ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಂತರಘಟ್ಟೆ ಗ್ರಾಮದ ಶಕ್ತಿದೇವತೆ ಅಂತರಘಟ್ಟಮ್ಮ. ಈ ದೇವತೆಗೆ ನಡೆಯುವ ಜಾತ್ರೆ ವಿಶೇಷವಾಗಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಬಂದು ಸೇರುತ್ತಾರೆ. ಮಾಘಮಾಸ ಬಹುಳದಲ್ಲಿ ನಡೆಯುವ ಅಂತರಘಟ್ಟ ಜಾತ್ರೆ ಈ ನಾಡಿನಲ್ಲಿ ಪ್ರಖ್ಯಾತವಾದುದು. ಜಾತ್ರೆಯಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಇತ್ಯಾದಿ ಸುತ್ತಲಿನ ಜಿಲ್ಲೆಗಳ ಭಕ್ತರು ಸೇರುತ್ತಾರೆ.

ಹತ್ತು ದಿನಗಳ ಕಾಲ ನಡೆಯುವ ಜಾತ್ರೆಯನ್ನು, ಭಾನುವಾರ ಬೇಗೂರಿನಲ್ಲಿ ಮದುವಣಗಿತ್ತಿಯಾದ ದೇವಿಯು, ಸೋಮವಾರ ಅಂತರಘಟ್ಟೆಯಲ್ಲಿ ಉಯ್ಯಲೆಯಾಡುತ್ತಾಳೆ. ಬೇಗೂರು, ಚೋಮನಹಳ್ಳಿ ಚೌಕಿ, ಹನುಮನಹಳ್ಳಿ ಭಕ್ತ ರಿಂದ ಬೇವಿನಸೀರೆ ಉತ್ಸವ, ದೊಡ್ಡಪಾನದ ಸೇವೆ, ಕಳಸ ಪೂಜೆ, ಕೋಣೋತ್ಸವ, ನವಿಲು – ಆನೆ ವಾಹನ ಉತ್ಸವ, ಕೋಲಬಾನದ ಸೇವೆ, ಶುಕ್ರವಾರದಂದು ತೇರಿಗೆ ‘ಕಳಸ’ ಏರಿಸುವುದು, ಪಾನಕದ ಗಾಡಿಸೇವೆ, ಎಲ್ಲಾ ಸೇವೆಗಳು ಮುಗಿದ ನಂತರ ಶನಿವಾರ ಬೆಳಗಿನ ಜಾವದಲ್ಲಿ ರಥೋತ್ಸವ ಜರುಗುತ್ತದೆ. ರಥಕ್ಕೆ ಹರಕೆ ಹೊತ್ತ ಭಕ್ತರು ‘ಹಾರುಗೋಳಿ’ಗಳನ್ನು ಹಾರಿಸುವುದು ಸ್ವಾರಸ್ಯಕರವಾದ ಸಂಗತಿಯಾಗಿದೆ. ಹೀಗೆ ಮಾಡುವುದರಿಂದ ಕೋಳಿಗಳು ಅಕ್ಷಯವಾಗಿ, ಸಾಕಾಣಿಕೆದಾರರಿಗೆ ಲಾಭವಾಗುತ್ತದೆಂದು ನಂಬುತ್ತಾರೆ. ಹಾರಿಸಿದ ಕೋಳಿಗಳನ್ನು ಭಕ್ತರು ತಮ್ಮ ಮನೆಯ ಕೋಳಿಗಳ ಜೊತೆ ಸಾಕುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಕೋಳಿಗಳು ಅಭಿವೃದ್ದಿ ಹೊಂದುತ್ತವೆಂದು ನಂಬುತ್ತಾರೆ.

ಹತ್ತು ಹಲವು ಬಗೆಗಳಲ್ಲಿ ಶೃಂಗಾರಗೊಂಡ ಐದು ಸಾವಿರಕ್ಕೂ ಹೆಚ್ಚು ಎತ್ತಿನ ಬಂಡಿಗಳ ನೋಟವೇ ಅದ್ಭುತ, ರಮ್ಯ ಮನೋಹರ. ಬೇಗೂರಿನಿಂದ ದೇವರ ಮೀಸಲಿನ ಬತ್ತಲೆ ಬಂಡಿಗಳ ದೃಶ್ಯ ಚೇತೋಹಾರಿ. ಈ ಬಂಡಿಗಳ ಜೊತೆ ಬೇರೆ ಬಂಡಿಗಳು ಬರುವಂತಿಲ್ಲ, ಅಲ್ಲದೆ ಈ ಬಂಡಿಗಳನ್ನು ಹಿಂದೆ ಹಾಕಿ ಬೇರೆ ಬಂಡಿಗಳು ಮುಂದೆ ಸಾಗುವಂತಿಲ್ಲ. ಬೇಗೂರಿನ ಪಾನಕ ತುಂಬಿದ ಬತ್ತಲೆ ಬಂಡಿಗಳಿಗೆ ಅಷ್ಟೊಂದು ಪ್ರಾಶಸ್ತ್ಯವಿದೆ. ಯಾವುದೇ ವಸ್ತ್ರಗಳ ಅಲಂಕಾರವಿಲ್ಲದೆ, ಬರಿಯ ಹಸಿರು ಮಾವಿನ ಸೊಪ್ಪಿನಿಂದ ಶೃಂಗರಿಸಿರುತ್ತಾರೆ. ಅಲ್ಲದೆ ಈ ಬಂಡಿಗಳು ನಿಧಾನಗತಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತವೆ. ತೇರಿನ ಮೇಲಕ್ಕೆ ‘ಕಳಸ’ ಏರಿಸಲ್ಪಡುತ್ತಿದ್ದಂತೆಯೆ ಬಂಡಿಗಳಲ್ಲಿ ತುಂಬಿದ ಪಾನಕವನ್ನು ದೇವರಿಗೆ ನೈವೇದ್ಯ ಶಾಸ್ತ್ರ ಮಾಡಿ, ಎಲ್ಲ ಪಾನಕವನ್ನು ಪ್ರಸಾದವಾಗಿ ಭಕ್ತರಿಗೆ ಹಂಚುತ್ತಾರೆ. ಪಾನಕ ಸೇವೆ ಮುಗಿಸಿಕೊಂಡ ಬಂಡಿಗಳು ಬೇಗೂರಿಗೆ ವಾಪಾಸಾಗುತ್ತವೆ. ಪಾನಕ ಸೇವೆ, ಪಂಚಫಲ್ಹಾರದ ಸೇವೆ ಮಾಡುವುದರಿಂದ ದನಕರುಗಳಿಗೆ ಯಾವುದೇ ರೋಗ-ರುಜಿನಗಳು ಬರುವುದಿಲ್ಲವೆಂಬ ನಂಬಿಕೆ ಇದೆ. ಜಾತ್ರೆಗೆ ಬರುವ ಬಂಡಿಗಳಿಗೆ ಸುಂಕವಿರಿಸುವ ಕ್ರಮವಿದೆ. ಆದರೆ ಅಂತರಘಟ್ಟ ಸೀಮೆಯ ಬೇಗೂರು, ಚೋಮನಹಳ್ಳಿ, ಗುಂಡರಹಳ್ಳಿ, ಹರಿಶಿಣಘಟ್ಟ, ಬೂತನಹಳ್ಳಿ, ಯಗಡಿಹಳ್ಳಿ, ಹೂವೀಹಳ್ಳಿ, ಸಂಕಲಾಪುರ, ದಾಸರಹಳ್ಳಿ, ಹಡಗಲು, ತಿಮ್ಮಾಲಾಪುರ ಮುಂತಾದ ಮೂವತ್ಮೂರು ಹಳ್ಳಿಗಳ ಬಂಡಿಗಳು ಸುಂಕ ವಿನಾಯ್ತಿ ಪಡೆದಿರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಬಂಡಿ ಎಳೆಯುವ ಎತ್ತುಗಳ ಕೊರಳ ಗುಗ್ಗರಗಳ ನಾದ ಕೇಳುವುದೇ ಒಂದು ಆನಂದ.