ಸಂಕ್ರಮಣದ ಮೊದಲ ದಿನ ಕೊಡಗಿನ ಮನೆ ಮನೆಗಳಲ್ಲೂ ನಡೆಯುವ ಆಚರಣೆ. ಪೂಜಾ ಸ್ಥಾನಗಳೂ ಸೇರಿದಂತೆ ಗದ್ದೆಗಳಿಗೆ ಬೊತ್‌ಹಾಕುವುದು ರೂಢಿ. ಸಂಕ್ರಮಣದ ಸಂಕೇತವಾದ ಈ ಬೊತ್‌ಗಳಲ್ಲಿ ಬಳ್ಳಿಗಳನ್ನು ಅಲಂಕಾರಪ್ರಾಯವಾಗಿ ಸಿಲುಕಿಸಿ ನಿಲ್ಲಿಸಿರುತ್ತಾರೆ.

ತೀರ್ಥೋದ್ಭವದ ಮರುದಿನ ಮನೆಯನ್ನು ಗಂಗೋದಕದಿಂದ ಶುಭ್ರಗೊಳಿಸಿ ಸ್ನಾನಾದಿಗಳ ಬಳಿಕ ಹೊಸಬಟ್ಟೆ ತೊಟ್ಟು ಕಣಿ ಪೂಜೆಗೆ ಸಿದ್ಧತೆ ನಡೆಸುತ್ತಾರೆ. ಮುತ್ತೈದೆಯರು ‘ತಳಿಯಕ್ಕಿಬೊಳ್‌ಚ’ (ತಟ್ಟೆ‑ಅಕ್ಕಿ‑ದೀಪ) ಬೆಳಗಿ ರೇಷ್ಮೆ ವಸ್ತ್ರವಿರಿಸಿ, ತರಕಾರಿಯೊಂದರಲ್ಲಿ ತಲೆ, ಕೈ ಕಾಲು ಆಕೃತಿ ರಚಿಸಿ ಹೂವಿನಿಂದ ಸಿಂಗರಿಸಿ ಮಾತೆ ಕಾವೇರಿಯ ಪ್ರತೀಕವೆಂದು ಪೂಜಿಸುತ್ತಾರೆ. ಇದನ್ನೇ ಕಣಿಪೂಜೆ ಎಂದು ಕರೆಯುತ್ತಾರೆ.

ಕಾವೇರಿ ಪ್ರತೀಕವಾದ ತರಕಾರಿಯ ಮೂರ್ತಿಯನ್ನು ‘ನೆಲ್ಲಕ್ಕಿ ನೆಡುಬಾಡೆ’ ನಡುಮನೆ ಯಲ್ಲಿರಿಸಿ, ಕುಟುಂಬದ ಪ್ರತಿಯೊಬ್ಬರೂ ತಳಿಯಕ್ಕಿ ಬೊಳಕ್‌ನಿಂದ ಅಕ್ಕಿ ತೆಗೆದು ದೀಪಕ್ಕೆ ಪ್ರೋನಮಿಸುತ್ತಾರೆ. ಅಲ್ಲದೇ ಕಿರಿಯರು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಬಳಿಕ ಮುತ್ತೈದೆಯರು ಬಾವಿ ಬಳಿ ಗಂಗಾಪೂಜೆ ಮಾಡಿ, ಮನೆಯಲ್ಲಿ ಸಿದ್ಧಪಡಿಸಿದ ದೋಸೆ ಅಥವಾ ಕಡುಬನ್ನು ಸಾಂಕೇತಿಕವಾಗಿ ಬಾವಿ ಹತ್ತಿರದ ಹಾಗೂ ಗದ್ದೆಯಲ್ಲಿರುವ ಬೊತ್‌ನಲ್ಲಿಡುತ್ತಾರೆ. ನಂತರ ಬಾವಿಯಿಂದ ಹೊಸ ನೀರು ತಂದು ಅಡುಗೆ ಮಾಡುತ್ತಾರೆ. ವಾರವಿಡೀ ಕಾವೇರಿಯ ಮೂರ್ತಿಯನ್ನು ಪೂಜಿಸಿ, ಕೊನೆಯಲ್ಲಿ ನದಿ ಅಥವಾ ಹಾಲು ಬರುವ ಮರದ ಬುಡದಲ್ಲಿ ವಿಸರ್ಜಿಸುತ್ತಾರೆ.