ಬಿಜಾಪುರ ಜಿಲ್ಲೆಯ ಬೈಲಕೂರು ಗ್ರಾಮದ ಆರಾಧ್ಯ ದೈವ ವರಮಾರುತೇಶ್ವರ. ಪ್ರತಿವರ್ಷ ಯುಗಾದಿಯ ಮಾರನೇ ದಿನ ನಡೆಯುವ ಬಡಿಗೆ ಜಾತ್ರೆಯಲ್ಲಿ ರಥೋತ್ಸವವಿಲ್ಲ. ಸಮಾರಾಧನೆಯೂ ಇಲ್ಲ. ‘ಕೆನ್ನಾಲಿಗೆ ಮರ್ದನ್’ ಎಂಬ ವಿಶಿಷ್ಟ ಬಗೆಯ ಚರ್ಮ ವಾದ್ಯವನ್ನು ಬಳಸುತ್ತಾರೆ. ಮದುವೆಯಾದ ಊರಿನ ಹೆಣ್ಣು ಮಕ್ಕಳು, ಗ್ರಾಮಸ್ಥರು, ಬೀಗರು, ಬಂಧುಗಳು ತಪ್ಪದೇ ಜಾತ್ರೆಗೆ ಬರುತ್ತಾರೆ. ಹಸಿರು ತೋರಣ, ಚಪ್ಪರ ಹಾಗೂ ಬಾಳೆಕಂಬಗಳಿಂದ ಇಡೀ ಊರನ್ನೇ ಸಿಂಗರಿಸಿರುತ್ತಾರೆ. ಜಾತ್ರೆಯಂದು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸುವ ಭಕ್ತರ ದಂಡನ್ನು ನೋಡಬಹುದು. ಅಂದು ಬೆಳಗಿನ ನಾಲ್ಕು ಗಂಟೆಯಿಂದ ಮಧ್ಯಾಹ್ನದವರೆಗೂ ಅದನ್ನು ಭಕ್ತರು ಅವ್ಯಾಹತವಾಗಿ ನಡೆಸುತ್ತಾರೆ.

ತಲೆಕೆಳಗಾಗಿ ನಿಲ್ಲುವ ವಿಶಿಷ್ಟ ಬಗೆಯ ಸಂಪ್ರದಾಯವೊಂದನ್ನು ಕಾಣಬಹುದು. ಆರೋಗ್ಯವಂತನೂ, ದೃಢಕಾಯನು ಆದ ವ್ಯಕ್ತಿಯೊಬ್ಬರನ್ನು ಸಮತೂಕದ ಸಮಾನ ಸಾಮರ್ಥ್ಯದ ವ್ಯಕ್ತಿಯೊಬ್ಬನ ಭುಜದ ಮೇಲೆ ತಲೆಯಿಟ್ಟು, ಕಾಲುಗಳನ್ನು ಮೇಲ್ಮುಖವಾಗಿ ನಿಲ್ಲಿಸಿ ಸಮತೋಲನ ಕಾಯ್ದುಕೊಂಡು ಶಾರೀರಿಕ ಸಾಮರ್ಥ್ಯ ಮೆರೆಸುವ ಕಸರತ್ತಿನ ಸಂಪ್ರದಾಯವನ್ನು ಮಾಡುತ್ತಾರೆ. ಇದನ್ನು ಗಜನಿಲ್ಲುವ ಸಂಪ್ರದಾಯವೆಂದು ಕರೆಯುತ್ತಾರೆ.

ಜಾತ್ರೆಯ ಕೊನೆಯ ಮತ್ತು ಆಕರ್ಷಕ ಆಚರಣೆ ಓಕುಳಿ ಹಾಗೂ ಬಡಿಗೆಯಾಟ. ವರಮಾರುತೇಶ್ವರನ ದೇವಾಲಯದ ಮುಂದೆ ಹೊಂಡವೊಂದನ್ನು ನಿರ್ಮಿಸಿ ಓಕುಳಿ ನೀರು ಸಂಗ್ರಹಿಸಿ, ನಾನಾ ಬಗೆಯ ಹೂಗಳಿಂದ ಶೃಂಗರಿಸುತ್ತಾರೆ. ದೇವಾಲಯದ ಅರ್ಚಕ ಪೂಜೆಯ ನಂತರ ಓಕುಳಿಗೆ ಚಾಲನೆ ನೀಡುತ್ತಾನೆ. ಕುಂಬಾರರು ಓಕಳಿಗಾಗಿಯೇ ತಯಾರಿಸಿ, ಪೂಜಿಸಿ, ನೀಡಿದ ಮಣ್ಣಿನ ಮಡಕೆಗಳನ್ನು ಹಿಡಿದ ಭಕ್ತರು ಓಕುಳಿ ಹೊಂಡಕ್ಕೆ ಧುಮುಕುತ್ತಾರೆ. ಹೊಂಡದ ಸುತ್ತಲೂ ನಿಂತ ಭಕ್ತರಿಗೆ ಓಕುಳಿ ನೀರನ್ನು ಎರಚಲು ಆರಂಭಿಸುತ್ತಾರೆ. ಎರಚಿಸಿಕೊಂಡ ಭಕ್ತರು ಕೈಯಲ್ಲಿ ಹಿಡಿದ ಉದ್ದನೆಯ ಬಡಿಗೆಯಿಂದ ಹೊಡೆಯುತ್ತಾರೆ. ಓಕುಳಿ ನೀರು ಎರಚಿದವನು ಚಾಣಾಕ್ಷತನದಿಂದ ಹೊಡೆತ ತಪ್ಪಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಬಡಿಗೆ ಏಟು ಬಿದ್ದರೂ ನೋವಾಗದಿರುವುದಕ್ಕೆ ವರಮಾರುತೇಶ್ವರನ ಪವಾಡವೇ ಕಾರಣ ಎಂದು ನಂಬುತ್ತಾರೆ. ಭಕ್ತರ ಕೈಯಿಂದ ಬೀಸಿದ ಬಡಿಗೆಯು ಯಾರ ಮೇಲೆ ಬೀಳುವುದೋ ಅವರ ಪುಣ್ಯವಂತರೆಂದು ತಿಳಿಯುತ್ತಾರೆ. ಅಲ್ಲದೇ ಆ ಬಡಿಗೆಯನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯ ಮೇಲ್ಭಾವಣಿಯಲ್ಲಿ ಇರಿಸುತ್ತಾರೆ. ಹೀಗೆ ಮಾಡುವುದರಿಂದ ವಿಷಜಂತು, ಕ್ರಿಮಿಕೀಟಗಳು ಬರುವುದಿಲ್ಲವೆಂದು ನಂಬುತ್ತಾರೆ.