ಚಾಮರಾಜನಗರ ಜಿಲ್ಲೆಯ ಕಸ್ತೂರಿನ ಅಧಿದೈವಗಳಾದ ದೇವಮ್ಮ, ಮಾದೇಶ್ವರ ಮತ್ತು ಬಸವಣ್ಣ ದೈವಗಳ ಮುಂದೆ ಬಂಡಿ ಹರಕೆ ಒಪ್ಪಿಸುವ ಪದ್ಧತಿ. ಬಂಡಿಹಬ್ಬ ಮೈಸೂರಿನ ಸುತ್ತಮುತ್ತ ಆಚರಣೆಗೊಳ್ಳುತ್ತದೆ. ಬಂಡಿಹಬ್ಬಕ್ಕೆ ಬಳಸುವ ಗಾಡಿ ವಿಶೇಷವಾಗಿರುತ್ತದೆ. ಬಣ್ಣ ಬಣ್ಣದ ಅಲಂಕಾರದಿಂದ ಅತ್ತ ಸಾಮಾನ್ಯ ಎತ್ತಿನ ಗಾಡಿಯೂ ಅಲ್ಲದೆ, ಇತ್ತ ದೇವರ ರಥವೂ ಅಲ್ಲದ ಸಮ್ಮಿಶ್ರ ರೂಪವನ್ನು ಹೊಂದಿರುತ್ತವೆ. ಅಂದ ಚಂದ ಮಾಡಿಕೊಂಡು ಮೆರವಣಿಗೆ ಹೋಗುವುದಕ್ಕಷ್ಟೇ ಬಂಡಿಗಳನ್ನು ಬಳಸುತ್ತಾರೆ. ಉಳಿದಂತೆ ಯಾವುದೇ ಕೆಲಸವಿಲ್ಲದೆ ರಥದಂತೆ ಮನೆಯ  ಮೂಲೆಯಲ್ಲಿ ಸುರಕ್ಷಿತವಾಗಿ ನಿಂತಿರುತ್ತವೆ. ಸಾಮಾನ್ಯವಾಗಿ ಈ ಹರಕೆ ಬಂಡಿಗಳನ್ನು ಒಂದು ಊರಿಗೆ ಒಂದರಂತೆ ಮಾಡಿಸಿಟ್ಟುಕೊಂಡಿರುತ್ತಾರೆ. ಅಲ್ಲದೇ ಕುಟುಂಬಕ್ಕೊಂದು ಅಥವಾ ಮನೆಗೊಂದು ಪ್ರತ್ಯೇಕವಾದ ಬಂಡಿಗಳು ಇರುತ್ತವೆ. ಬಂಡಿಗಳನ್ನು ಕನ್ನಡಿ ಗಾಜು, ಮಣಿ ಮೊದಲಾದವುಗಳಿಂದ ಕುಸುರಿ ಚಿತ್ತಾರ ಮಾಡಿಸಿದ ಬಣ್ಣದ ಬಟ್ಟೆ, ತೋರಣ ಇತ್ಯಾದಿಗಳಿಂದ ಶೃಂಗರಿಸಿರುತ್ತಾರೆ. ಈ ಬಗೆಯ ಅಲಂಕಾರಕ್ಕಾಗಿ ಹತ್ತಾರು ಸಾವಿರ ಖರ್ಚು ಮಾಡುತ್ತಾರೆ. ಬಂಡಿಗಳನ್ನು ವಿಶೇಷವಾಗಿ ಬಾಳೆಗೊನೆ, ಎಳನೀರು, ಹೂ ಮೊದಲಾದವುಗಳಿಂದಲೂ ಅಲಂಕರಿಸಿ ಹರಕೆ ಒಪ್ಪಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ  “ಸಪ್ಪಯ್ಯನಪುರದ್ದೂ ಸಪ್ಪಿನ ಬಂಡಿ” ಎನ್ನುವ ನಾಣ್ಣುಡಿ ಹುಟ್ಟಿಕೊಂಡಿದೆ.

ಬಂಡಿಯ ಅಲಂಕಾರವೂ ಒಂದು ಹರಕೆಯ ವಿಧವಾಗಿ ಕಾಣುತ್ತದೆ. ಕಾಯಿ ಹರಕೆ ಮಾಡಿಕೊಂಡವರು ತಮ್ಮ ಬಂಡಿಯನ್ನು ಎಳನೀರಿನಿಂದ ಅಲಂಕರಿಸಿಕೊಂಡಿರುತ್ತಾರೆ. ಬಾಳೆಗೊನೆ ಹರಕೆಯವರು ಬಾಳೆಹಣ್ಣುಗಳಿಂದಲೂ ಸಿಂಗರಿಸಿರುತ್ತಾರೆ. ಅಲ್ಲದೆ ಬೇರೆ ಬೇರೆ ಹರಕೆಗಳು ಇಲ್ಲಿ ನಡೆಯುತ್ತವೆ. ಸ್ವತಃ ಬಂಡಿಕಟ್ಟಿ ಹರಕೆ ತೀರಿಸುವುದೆಂದರೆ ತುಂಬಾ ದುಬಾರಿ ವೆಚ್ಚವಾಗುವುದರಿಂದ ಜನಸಾಮಾನ್ಯರಿಗೆ ಬಂಡಿಹರಕೆ ಸಲ್ಲಿಸಲು ಆಗುವುದಿಲ್ಲ. ಅದಕ್ಕಾಗಿ ಅವರು ಬಸವನ ಮಂಟಪದ ಬಳಿ ಬಡಬಗ್ಗರಿಗಾಗಿಯೇ ಅಲಂಕರಿಸಿ ನಿಲ್ಲಿಸಿದ ಬಣ್ಣ ಬಣ್ಣದ ಬಂಡಿಗೆ ತಮ್ಮ ಎತ್ತುಗಳನ್ನು ಕಟ್ಟಿ ಹರಕೆ ತೀರಿಸುತ್ತಾರೆ. ಚಕ್ರಗಳಿಗೆ ಕಾಯಿ ಹೊಡೆವ ಹರಕೆಯವರು ಅದೇ ಬಂಡಿಯ ಚಕ್ರಗಳಿಗೆ ಕಾಯಿ ಚೂರಾಗುವಂತೆ ಹೊಡೆದು ಹರಕೆ ತೀರಿಸುತ್ತಾರೆ.

ಊರಿನ ಅಧಿದೈವಗಳಾದ ದೇವಮ್ಮ, ಮಾದೇಶ್ವರ ಗುಡಿ ಅಲ್ಲದೆ ಬಸವಣ್ಣನ ಮಂಟಪದ ಬಳಿಯೂ ಬಂಡಿಗಳೂ ಬಂದು ಪೂಜೆ ಸಲ್ಲಿಸಿ, ತೀರ್ಥ ಹಾಕಿಸಿಕೊಂಡ ನಂತರ ಅವರು ಹೊತ್ತ ಹರಕೆ ತೀರಿದಂತಾಗುತ್ತದೆ. ಈ ಊರಿನ ಬಂಡಿ ಹಬ್ಬಕ್ಕೆ ಸುತ್ತಲಿನ ತೊರವಳ್ಳಿ, ದಾಸನೂರು, ಚಿಕ್ಕೊಮ್ಮ ಅಂಕಶಯನಪುರ, ಬೋಗಪುರ, ಸಪ್ಪಯ್ಯನಪುರ, ಮರಿಯಾಲ, ಕಲ್ಲಂಬಳ್ಳಿ, ಹೊನ್ನಗೌಡನ ಹುಂಡಿ, ದಾಸನಪುರ, ತೊರವಳ್ಳಿ ಮೋಳೆ ಮೊದಲಾದ ಹದಿನಾರು ಊರುಗಳಿಂದ ಬಂಡಿಗಳು, ಜೊತೆಗೆ ಜನರು ಬಂದು ಹರಕೆ ತೀರಿಸುತ್ತಾರೆ.

ಊರಾಚೆಯ ವಿಶಾಲವಾದ ಮಾಳದಲ್ಲಿ ಬಂಡಿ ಮೇಳ ನಡೆದರೂ ಜನ ದಟ್ಟಣೆ ಎನಿಸುವುದಿಲ್ಲ. ಕಾರಣ ಅಲ್ಲೊಂದು ಅಲಿಖಿತ ನಿಯಮ ಜಾರಿಯಲ್ಲಿದೆ. ಅದರ ಪ್ರಕಾರ ಒಂದೊಂದು ಊರಿನವರಿಗೂ ಪೂರ್ವ ನಿಗದಿತ ವೇಳೆ ಗೊತ್ತುಪಡಿಸಿದ್ದರಿಂದ, ಅದೇ ವೇಳೆಗೆ ಗಾಡಿಯೊಂದಿಗೆ ವಾದ್ಯಸಮೇತ ದೇವಮ್ಮ ಹಾಗೂ ಮಾದೇಶ್ವರರ ಗುಡಿಗಳಿಗೆ ಪ್ರದಕ್ಷಿಣೆ ಹಾಕಿ, ಬಸವಣ್ಣ ಮಂಟಪದ ಬಳಿ ಪೂಜೆ ಸಲ್ಲಿಸಿ, ಹರಕೆ ಒಪ್ಪಿಸಿ, ತೀರ್ಥ ಹಾಕಿಸಿಕೊಂಡು ಹೋಗುತ್ತಾರೆ. ಬಂಡಿಗಳ ಅಲಂಕಾರ ಜನರನ್ನು ಆಕರ್ಷಿಸಿ  “ಇದು ಯಾರ ಬಂಡಿ ಎಷ್ಟು ಸುಂದರವಾಗಿದೆ” ಎಂಬ ಉದ್ಗಾರ ತೆಗೆಯುವಂತೆ ಮಾಡುತ್ತದೆ.