ಹೆಣ್ಣುಮಕ್ಕಳು ಸಂಭ್ರಮದಿಂದ ಬೆಳದಿಂಗಳ ಚಿತ್ತಾರ ಬಿಡಿಸಿ ನಲಿಯುವ ಹಬ್ಬ. ಭಾರತ ಹುಣ್ಣಿಮೆಯನ್ನೇ ಬೆಳದಿಂಗಳ ಹಬ್ಬವೆಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಧಾರವಾಡ, ಕಾರವಾರ ಮತ್ತು ಕರಾವಳಿಯ ಪ್ರದೇಶಗಳಲ್ಲಿ ಆಚರಣೆಯಲ್ಲಿದೆ. ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಹೆಣ್ಣುಮಕ್ಕಳು ಚುಕ್ಕೆ ಚಿತ್ತಾರದ ಬೆಳದಿಂಗಳ ಹೊಯ್ಯಲು ಸಿದ್ಧತೆ ನಡೆಸುತ್ತಾರೆ. ಸಮತಲವಾದ ಗೋಡೆಗೆ ಕೆಮ್ಮಣ್ಣು ಸಾರಿಸಿ ಸುಂದರ ಕ್ಯಾನವಾಸನ್ನಾಗಿಸುತ್ತಾರೆ. ನಂತರ ಹದವಾಗಿ ಕಲಿಸಿದ ಸುಣ್ಣವನ್ನೇ ಬಣ್ಣವನ್ನಾಗಿಸಿ ದೀಪದ ಕಡ್ಡಿ ಅಥವಾ ಕೈಬೆರಳನ್ನು ಕುಂಚವನ್ನಾಗಿ ಮಾಡಿಕೊಂಡು ಚುಕ್ಕೆಗಳನ್ನು ಇಡುತ್ತಾ ಆಕರ್ಷಕ ಬೆಳದಿಂಗಳ ಚಿತ್ತಾರ ಬಿಡಿಸುತ್ತಾರೆ.

ಒಟ್ಟು ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಬೇರೆ ಬೇರೆ ಚಿತ್ತಾರಗಳನ್ನು ಬರೆಯುವ ಸಂಪ್ರದಾಯವಿದೆ. ಮೊದಲ ದಿನ ಸೂರ್ಯ, ಚಂದ್ರರ ಚಿತ್ರಗಳನ್ನು ಮಾಡಿದರೆ, ಎರಡನೇ ದಿನ ಎಲೆ, ಬಳ್ಳಿ, ಮೂರನೇ ದಿನ ರಾಮನ ತೊಟ್ಟಿಲು, ಕೊಳಲು, ಬಾವಿಯ ಚಿತ್ರಗಳನ್ನು ರಚಿಸುತ್ತಾರೆ. ನಾಲ್ಕನೇ ದಿನ ಕೃಷ್ಣನ ಪಾದಗಳನ್ನು ಪ್ರಾಣಿ ಪಕ್ಷಿಗಳನ್ನು ಅಲ್ಲದೇ ಚಿಕ್ಕದಾದ ಹುಚ್ಚಯ್ಯ ತೇರು ಬರೆಯುತ್ತಾರೆ. ಐದನೇ ದಿನ ದೊಡ್ಡ ಗಾತ್ರದ ರಥದ ಚಿತ್ರವನ್ನು ರಚಿಸಿ, ಅದರ ಮೇಲೆ ಕಳಶವನ್ನಿಡುತ್ತಾರೆ.

ಐದು ದಿನಗಳು ಮನೆಯ ಹೆಣ್ಣು ಮಕ್ಕಳು ಬಿಡುವಿಲ್ಲದೆ ಚಿತ್ತಾರ ಬಿಡಿ ಸುತ್ತಾರೆ. ಹುಣ್ಣಿಮೆಯಂದು ಗೋಡೆಯ ಮೇಲೆ ರಚಿಸಿದ ಚಂದದ ಬೆಳದಿಂಗಳ ಚಿತ್ತಾರಕ್ಕೆ ಶ್ರದ್ಧಾಭಕ್ತಿಯಿಂದ ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ. ಮದುವೆಯಾಗದ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತದೆಂದು, ಗರ್ಭಿಣಿಯರಿಗೆ ಇಷ್ಟದ ಮಗು ಜನಿಸುವುದೆಂದು, ಐದು ವರ್ಷ ಬಿಡದೆ ಬೆಳದಿಂಗಳ ಪೂಜೆ ಮಾಡಿದ ಮಕ್ಕಳಿಲ್ಲದ ಹೆಂಗಸರಿಗೆ ಮಕ್ಕಳ ಫಲ ಸಿಗುತ್ತದೆಂದೂ, ಅಲ್ಲದೆ ಭಕ್ತರು ಬಯಸಿದ ಹತ್ತಾರು ಬಯಕೆಗಳು ಈಡೇರುತ್ತವೆ ಎಂದು ನಂಬಲಾಗುತ್ತದೆ.