ದೀಪಾವಳಿಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ಮಣ್ಣಿನಿಂದ ಮಾಡಿ ಪೂಜಿಸುವ ಪದ್ಧತಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜನ ಅಂದು ಬೊಂಬೆಗಳದ್ದೇ ಹಬ್ಬ ಮಾಡುತ್ತಾರೆ. ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ಆಕಾಶಬುಟ್ಟಿ ಹಾರಿಸಿ, ಪಟಾಕಿ ಸುಡುವುದು ಸಾಮಾನ್ಯ ದೃಶ್ಯ. ಆದರೆ ನಾಲ್ಕಾರು ಹುಡುಗರು ಸೇರಿ, ಒಂದು ಮನೆಯಲ್ಲಿ ಇಟ್ಟಿಗೆ, ಮಣ್ಣು, ಬಣ್ಣಗಳಿಂದ ತಮಗೆ ತಿಳಿದ ಕಲಾಕೃತಿಯನ್ನು ರಚಿಸುತ್ತಾರೆ. ಕೆಲವರು ಮರಾಠ ಕೋಟೆಗಳನ್ನು ಹೋಲುವ ಕೋಟೆಗಳು, ಬುರುಜುಗಳು, ಬೆಟ್ಟಗಳು, ಹೆಬ್ಬಾಗಿಲು ಸೇರಿದ ದೊಡ್ಡ ಕೋಟೆ ನಿರ್ಮಿಸುತ್ತಾರೆ. ಅದರ ಮಧ್ಯದಲ್ಲಿ ಶಿವಾಜಿಯ ಬೊಂಬೆ ಇಟ್ಟು ಪೂಜಿಸುತ್ತಾರೆ. ಅಂದು ಹುಡುಗರಿಂದ ನಾನಾ ಬಗೆಯ ಕಲಾಕೃತಿಗಳು ರೂಪು ಪಡೆಯುತ್ತವೆ. ಕೋಟೆಗಳಿಂದ ಹಿಡಿದು ಕಾರ್ಗಿಲ್ ಸಮರದವರೆಗೂ ಅವರವರ ಕಲ್ಪನಾ ಶಕ್ತಿಗೆ ಅನುಗುಣವಾಗಿ ಬೊಂಬೆಗಳು ರಚನೆಯಾಗುತ್ತದೆ. ಚೆನ್ನಾಗಿ ಒಡಮೂಡಿದ ಬೊಂಬೆಗಳಿಗೆ ಬಹುಮಾನವೂ ದೊರಕುತ್ತದೆ. ಬೊಂಬೆಯನ್ನು  ನೋಡಲು ಬಂದವರಿಂದ  ಕಿಲ್ಲಾಪಟ್ಟಿ ಹಾಕಿ ಹಣ ಸಂಗ್ರಹಿಸುತ್ತಾರೆ. ಸಂಗ್ರಹವಾದ ಹಣದಿಂದ ಮುಂದಿನ ವರ್ಷದ ಬೊಂಬೆ ಮಾಡಲು ಬೇಕಾದ ಪರಿಕರಗಳನ್ನು ಕೊಂಡುಕೊಳ್ಳುತ್ತಾರೆ. ಸ್ಪರ್ಧಾತ್ಮಕ ಮನೋಭಾವ ಹಾಗೂ ದೇಶಭಕ್ತಿ ಮೂಡಿಸುವ ಈ ಹಬ್ಬದಾಚರಣೆ ನಿಜಕ್ಕೂ ಅರ್ಥಪೂರ್ಣವಾಗಿದೆ.