ಕಲಬುರ್ಗಿ ಜಿಲ್ಲೆಯ ಮಳ್ಳಿ ಎಂಬಲ್ಲಿನ ಪ್ರಸಿದ್ಧ ಗ್ರಾಮದೇವತೆ ಮಳ್ಳಿ ಚೌಡಮ್ಮ. ಚೌಡಮ್ಮನಿಗೆ ಎರಡು ವರ್ಷಕ್ಕೆ ಒಂದು ಬಾರಿ ಜಾತ್ರೆ ನಡೆಯುತ್ತದೆ. ಜಾತ್ರೆ ವಿಶಿಷ್ಟವೂ, ವೈವಿಧ್ಯಪೂರ್ಣವೂ ಆಗಿ ಆಚರಣೆಗೊಳ್ಳುತ್ತದೆ. ಗುಡಿಯಲ್ಲಿ ತಲೆತಲಾಂತರದಿಂದ ಬಂದ ಎರಡು ಭವ್ಯವಾದ ಚೌಡಮ್ಮ ದೇವಿಯ ಮುಖಾಕೃತಿಗಳಿವೆ. ಅದರಲ್ಲಿ ಒಬ್ಬಳು ಅಕ್ಕ. ಇನ್ನೊಬ್ಬಳು ತಂಗಿ ಎಂದು ಜನ ಭಕ್ತಿಯ ನಂಬಿಕೆ ಇಟ್ಟಿದ್ದಾರೆ. ಜಾತ್ರೆಯಲ್ಲಿ ಹರಕೆ ಹೊತ್ತ ಬಡಿಗ ಜನಾಂಗದ ಪುರುಷರು ಜಾತ್ರೆಯ ದಿನ ಮುಖಾಕೃತಿಗಳನ್ನು ಧರಿಸುತ್ತಾರೆ. ಆ ವೇಳೆ ಅವರನ್ನು ಸಾಕ್ಷಾತ್ ದೇವಿ ಎಂದೇ ಭಕ್ತರು ಭಾವಿಸುತ್ತಾರೆ. ಚೌಡಮ್ಮನ ಮುಖ ಧಾರಣೆ ಮಾಡಿದ ವ್ಯಕ್ತಿಗಳ ಜತೆ ಊರ ಪ್ರಮುಖರು ಮತ್ತು ದಲಿತರು ಸೇರುತ್ತಾರೆ. ಎರಡು ಚೌಡಮ್ಮನ ಭಕ್ತರು ಸೇರಿ ಆಡುವ ಕಲಾತ್ಮಕ ಬಡಿಗೆ ಆಟ ಜಾತ್ರೆಯ ಮುಖ್ಯ ವಿಶೇಷ.

ಜಾತ್ರೆಯಂದು ಮಧ್ಯಾಹ್ನ ಊರಿನ ಮುಖ್ಯರಸ್ತೆಯಲ್ಲಿ ಬಡಿಗೆ ಆಟ ಆರಂಭವಾಗುತ್ತದೆ. ಅಕ್ಕ ಹಾಗೂ ತಂಗಿ ಚೌಡಮ್ಮಳ ಮುಖವಾಡ ಧರಿಸಿದವರು ಬಡಿಗೆ ಹಿಡಿದು ರಸ್ತೆಯ ಆ ತುದಿಯಿಂದ ಈ ತುದಿಗೆ ಆ ತುದಿಗೆ, ಚಲಿಸುತ್ತಾ ಬಡಿಗೆ ಆಟವಾಡಲು ಆರಂಭಿಸುತ್ತಾರೆ. ರಸ್ತೆಯ ಇಕ್ಕೆಲದಲ್ಲಿ, ಮಾಳಿಗೆಯ ಮೇಲೆ ಜನ ಕಿಕ್ಕಿರಿದು ಸೇರಿ ಬಡಿಗೆ ವೀಕ್ಷಣೆಗೆ ಕಾದಿರುತ್ತಾರೆ. ಬಡಿಗೆ ಆಟ ಸುಮಾರು 3 ರಿಂದ 4 ಗಂಟೆಗಳವರೆಗೆ ನಡೆಯುತ್ತದೆ.

ಅದೇ ವೇಳೆಗೆ ಜನ ಸಂದಣಿಯಿಂದ ಕೆಲವು ವಿಲಕ್ಷಣ ವ್ಯಕ್ತಿಗಳು ಪ್ರತ್ಯಕ್ಷರಾಗುತ್ತಾರೆ. ತಲೆಗೆ ಕಂಬಳಿ ಹಾಕಿಕೊಂಡು ಅದರ ಮೇಲೆ ಜೋಳದ ಕಿಚಡಿ, ಜೋಳದ ಬೋನ ತುಂಬಿದ ಹೆಡಿಗೆಗಳನ್ನು ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು ಚಾದರದಲ್ಲಿ ಸಗಣಿ ಗಂಟು ಕಟ್ಟಿಕೊಂಡು ಅದನ್ನು ಬೆನ್ನಿಗೆ ಕಟ್ಟಿಕೊಂಡು ನಿಂತವರತ್ತ, ಕುಳಿತವರ ಕಡೆಗೆ ಕಿಚಡಿ, ಬೋನ ಹಾಗೂ ಸಗಣಿ ಎಸೆಯುತ್ತಾ ಅಡ್ಡಾಡತೊಡಗುತ್ತಾರೆ. ಯಾವುದೋ ಕಡೆ ನೋಡುತ್ತ ಕುಳಿತವನ ಮುಖಕ್ಕೆ ಸಗಣಿ, ಅದನ್ನು ನೋಡಿ ನಕ್ಕವನ ಮುಖಕ್ಕೆ ಸಗಣಿ ರಪ್, ರಪ್ ಎಂದು ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಮಳ್ಳಿ ಜಾತ್ರಾಗ ಮಳ್ಳೆನಂತೆ ಕುಂದ್ರಬೇಡ” ಎಂಬ ಗಾದೆ ಮಾತು ಬಳಕೆಯಲ್ಲಿದೆ. ಈ ಬಗೆಯ ಆಚರಣೆಯಲ್ಲಿ ಗಂಗಾಮತದವರು ಮಾತ್ರ ಭಾಗವಹಿಸಬೇಕೆಂಬ ಜನಪದ ನಿಯಮವಿದೆ.

ಹಿರಿಯರು ಈ ಆಚರಣೆಯ ಬಗ್ಗೆ ಹೀಗೆ ಹೇಳುತ್ತಾರೆ. ಬಡಿಗೆಯಾಟ ಆಡುತ್ತಿರುವ ‘ದೇವಿ’ಯರತ್ತ ಜನ ದಿಟ್ಟಿಸಿ ನೋಡಿದರೆ ದೇವಿಗೆ ದೃಷ್ಟಿ ತಾಗುತ್ತದೆ. ಜನಗಳ ದೃಷ್ಟಿ ಬೇರೆಡೆಗೆ ಹರಿಸಲು ಆಚರಣೆಯನ್ನು ಮಾಡಲಾಗುತ್ತದೆ.

ಮಡಿವಾಳನೊಬ್ಬ ಮಣ್ಣಿನ ರಾಡಿಯಲ್ಲಿ ಅದ್ದಿದ ಕೌದಿಯನ್ನು ಬರಿ ಮೈಗೆ ಸುತ್ತಿಕೊಂಡು ಅಡ್ಡಾದಿಡ್ಡಿಯಾಗಿ ನಡೆಯುತ್ತ ಬರುತ್ತಾನೆ. ದಾರಿಗಡ್ಡವಾಗಿ ನಿಂತವರಿಗೆ ರಾಡಿ ಒರಸುತ್ತ ಹೋಗುತ್ತಾನೆ. ಆತನ ಬರುವಿಕೆಯನ್ನು ಗಮನಿಸದೇ ಇದ್ದವರ ಬಟ್ಟೆ ರಾಡಿ ರಾಡಿ. ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಹಡಪದನೊಬ್ಬ ಮುಳ್ಳಿನ ಮನುಷ್ಯನಾಗಿ ಕಾಣಿಸಿಕೊಳ್ಳುತ್ತಾನೆ. ಕಟ್ಟಿಗೆಯ ಕುದುರೆ ಮುಖದ ಗೊಂಬೆಗೆ ಬೋರೆಗಿಡದ ಮುಳ್ಳಿನ ಕಂಟಿಯನ್ನು ಸಿಕ್ಕಿಸಿಕೊಂಡು ಅತ್ತಿತ್ತ ಎಳೆದಾಡುತ್ತ ಬರುತ್ತಾನೆ. ಬಡಿಗೆಯ ದೇವಿಯರ ಆಟಕ್ಕೆ ಅಡ್ಡ ಬಂದವರನ್ನು ಚದುರಿಸಲು ಇದು ಇನ್ನೊಂದು ತಂತ್ರ. ಆತನಿಗೆ ದಾರಿಬಿಟ್ಟು ದೂರ ಸರಿಯದಿದ್ದರೆ ಹಾಕಿಕೊಂಡ ಹೊಸ ಬಟ್ಟೆ ಮುಳ್ಳಿಗೆ ಸಿಕ್ಕು ಚಿಂದಿಯಾಗುತ್ತದೆ. ಮೇಲಿನ ಸೇವೆ ಸಲ್ಲಿಸಿದ ಜನರಿಗೆ ಚಾಜದ (ಸೇವೆ) ಬಾಬ್ತು ಸಲ್ಲುತ್ತದೆ.