ತುಗಳಾಗಿವೆ. ಕಲಶ ಒಂದು ರೀತಿಯಲ್ಲಿ ಪಂಚಭೂತಗಳ ಸಂಕೀರ್ಣದ ಸಂಕೇತವಾಗಿ ಕಾಣುವುದು. ಅದರಲ್ಲಿ ನೀರು ಜೀವಸೃಷ್ಟಿ ಮತ್ತು ಪುಷ್ಠಿಗಳಿಗೆ ಪ್ರಾಣಾಧಾರ. ಆ ಕಾರಣಗಳಿಂದಾಗಿಯೇ ಎಲ್ಲಾ ಆಚರಣೆಗಳು ಜಲಕೇಂದ್ರಿತವೇ ಆಗಿವೆ. ದೈನಂದಿನ ಚಟುವಟಿಕೆಗಳಾದ ಶುಚಿತ್ವ, ಅಡುಗೆ, ಪಶುಪಾಲನೆ, ಔಷಧಿ, ಮಾಟ-ಮಂತ್ರ, ನಿಷೇಧ, ಕೆಡಕು, ನಿವಾರಣೆ ಮತ್ತು ಜೈವಿಕ ಅಗತ್ಯತೆಯಲ್ಲಿ ಬಳಕೆಯಾಗುವ ವಸ್ತುವಾಗಿದೆ. ಎಲ್ಲ ಬಗೆಯ ಜೀವಾಧಾರವಾಗಿರುವ ನೀರು, ಗಂಗೆಯಾಗಿ, ಮಳೆಯಾಗಿ, ನದಿಯಾಗಿ, ತೀರ್ಥವಾಗಿ ಪೂಜ್ಯನೀಯವಾಗಿದೆ. ನೀರನ್ನು ವಿವೇಚನೆಯಿಂದ ಬಳಸಬೇಕೆಂಬ ಸಂದೇಶವಿರುವುದು ಗಮನಾರ್ಹ ಸಂಗತಿ. ವಿಗ್ರಹದ ನೀರು, ತೆಂಗಿನಕಾಯಿ ನೀರು, ಬಾವಿ ಮತ್ತು ನದಿಗಳಿಂದ ಸಂಗ್ರಹಿಸಿದ ನೀರು ದೈವೀಶಕ್ತಿಯಿಂದ ಕೂಡಿದ್ದು, ತೀರ್ಥದ ರೂಪದಲ್ಲಿ ಸ್ವೀಕರಿಸಿದರೆ ಪಾಪ ಪರಿಹಾರವಾಗುತ್ತದೆನ್ನುವ ನಂಬಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಮಿತ ಬಳಕೆಯ ಬಗೆಗೆ ಮಾರ್ಗದರ್ಶನವಿದೆ.

ನದಿ, ಕೆರೆ, ಕಲ್ಯಾಣಿಗಳ ದಡದಲ್ಲಿನ ದೈವಗಳ ಗುಡಿಗಳು, ದೇವಾಲಯಗಳು ಹಾಗೂ ನದಿ ದಡದಲ್ಲಿನ ತೀರ್ಥಕೊಳಗಳು ನೀರಿನ ಜೀವಮುಖಿ ಅಂಶಗಳನ್ನು ಸದಾ ನಾಮಫಲಕದಂತೆ ಪ್ರತಿಫಲಿಸಿ, ಶುಚಿತ್ವಕ್ಕೆ ಒತ್ತಾಯಿಸುತ್ತವೆ. ಶುದ್ಧ ನೀರಿಗೆ ಔಷಧಿ ಗುಣವಿದೆ. ಮಾಟ-ಮಂತ್ರ ತಂತ್ರಾಚಾರಣೆಗಳಲ್ಲಿ ಬಳಸುವ ನೀರಿಗೆ ಕ್ಷುದ್ರ ಶಕ್ತಿಯನ್ನು ಬಿಡಿಸುವ ಮತ್ತು ರೋಗ ಗುಣಪಡಿಸುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ಶುದ್ಧವಾದ ನೀರನ್ನು ಕುಡಿಯುವುದರಿಂದ ನೂರಾರು ಕಾಯಿಲೆಗಳನ್ನು ತಡೆಗಟ್ಟಬಹುದೆಂದು ಭಾರತೀಯ ‘ಯೋಗ ವಿಜ್ಞಾನ’ ಸಂಶೋಧನಾ ಸಂಸ್ಥೆ ಖಚಿತಪಡಿಸಿದೆ. ಈ ಎಲ್ಲ ಜೀವಪರ ವಿಚಾರಗಳನ್ನು ಅನುಭವದಿಂದ ಅರಿತ ಜನಪದರ ಮನಸ್ಸು ನೀರನ್ನು ದೈವವಾಗಿಸಿ, ಆಚರಣೆಯ ಸಿಹಿಲೇಪನದೊಂದಿಗೆ ಇಂದಿಗೂ ವ್ಯವಸ್ಥಿತವಾಗಿ ನಡೆಯುವಂತೆ ಮಾಡುತ್ತದೆ.

ಜೀವನಾವರ್ತನ ಹಾಗೂ ವಾರ್ಷಿಕ ವರ್ತನದ ಆಚರಣೆಗಳು ಜಲಕೇಂದ್ರೀತವಾಗಿ ರುವುದನ್ನು ಗಮನಿಸಬಹುದು. ನಾಮಕರಣದಂದು ಐದು ಜನ ಮುತ್ತೈದೆಯರು ಬಾವಿಯಿಂದ ಹೊತ್ತು ತಂದ ತುಂಬಿದ ಕೊಡಗಳ ಸಾಕ್ಷಿಯಲ್ಲಿಯೇ ಮಗುವಿನ ಹೆಸರನ್ನು ಅಧಿಕೃತ ಗೊಳಿಸುತ್ತಾರೆ. ತುಂಬಿದ ಕೊಡ ತುಂಬು ಜೀವನದ ಸಂಕೇತವಾಗುತ್ತದೆ. ಋತುಮತಿಯಾದ ಸಂದರ್ಭದ ನೀರೆರೇಯುವ ಶಾಸ್ತ್ರ, ಮದುವೆಯಲ್ಲಿ ಜರುಗುವ ಗಂಗಮ್ಮನ  ಪೂಜೆ, ನದಿ, ಕೆರೆಗಳು ತುಂಬಿದಾಗ ಅರ್ಪಿಸುವ ಬಾಗಿನ, ಸಮುದಾಯಗಳಿಂದ ಬಹಿಷ್ಕಾರಗೊಂಡ  ವ್ಯಕ್ತಿಗಳಿಗೆ ಬೆಂಕಿ ಮತ್ತು ನೀರನ್ನು ನೀಡದಿರುವುದು. ವ್ಯಕ್ತಿಯ ಸಾವಿನ ಕ್ಷಣದಲ್ಲಿ ಬಾಯಿಗೆ ನೀರು ಹಾಕುವುದು, ಅಂತಿಮ ಸಂಸ್ಕಾರದಲ್ಲಿ ತುಂಬಿದ ಕೊಡವೊಂದನ್ನು ಹೊತ್ತು ಮೂರು ಸುತ್ತು ಬಂದು ನೆಲಕ್ಕೆ ಜರಿಯುವುದು. ಪ್ರಾಣಬಿಟ್ಟ ಸ್ಥಳದಲ್ಲಿ ಮಣೆಯ ಮೇಲೆ ತುಂಬಿದ ಕೊಡವನ್ನು ಇಡುವುದು, ಹನ್ನೆರಡನೇ ದಿನ ದೇವಮೂಲೆಯಲ್ಲಿ ನೀರು ತುಂಬಿದ ಗಡಿಗೆ ಇಟ್ಟು ಎಡೆ ಸಲ್ಲಿಸಿ,  ಸತ್ತ ವ್ಯಕ್ತಿಯನ್ನು ದೈವವಾಗಿಸುವುದು ಇತ್ಯಾದಿ ಆಚರಣೆಗಳಲ್ಲಿ ನೀರು ಮತ್ತು ಮನುಷ್ಯನ ಸಂಬಂಧವನ್ನು ಸಾಂಕೇತಿಕವಾಗಿ ಕಾಣಬಹುದು.

ಜಾತ್ರೆ ಹಬ್ಬಗಳಲ್ಲಿ ದೇವರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಸಾಗಿ ‘ಹೊಳೆಸ್ನಾನ’ ಮಾಡಿಸಿ ನೀರಿಗೆ ಪೂಜೆ ಸಲ್ಲಿಸುವುದು, ಅಲ್ಲಿಯೆ ಕೊಡವೊಂದನ್ನು ತುಂಬಿಸಿಕೊಂಡು ಮೆರವಣಿಗೆ ಯಲ್ಲಿ ಬಂದು ಕಲಶ ಪ್ರತಿಷ್ಠಾಪನೆ ಮಾಡುವುದು. ಜಾತ್ರೆ ಮುಗಿದ ಬಳಿಕ ಕಲಶದ ನೀರನ್ನು ಅದೇ ಜಲ ಮೂಲಕ್ಕೆ ವಿಸರ್ಜಿಸುವುದು, ದೇವರುಗಳ ‘ದೀಪೋತ್ಸವ’ ಆಚರಣೆ ಇನ್ನು ಮುಂತಾದ ಆಚರಣೆಗಳಲ್ಲಿ ನೀರಿನ ಮೂಲಗಳು ದೈವ ಸನ್ನಿಧಿಗಳಾಗಿ ಸ್ವೀಕಾರವಾಗಿರುವ  ಅಂಶ ಕಂಡುಬರುತ್ತದೆ.

ಬೆಟ್ಟ-ಗುಡ್ಡ ಪರ್ವತಗಳ ಶೃಂಗದಲ್ಲಿರುವ ಗುಡಿ ದೇವಾಲಯಗಳು ನಿಸರ್ಗ ಸೌಂದರ್ಯ ವನ್ನು ಕೆಡಿಸದಂತೆ ರಕ್ಷಿಸಿವೆ. ಪ್ರಕೃತಿಯ ಜೊತೆ ಜೊತೆಗೆ ಹೆಜ್ಜೆ ಹಾಕುವುದು ಒಳಿತೆನ್ನುವ ಸಂದೇಶ ರವಾನಿಸುತ್ತವೆ. ಜೀವಪರವಾದ ಆಚರಣೆಗಳು ಸೊರಗಿ ಶಕ್ತಿಹೀನವಾದದಂತೆ ಆಚರಣೆಗೊಳ್ಳುತ್ತವೆ. ಮನುಷ್ಯನ ಅತಿ ಆಸೆ, ತಾತ್ಸರ ಬುದ್ದಿಗಳು ಎಲ್ಲವನ್ನು ಲಾಭಮುಖಿ ಯಾಗಿಯೇ ನೋಡುವಂತೆ ಮಾಡಿವೆ. ದುಬಾರಿ ಜೀವನ ಕ್ರಮದಿಂದ ಪರಿಸರ ನಾಶ, ಬದುಕಿನ ಕ್ರಮದಲ್ಲಾದ ಬದಲಾವಣೆಯಿಂದಾಗಿರುವ ಜೀವಹಾನಿ, ಬಿರುಕು ಬಿಟ್ಟ ಮನುಷ್ಯ ಸಂಬಂಧಗಳು ಸೃಷ್ಟಿಸಿರುವ ಪರಿಹರಿಸಲಾರದ ಸಮಸ್ಯೆಗಳು ಇತ್ಯಾದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸರಿಯಾದ ಆಚರಣೆಗಳು ಸಮಸ್ಯೆಗಳು ಬರದಂತೆ ತಡೆಯುತ್ತವೆ. ಪ್ರದೇಶ, ಕಾಲ ಹಾಗೂ ಋತುಮಾನಗಳಲ್ಲಿ ಆಚರಣೆಗೊಳ್ಳುವ ಆಚರಣೆಗಳು ಉದ್ದೇಶ ಫಲಪ್ರದವಾಗಿರುತ್ತವೆ. ರಾತ್ರಿಯಲ್ಲಿ ನಡೆಸುವ ಆಚರಣೆಗಳನ್ನು ಹಗಲಲ್ಲಿ ಮಾಡುವುದಾಗಲಿ, ಹಗಲಿಲ್ಲ ನಡೆಯುವುದನ್ನು ರಾತ್ರಿಯಾಗಲಿ, ಗದ್ದೆಯಲ್ಲಿ ನಡೆಸುವುದನ್ನು ಮನೆಯಲ್ಲಿ ಆಚರಿಸುವುದಾಗಲಿ ಮಾಡಿದರೆ ಆ ಆಚರಣೆಗಳು ಫಲಕಾರಿಯಾಗುವುದಿಲ್ಲ. ಕೃಷಿಕರು ದೀಪಾವಳಿಯ ಕತ್ತಲು ರಾತ್ರಿಯಲ್ಲಿ ಸಾಮೂಹಿಕವಾಗಿ ತಮ್ಮ ತಮ್ಮ ಗದ್ದೆಗಳಿಗೆ ಕೋಲು ದೀಪ ಉರಿಸುವುದರಿಂದ ಪೈರಿಗೆ ಮುಂದೆ ಬರುವ ರೋಗವನ್ನು ಬರದಂತೆ ವುುಂಜಾಗ್ರತಾ ಕ್ರಮ ಅನುಸರಿಸಿದಂತಾಯಿತು. ಇದೇ ರೀತಿಯಲ್ಲಿ ಚರಗ ಚಲ್ಲುವುದರಲ್ಲಿಯೂ, ಕರಿಗೂಟ ಹಾಕುವುದರಲ್ಲಿಯೂ ಕಾಣಬಹುದು.

ಯುಗಾದಿ ಹಬ್ಬದಲ್ಲಿ ಬೇವು ಮತ್ತು ಬೆಲ್ಲವನ್ನು ತಿನ್ನಬೇಕು. ಗುಡ್ಡದಗೇರಿನ  ಕಾಯಿಯ ರಸದಿಂದ ತಿಲಕವಿಟ್ಟುಕೊಳ್ಳಬೇಕೆಂಬ ನಿಯಮವಿದೆ. ಇದು ಆರೋಗ್ಯಕ್ಕೆ ಪೂರಕವಾಗಿದೆ. ಯುಗಾದಿಯನ್ನು ಮಾಡುವುದು ಬೇಸಿಗೆಯ ಕಾಲದಲ್ಲಿ. ಬಿಸಿಲಿನ ತಾಪದಲ್ಲಿ ದೇಹ ಬೆಂದು ಹತ್ತು ಹಲವು ರೋಗಗಳಿಗೆ ತುತ್ತಾಗಬಹುದು. ಆ ಸಂದರ್ಭದಲ್ಲಿ ಬೇವು ಮತ್ತು ಬೆಲ್ಲವನ್ನು ಸೇವಿಸುತ್ತಿದ್ದರೆ ದೇಹ ತಂಪಾಗಿದ್ದು, ಆರೋಗ್ಯದಿಂದ ಕೂಡಿರುತ್ತದೆ. ನಾಗರ ಪಂಚಮಿಯಲ್ಲಿ ಮಾಡುವ ವಿವಿಧ ಬಗೆಯ ಉಂಡೆಗಳು ದೇಹಕ್ಕೆ ಬೇಕಾದ ಕೊಬ್ಬಿನಾಂಶವನ್ನು ಪೂರೈಸಿ, ದೇಹ ಸುಸ್ಥಿತಿಯಲ್ಲಿರುವಂತೆ ಕಾಪಾಡುತ್ತವೆ. ನಿರಂತರವಾಗಿ ನಿಗದಿತ ವೇಳೆಯಲ್ಲಿ ಆಹಾರ ತೆಗೆದುಕೊಳ್ಳುವ ದೇಹಕ್ಕೆ ಉಪವಾಸದ  ಆಚರಣೆಯು ತಡೆಯನ್ನು ಒಡ್ಡಿ ಹೊಟ್ಟೆಗೆ ತಾಲೀಮು ನೀಡುತ್ತದೆ. ಇದರಿಂದ ಆರೋಗ್ಯ ವೃದ್ದಿಯಾಗುವುದಲ್ಲದೇ ಹಸಿವನ್ನು ತಡೆದುಕೊಳ್ಳುವ ಶಕ್ತಿ ದೇಹಕ್ಕೆ ಬರುತ್ತದೆ. ಹಬ್ಬಗಳಲ್ಲಿ ಮಾಡುವ ವಿವಿಧ ಬಗೆಯ ಅಡುಗೆಗಳು ದೇಹಕ್ಕೆ ಬೇಕಾದ ಜೀವಸತ್ವವನ್ನು ಒದಗಿಸುತ್ತವೆ. ಕೆಲವು ಕಾಲದಲ್ಲಿ ಹಾಗೂ ಔಷಧಿಯ ಗುಣಗಳೇ ಅವುಗಳನ್ನು ಪೂಜ್ಯನೀಯವಾಗಿಸಿವೆ. ತುಳಿಸಿ, ಬೇವು, ಬನ್ನಿ, ಅರಳಿ ಮರಗಳು ಔಷಧಿಗಳ ಆಗರ, ಅವುಗಳ ನೆರಳು ಹಾಗೂ ಗಾಳಿ ಆರೋಗ್ಯವರ್ಧಕ. ಜೀವಕೋಟಿಗೆ ಉಸಿರಾಗಿರುವ ಅವು, ಯಾರಿಂದಲೂ ನಾಶ ಹೊಂದಲೇಬಾರದು. ಆರಣೆಗಳೊಳಗೆ ಬಂಧಿಸಲಾಗಿದೆ. ದಿನವೂ ಪೂಜಿಸಿದರೆ ಒಳಿತಾಗುವುದೆಂಬ ನಂಬಿಕೆಯನ್ನು ಸಂರಕ್ಷಣಾ ಪ್ರತೀಕವಾಗಿ ಮನಸ್ಸಿನಲ್ಲಿ ಬಿತ್ತಲಾಗಿದೆ. ಪೂಜ್ಯನೀಯವಾದ ಪ್ರತಿ ಸಸ್ಯ ಪ್ರಾಣಿಗಳಿಗೂ ಒಂದೊಂದು ಐತಿಹ್ಯ ಪುರಾಣಗಳು ಸೃಷ್ಠಿಯಾಗಿ, ಅವುಗಳನ್ನು ನಿಯಂತ್ರಿಸಿ ಸಂರಕ್ಷಣೆಯನ್ನು ಒದಗಿಸುತ್ತಿವೆ.

ಪ್ರಾಣಿ, ಪಕ್ಷಿ ಜಲಚರಗಳು ಉಪಕಾರಿ ನೆಲೆಯಲ್ಲಿಯೂ ಅಪಕಾರಿ ನೆಲೆಯ ಭಯದಿಂದಲೋ ಪೂಜ್ಯನೀಯವಾಗಿರುವುದನ್ನು ಗಮನಿಸಬಹುದು. ಹಸು ಉಪಕಾರಿ ನೆಲೆಯಿಂದ ಪೂಜ್ಯನೀಯವಾಗಿದೆ. ಹಸುವನ್ನು ದಿನವೂ ಪೂಜಿಸುವುದಲ್ಲದೇ ವಿಶೇಷವಾಗಿ ದೀಪಾವಳಿ, ಸಂಕ್ರಾಂತಿ, ಕಾರಹುಣ್ಣಿಮೆ ಇತ್ಯಾದಿ ಹಬ್ಬಗಳಲ್ಲಿ ಪೂಜಿಸಲಾಗುತ್ತದೆ. ಹತ್ತಾರು ಐತಿಹ್ಯ, ಪುರಾಣ, ಕಥೆ ಹಾಗೂ ಗಾದೆಗಳು ಸೃಷ್ಟಿಯಾಗಿ ಸದಾಕಾಲ ಹಸುವನ್ನು ಭಕ್ತಿ ನೆಲೆಯಲ್ಲಿಯೇ ಕಾಣುವಂತೆ ಮಾಡಿವೆ. ಬಹು ಉಪಯೋಗಿ ಸಾಕು ಪ್ರಾಣಿಗಳನ್ನು ತಿಂದು ಬದುಕುವ ಹುಲಿ ಹಾಗೂ ಇನ್ನಿತರ ಅಕ್ರಮಣಕಾರಿ ಪ್ರಾಣಿಗಳ ಬಗೆಗೂ ಐತಿಹ್ಯ, ಕಥೆ, ಗಾದೆಗಳಿದ್ದು, ಅವುಗಳ ಅಕ್ರಮಣಕಾರಿ ಗುಣವನ್ನು ಮರೆಯಿಸುವ ಉದ್ದೇಶದಿಂದ ಅವುಗಳನ್ನು  ಪೂಜ್ಯನೀಯವಾಗಿಸಿವೆ. ಅವುಗಳನ್ನು ಮಣಿಸಲು ದೈವಗಳ ವಾಹನಗಳನ್ನಾಗಿಸಲಾಗಿದೆ. ಹೆಣ್ಣುದೈವಗಳ ವಾಹನ ಸಿಂಹ, ಮಾದೇಶ್ವರ ವಾಹನ ಹುಲಿ. ಶನಿದೇವರಿಗೆ ಕಾಗೆ, ಶಿವನಿಗೆ ನಂದಿ, ಷಣ್ಮುಖನಿಗೆ ನವಿಲು, ಗಣಪತಿಗೆ ಇಲಿ, ಬ್ರಹ್ಮನಿಗೆ ಹಂಸ, ಕೃಷ್ಣನಿಗೆ ಗರುಡ ಇವುಗಳು ಜನಪದರಿಗಿರುವ ನಿಸರ್ಗ ನಿಯಮದ ಜ್ಞಾನಕ್ಕೆ ಸಾಕ್ಷಿಯಾಗಿವೆ.

ಕೆಲವು ಆಹಾರ ಪದಾರ್ಥಗಳನ್ನು ತಿನ್ನಬಾರದೆನ್ನುವ ನಿಷೇಧವು ದೇಹಕ್ಕೆ ಆಗಬಹುದಾದ ಅನಾಹುತವನ್ನು ತಪ್ಪಿಸುತ್ತದೆ. ಹೀಗೆ ಆಚರಣೆಗಳಲ್ಲಿ ಹುದುಗಿರುವ ಅಂಶಗಳನ್ನು ಗುರುತಿಸಿ ಅವುಗಳಲ್ಲಿರುವ ಜೀವಮುಖಿ ವಿವರಗಳನ್ನು ಪರಿಶೀಲಿಸಬೇಕು ಹಾಗೂ ಅವುಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಿ, ಆರೋಗ್ಯಪೂರ್ಣವಾದ ಅಂಶಗಳನ್ನು ಆನ್ವಯಿಕ ನೆಲೆಯಲ್ಲಿ ರೂಢಿಸಿಕೊಳ್ಳಬೇಕು. ಏಕೆಂದರೆ ಈಗ ಜಾಗತೀಕರಣವು ಏಕಮಾದರಿ ಆಹಾರ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಇದರಿಂದ ಆಯಾಯಾ ಸಂದರ್ಭಕ್ಕೆ, ಪ್ರದೇಶದಲ್ಲಿ ದೇಹಕ್ಕೆ ಬೇಕಾದ ಆಹಾರದ ಅಂಶಗಳು ದೊರಕಲಾರವು. ಕಾಲಕಾಲಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸಲು ಸಹಕಾರಿಯಾಗಿವೆ.

ಕೆಲವು ಕಾಲದಲ್ಲಿ ಕೆಲವು ಮರಗಳನ್ನು ಕತ್ತರಿಸುವಂತಿಲ್ಲ. ಇದರಲ್ಲಿ ವೃಕ್ಷ ರಕ್ಷಣಾ ತತ್ವವಿದೆ. ಬಹು ಉಪಯೋಗಿ ವಸ್ತುಸಂಕುಲವನ್ನು ಕಾಲತೀತವಾಗಿ ಉಪಯೋಗಿಸುವುದರಿಂದ ನಾಶವಾಗುತ್ತವೆ. ಸಸ್ಯ ಸಂಕುಲದ ನಾಶವನ್ನು ತಪ್ಪಿಸಲು ಅದಕ್ಕೊಂದು ನಂಬಿಕೆಯಿಂದ ಕಾಲವನ್ನು ನಿಗದಿಗೊಳಿಸಿದೆ. ಅಮವಾಸ್ಯೆಯಲ್ಲಿಯೋ, ಹುಣ್ಣಿಮೆಯಲ್ಲಿಯೋ, ಕುಡಗೋಲು ಅಥವಾ ಇತರೆ ಉಪಕರಣಗಳಿಂದ ಕತ್ತರಿಸದೆ, ಕೈಯಿಂದಲೇ ಹರಿದು, ಸಂಗ್ರಹಿಸಿದ ಸಸ್ಯಗಳಲ್ಲಿ ಔಷಧಿ ಅಂಶಗಳು ಇರುತ್ತವೆಂಬ ನಂಬಿಕೆಯು ರಕ್ತಗತವಾಗಿದ್ದು, ಅದರಂತೆ ನಡೆಯುವಂತೆ ಮಾಡಿವೆ. ದೇವರ ಕಾಡುಗಳು, ನಾಗ, ಭೂತ, ಬ್ರಹ್ಮ, ಚೌಡಿ  ಬನಗಳು ಅಲ್ಲದೇ ಆಲ, ಅರಳಿ, ಬೇವು, ಬನ್ನಿ, ಬಿಲ್ವಪತ್ರೆ ಇತ್ಯಾದಿ ಕಟ್ಟುಕಟ್ಟಳೆಗಳಲ್ಲಿ ಸಸ್ಯ ಸಂರಕ್ಷಣಾ ತಂತ್ರಗಾರಿಕೆ ಯನ್ನು ಕಾಣಬಹುದು. ತುಂಬೆ, ತುಳಸಿ, ವೀಳ್ಯೆದೆಲೆ ಇನ್ನು ಮುಂತಾದ ಸಸ್ಯಗಳಲ್ಲಿ ಪರಿಶುದ್ಧ ಪ್ರಾಣವಾಯು ಇದೆ ಎನ್ನುವ ಅರಿವು ಅವರ ಪ್ರಕೃತಿ ನಿಯಮದ ತಿಳುವಳಿಕೆಗೆ ಸಾಕ್ಷಿ ನೀಡಿವೆ.

ದಿನಬಳಕೆಯ ವಸ್ತುಗಳು ಹಾಗೂ ಸಲಕರಣೆಗಳು ಪೂಜ್ಯನೀಯವಾಗಿದ್ದು, ಜನಪದರ ಬದುಕಿನ ಅಂಗವಾಗಿವೆ. ಕಾಯಕದಲ್ಲಿ ಬಳಸಲಾಗುವ ವಸ್ತುಗಳು ಕೈಗಳಷ್ಟೇ ಮುಖ್ಯ. ಅವು ಸದಾಕಾಲ ಸುಸ್ಥಿತಿಯಲ್ಲಿದ್ದು, ಕೆಲಸಕ್ಕೆ ಅನುಕೂಲವಾಗಿರಬೇಕು ಎನ್ನುವ ಮಹತ್ವದ ಉದ್ದೇಶವಿದೆ. ಬಳಸುವ ವ್ಯಕ್ತಿಗೆ ತನ್ನ ಸಲಕರಣೆಯ ಎಲ್ಲಾ ಭಾಗಗಳು ಸುಸ್ಥಿತಿಯಲ್ಲಿವೆ ಎನ್ನುವ ಅರಿವು ಇರುವಂತೆ ಅವುಗಳ ಬಗೆಗಿನ ಆಚರಣೆ ಒತ್ತಾಯಿಸುತ್ತದೆ. ಸಲಕರಣೆಗಳನ್ನು ಕೆಲಸದಲ್ಲಿ ಬಳಸುವ ಮುನ್ನ ಪರೀಕ್ಷಿಸಬೇಕೆಂಬ ವಿಚಾರದ ಬಗೆಗೆ ಎಚ್ಚರಿಸುತ್ತದೆ. ಅಮವಾಸ್ಯೆಯಲ್ಲಿ ತಕ್ಕಡಿ, ಪಂಪ್‌ಸೆಟ್, ಚಕ್ಕಡಿ, ಸೈಕಲ್, ಕಾರು, ಲಾರಿ ಇತ್ಯಾದಿ ವಾಹನಗಳನ್ನು ಪೂಜಿಸುವ ನೆಪದಲ್ಲಿ ಅವುಗಳ ಬಳಕೆಯ ಸಾಮರ್ಥ್ಯದ ಪರೀಕ್ಷೆ ಇರುವುದು ಗಮನಾರ್ಹವಾಗಿದೆ.

ಗ್ರಹಣ ವೀಕ್ಷಣೆಯಿಂದಾಗುವ ತೊಂದರೆಗಳನ್ನು ತಪ್ಪಿಸಲು ಗ್ರಹಣ ವೀಕ್ಷಣೆಯನ್ನೇ ನಿಷೇಧಿಸಿ ಅಂದು ಗೃಹಬಂಧನಲ್ಲಿದ್ದು, ಯಾವುದೇ ಆಹಾರ ಪಾನೀಯಗಳನ್ನು ಸೇವಿಸುವುದಿಲ್ಲ. ಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ದೇವರನ್ನು ಪೂಜಿಸಿ ಆ ಸಂದರ್ಭದಲ್ಲಿ ನಂತರ ಆಹಾರ ಸೇವಿಸುತ್ತಾರೆ. ಆ ಕಾಲದಲ್ಲಿ ಹಾಲು, ಮೊಸರು, ಮಜ್ಜಿಗೆ ಇತ್ಯಾದಿಗಳಿಗೆ ತುಳಸಿ ಎಲೆಗಳನ್ನು ಹಾಕಬೇಕು ಎನ್ನುವ ನಿಯಮ ಇದೆ. ಅವುಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ‘ಪ್ರಕರ ಕಿರಣ’ಗಳಿಂದಾಗುವ ಹಾನಿ ತಪ್ಪುತ್ತದೆ. ದೈವಗಳಾದ ಸೂರ್ಯ ಹಾಗೂ ಚಂದ್ರರನ್ನು ಗ್ರಹಣ ಕಾಲದಲ್ಲಿ ರಾಹು ಹಾಗೂ ಕೇತುಗಳೆಂಬ ರಾಕ್ಷಸರು ನುಂಗುತ್ತಾರೆ ಎನ್ನುವ ವಿವರಗಳನ್ನು ಬಲವಾಗಿ ನಂಬುತ್ತಾರೆ. ತಮ್ಮ ದೈವಗಳ ಕಷ್ಟಕಾಲದಲ್ಲಿ ಏನನ್ನು ತಿನ್ನದೇ, ಗ್ರಹಣ ವೀಕ್ಷಣೆಯನ್ನು ಸಗಣಿ ನೀರಿನಲ್ಲಿ ವೀಕ್ಷಿಸುತ್ತಾರೆ. ಪಾತ್ರೆಯೊಂದರಲ್ಲಿ ಸಗಣಿ ನೀರನ್ನು ತುಂಬಿ, ಲಂಬವಾಗಿ ನಿಲ್ಲಿಸಿದ ಒನಕೆಯು ಗ್ರಹಣ ಬಿಡುವವರೆಗೂ ನೇರವಾಗಿ ನಿಂತಿರುತ್ತದೆ. ಗ್ರಹಣ ಬಿಟ್ಟ ತಕ್ಷಣ ಕೆಳಗೆ ಬೀಳುತ್ತದೆ. ಇದು ಅವರ ಖಗೋಳ ಜ್ಞಾನಕ್ಕೆ ಸಾಕ್ಷಿಯಾಗಿದೆ.

ಆಚರಣೆಗಳನ್ನು ಸಮೃದ್ಧ ಬಾಳಿನ ಸೂತ್ರಗಳಂತೆ, ಪ್ರಮೇಯಗಳಂತೆ ಬಳಸಬೇಕು. ಅಲ್ಲಿ ಆರೋಗ್ಯವಿದೆ. ಸ್ವಚ್ಛತೆಯ ಸಹಬಾಳ್ವೆಯ ಪಾಠವಿದೆ. ಹಂಚಿಕೊಂಡು ಉಣ್ಣುವ ನೀತಿ ಇದೆ. ಸಂಬಂಧಗಳನ್ನು ಬೆಸೆಯುವ ಬೆಸುಗೆಯಿದೆ. ಚರ್ಚಿಸುವ ಗುಣವಿದೆ. ಕುರುಣೆ ಇದೆ. ಸಹಾಯ ಇದೆ. ತರ್ಕ ಹಾಗೂ ವಿನೋದವಿದೆ. ಜಾಣ್ಮೆ ಹಾಗೂ ರಕ್ಷಣೆಯಿದೆ. ಪರಸ್ಪರ ವೃತ್ತಿ ಸಂಬಂಧವಿದೆ. ಹೀಗೆ ಸಾವಿರಾರು ಜೀವಮುಖಿ ಅಂಶಗಳು ಆಚರಣೆಯ ಗರ್ಭದಲ್ಲಿವೆ. ಅವುಗಳನ್ನು ಪ್ರಯೋಗಗಳಂತೆ ನಡೆಸಬೇಕು. ಎಲ್ಲವನ್ನು ಅರ್ಥವಿಲ್ಲ ಎನ್ನುವ ಅವಸರದ ಬುದ್ದಿಯನ್ನು ಬಿಟ್ಟು ಸಮಾಧಾನದಿಂದ ನೋಡಬೇಕು. ಆಗ ಆಚರಣೆಗಳ ಉದ್ದೇಶ ಫಲಪ್ರದವಾಗುತ್ತದೆ.

ಪ್ರಸ್ತುತ ಎರಡು ನೂರು ಆಚರಣೆಗಳನ್ನು ನೀಡಲಾಗಿದೆ. ಮಾಹಿತಿ ಹಾಗೂ ವಿವರಗಳ ಜೊತೆ ರೇಖಾಚಿತ್ರವನ್ನು ನೀಡಲಾಗಿದೆ. ನೋಟ ಹಾಗೂ ಅರ್ಥವನ್ನು ತಂದುಕೊಡುವ ರೇಖಾಚಿತ್ರಗಳು ಬರವಣಿಗೆಗೆ ನಿಲುಕದ ವಿವರಗಳನ್ನು ದೃಶ್ಯದ ಮೂಲಕ ಅರ್ಥೈಸಿವೆ. ಪ್ರತಿ ಆಚರಣೆಯ ಹಿನ್ನೆಲೆ, ಸಾಂಸ್ಕೃತಿಕ ಸಂಗತಿಗಳು ಹಾಗೂ ಆಚರಣೆಗಳನ್ನು ಅಭ್ಯಾಸಿಸಲು ಸಹಕಾರಿಯಾಗಿವೆ. ಪೂಜಾ ವಿಧಾನ, ಅರ್ಥ, ವಿಶಿಷ್ಟತೆ, ಪುರಾಣ, ಕಥೆ, ಗಾದೆ, ಒಗಟುಗಳು ಯಾವ ಜನವರ್ಗ ಯಾವ ಸಂದರ್ಭದಲ್ಲಿ ಅದನ್ನು ಆಚರಿಸುತ್ತಾರೆ, ಅದರಲ್ಲಿರುವ ಸಂದೇಶವೇನು ಇತ್ಯಾದಿ ವಿವರಗಳನ್ನು ಚರ್ಚಿಸಲಾಗಿದೆ. ಮಾನವ ಹಾಗೂ ನಿಸರ್ಗದ ಒಳಿತಿನ ಆಶಯವನ್ನೇ ತುಂಬಿಕೊಂಡ ಅವು ಮುಂದಿನ ಸಾಂಸ್ಕೃತಿಕ ಹುಡುಕಾಟಕ್ಕೆ ದಾರಿ ಮಾಡಿಕೊಡುತ್ತವೆ.

ಇಲ್ಲಿಯ ಹೆಚ್ಚಿನ ಮಾಹಿತಿಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಲಾಗಿದೆ. ನೂರಾರು ಜನವಕ್ತೃಗಳು ಮಾಹಿತಿಯನ್ನು ನೀಡಿದ್ದಾರೆ. ಸ್ಥಳೀಯ ಮಟ್ಟದ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ದಿನಪತ್ರಿಕೆ ಹಾಗೂ ವಾರಪತ್ರಿಕೆಗಳ ಮಾಹಿತಿಗಳು ಗ್ರಂಥ ರಚನೆಗೆ ಸಹಕಾರಿಯಾಗಿವೆ. ಆ ಎಲ್ಲಾ ವಿದ್ವಾಂಸರನ್ನು ಹಾಗೂ ಪ್ರಕಾಶಕರನ್ನು ಪ್ರೀತಿಪೂರ್ವಕವಾಗಿ ನೆನೆಯುತ್ತೇನೆ.

ಪುಸ್ತಕವನ್ನು ಪ್ರಕಟಿಸಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ,  ಕುಲಸಚಿವರು ಮತ್ತು ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಪ್ರಕಟಣೆಗೆ ಶಿಫಾರಸ್ಸು ಮಾಡಿದ ಜಾನಪದ ವಿಭಾಗದ ಅಧ್ಯಯನ ಮಂಡಳಿಯ ಸದಸ್ಯರಾದ ಡಾ. ಮೊಗಳ್ಳಿ ಗಣೇಶ್, ಡಾ. ಹೆಬ್ಬಾಲೆ ಕೆ. ನಾಗೇಶ್ ಹಾಗೂ ಡಾ. ವಿ.ಎಲ್. ಪಾಟೀಲ್ ಅವರುಗಳಿಗೆ, ಹಸ್ತಪ್ರತಿಯನ್ನು ಪರಿಶೀಲಿಸಿ ಪ್ರಕಟಣೆಗೆ ಪರಿಶೀಲನಾ ವರದಿಯನ್ನು ನೀಡಿದ ಪ್ರೊ. ಶಾಲಿನಿ ರಘುನಾಥ ಅವರಿಗೆ,

ಪುಸ್ತಕ ವಿನ್ಯಾಸ ಹಾಗೂ ಕರಡು ತಿದ್ದುವಲ್ಲಿ ಸಹಕರಿಸಿದ ನನ್ನ ಸಹೋದ್ಯೋಗಿ ಮಿತ್ರ ಡಾ. ಎಸ್. ಮೋಹನ್ ಅವರಿಗೆ, ಪ್ರಸಾರಾಂಗ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಎಚ್.ಬಿ. ರವೀಂದ್ರ, ಶ್ರೀ ಜೈನುಲ್ಲಾ ಬಳ್ಳಾರಿ ಹಾಗೂ ಶ್ರೀ ಕೆ.ಎಲ್. ರಾಜಶೇಖರ್ ಅವರುಗಳಿಗೆ, ಪ್ರಸ್ತಾವನೆಯನ್ನು ಕರಡು ತಿದ್ದುವಲ್ಲಿ ಸಹಕರಿಸಿದ ಡಾ. ಚಂದ್ರಪ್ಪ ಸೊಬಟಿ ಅವರಿಗೆ, ಆಚರಣೆಗಳನ್ನು ಚಿತ್ರಗಳ ಮೂಲಕ ಅರ್ಥ ವಿವರಣೆಗೆ ಅನುವು ಆಗುವಂತೆ ಅಂದವಾದ ರೇಖಾಚಿತ್ರಗಳನ್ನು ಹಾಗೂ ಮುಖಪುಟವನ್ನು ಬರೆದು ಸಹಕರಿಸಿದ ಕಲಾವಿದ ಮಿತ್ರ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಅಕ್ಷರ ಸಂಯೋಜನೆ ಮಾಡಿದ ಶ್ರೀ ಜೆ. ಬಸವರಾಜ ಅವರಿಗೆ ಹೃತ್ಪೂರ್ವಕವಾಗಿ ವಂದಿಸುತ್ತೇನೆ.

ಡಾ. .ಚಿ. ರಮೇಶ್