ಯುಗಾದಿ ಅಮಾವಾಸ್ಯೆಯ ಮರುದಿನ ಸೂರ್ಯೋದಯದಲ್ಲಿ ಆ ವರ್ಷದ ಇಡೀ ಭವಿಷ್ಯವನ್ನು ತಿಳಿಯುವ ಆಚರಣೆ. ಕರ್ನಾಟಕದಾದ್ಯಂತ ಈ ಬಗೆಯ ಆಚರಣೆಗಳು ಕಂಡುಬಂದರೂ ಗುಳೇದಗುಡ್ಡದ ಆಚರಣೆ ಭಿನ್ನವೂ, ವಿಶಿಷ್ಟವೂ ಆಗಿದೆ. ವಾರ್ಷಿಕ ಫಲಾಫಲಗಳ ಅನ್ವೇಷಣೆಯ ಕಮ್ಮಟದಂತಿರುವ ಆಚರಣೆಯಲ್ಲಿ ದವಸ, ಧಾನ್ಯ, ಬಟ್ಟೆ-ಬರೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವ್ಯಾಪಾರ, ವಹಿವಾಟು ಮುಗ್ಗಟ್ಟಿನ ಚರ್ಚೆಗಳು, ಪಶು-ಪಕ್ಷಿ, ಜಾನುವಾರು ಹಾಗೂ ಜನರ ಆಗುಹೋಗುಗಳ ಬಗೆಗೆ ತಿಳಿದುಕೊಳ್ಳುತ್ತಾರೆ.

ಅಂದು ಸಂಜೆ ಊರ ಹೊರಗಿನ ವಿಶಾಲ ಬಯಲು ಪ್ರದೇಶದಲ್ಲಿ ಹತ್ತಾರು ಗಾಡಿಗಳಷ್ಟು ಮರಳನ್ನು ಹಾಕಿ ಎತ್ತರದ ಚೌಕಾಕಾರದ ಗುದ್ದುಗೆ ಸಿದ್ಧಪಡಿಸುತ್ತಾರೆ. ಭವಿಷ್ಯ ನುಡಿಯುವ ಗದ್ದುಗೆ ಸುತ್ತಲೂ ಜೋಳದ ದಂಟುಗಳನ್ನು ನೆಡುತ್ತಾರೆ. ಗದ್ದುಗೆಯ ಮೇಲೆ ಮಣ್ಣಿನಿಂದ ತಯಾರಿಸಿದ ಶಿವಲಿಂಗ ಹಾಗೂ ನಂದೀಶ್ವರರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ಬಗೆಯ ಧಾನ್ಯಗಳನ್ನು ಎಕ್ಕೆ ಎಲೆಯಲ್ಲಿ ಮುಚ್ಚುತ್ತಾರೆ. ಗದ್ದುಗೆಯ ಎಡ ಭಾಗ ದಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳಿಂದ ಉಳುವ ರೈತ ಹಾಗೂ ಬಿತ್ತುತ್ತಿರುವ ಅವನ ಪತ್ನಿಯ ಮೂರ್ತಿ ಗಳು, ಗದ್ದುಗೆಯ ಎಡ ಹಾಗೂ ಬಲ ಭಾಗದಲ್ಲಿ ಎರೆಮಣ್ಣಿನಿಂದ ತಯಾರಿಸಿದ ವ್ಯಾಪಾರಿ ಗಳಿಬ್ಬರ ಗೊಂಬೆಗಳಿಗೆ ಬಟ್ಟೆ ಇತ್ಯಾದಿ ಒಡವೆ ವಸ್ತ್ರಗಳಿಂದ ಅಲಂಕರಿಸಿ, ಅವುಗಳ ಮುಂದೆ ನಾನಾ ಬಣ್ಣದ ಬಟ್ಟೆ-ಬರೆಗಳನ್ನು, ಬಣ್ಣದ ಕುಪ್ಪಸದ ತುಂಡುಗಳನ್ನು ಮುಂದಿರಿಸುತ್ತಾರೆ. ಗದ್ದುಗೆಯ ಅಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ ಹೀಗೆ ನಾಲ್ಕು ಉಪದಿಕ್ಕಿನಲ್ಲಿ ಅನ್ನದ ಬುತ್ತಿಯನ್ನಿಟ್ಟು ಪೂಜಿಸುತ್ತಾರೆ.

ಯುಗಾದಿಯ ಮರುದಿನ ಊರ ಹೊರಗಿನ ವಿಶಾಲ ಬಯಲಿನಲ್ಲಿ ನಿರ್ಮಿಸಿದ ಭವಿಷ್ಯ ವೇದಿಕೆಯ ಸುತ್ತಲೂ ನೂರಾರು ಜನ ಸೇರುತ್ತಾರೆ. ಅಂದು ಸೂರ್ಯೋದಯದ ಸಮಯದಲ್ಲಿ ಭವಿಷ್ಯ ಕೇಳಲು ನೇಕಾರರು, ರೈತರು, ವ್ಯಾಪಾರಿಗಳು, ನೌಕರರು, ಅಧಿಕಾರಿಗಳು, ಊರಿನ ಹಾಗೂ ಸುತ್ತಲಿನ ಊರಿನ ಜನರು ಬಹುಸಂಖ್ಯೆಯಲ್ಲಿ ಬರುತ್ತಾರೆ. ಕೇವಲ ಸಂಕೇತಗಳಿಂದ ಅರ್ಥೈಸುವ ಈ ಫಲಭವಿಷ್ಯವನ್ನು ಜನಸಾಮಾನ್ಯರಿಗೆ ಭವಿಷ್ಯ ತಜ್ಞರು ವಿವರಿಸಿ ಹೇಳುತ್ತಾರೆ. ಯುಗಾದಿಯ ಫಲದ ನಿರ್ಣಾಯಕರಾಗಿದ್ದ ಅವರು ಪಂಚಾಂಗ, ಶಾಸ್ತ್ರಾದಿಗಳನ್ನು ಬಲ್ಲವರಾಗಿರುತ್ತಾರೆ. ವೇದಿಕೆಯ ಮೇಲೆ ಕುಳಿತ ಅವರೊಂದಿಗೆ ಇಬ್ಬರು ಸಹಾಯಕ ಭವಿಷ್ಯ ತಜ್ಞರು ಇರುತ್ತಾರೆ. ಎಕ್ಕೆ ಎಲೆಗಳಿಗೆ ಅಂಟಿಕೊಂಡಿದ್ದ ನೀರಿನ ಹನಿಗಳು ಆ ವರ್ಷದ ಮಳೆಯ ಏರಿಳಿತವನ್ನು ಹೇಳಿದರೆ, ಬೀಳದೆ ಸ್ಥಿರವಾಗಿ ನಿಂತಿರುವ ಅಥವಾ ಮುರಿದು ಬೀಳುವ ರೈತರ ಮೂರ್ತಿಗಳು ರೈತರ ಕಷ್ಟ ಸುಖಗಳ ಬಗ್ಗೆ ಫಲ ಭವಿಷ್ಯ ಹೇಳುತ್ತವೆ. ವ್ಯಾಪಾರಿ ಗೊಂಬೆಗಳ ಮುಂದಿನ ತುಂಡು ಬಟ್ಟೆಗಳು ಗಾಳಿಯಿಂದ ಎಷ್ಟು ದೂರ ಹಾರಿ ಬೀಳುತ್ತವೋ ಅವು ಬಟ್ಟೆ ವ್ಯಾಪಾರಿಗಳ ಲಾಭ-ನಷ್ಟಗಳ ಬಗ್ಗೆ ಹೇಳಿದರೆ, ನಾಲ್ಕು ದಿಕ್ಕಿನಲ್ಲಿರಿಸಿದ ಅನ್ನದ ಬುತ್ತಿಗಳು ಯಾವ ದಿಕ್ಕಿನಲ್ಲಿ ಅನ್ನವನ್ನು ಪ್ರಾಣಿ ಪಕ್ಷಿಗಳು ತಿನ್ನುತ್ತವೆಯೋ ಆ ದಿಕ್ಕಿನಲ್ಲಿ ಆಹಾರದ ಕೊರತೆ ಎದುರಾಗುತ್ತದೆ ಎಂದು ಅರ್ಥೈಸುವುದು. ನಂದಿ ಹಾಗೂ ಈಶ್ವರನ ಮುಂದಿರಿಸಿದ ಅನ್ನ ಪ್ರಸಾದ ಕರಗಿದ್ದರೆ ಇಡೀ ವರ್ಷ ಆಹಾರದ ಬವಣೆ ಉಂಟಾಗುತ್ತದೆಂದು ಭವಿಷ್ಯ ನುಡಿಯುತ್ತಾರೆ.