ಹೋಳಿ ಹಬ್ಬದಲ್ಲಿ ರತಿ ಮನ್ಮಥರ ಮೂರ್ತಿಗಳ ಎದುರಿಗೆ ನಿಲ್ಲಿಸುವ ವಿಕೃತ ಗೊಂಬೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಹೋಳಿ ಹುಣ್ಣಿಮೆಯಲ್ಲಿ ವಿಶಿಷ್ಟ ಬಗೆಯಲ್ಲಿ ಆಚರಣೆಗೊಳ್ಳುತ್ತದೆ. ಹುಣ್ಣಿಮೆ ದಿನ ಊರಿನ ಓಣಿಗಳಲ್ಲಿ ಹಾಕಿದ ಚಪ್ಪರದ ಕೆಳಗೆ ಆಕರ್ಷಕ ಮುಖಚರ್ಯೆಯುಳ್ಳ ರತಿ-ಮನ್ಮಥರ ಸುಂದರ ಹಾಗೂ ಬೃಹದಾಕಾರದ ಮೂರ್ತಿಗಳನ್ನು ಕೂರಿಸುತ್ತಾರೆ. ಈ ಚಂದದ ಮೂರ್ತಿಗಳಿಗೆ ದೃಷ್ಟಿ ತಾಗ ದಿರಲೆಂದು ಎದುರಿಗೆ ನಿಲ್ಲಿಸಲಾದ ಗೊಂಬೆಯನ್ನೇ ಬೂದಗಾಮ ಎಂದು ಕರೆಯುತ್ತಾರೆ.

ಹುಣ್ಣಿಮೆಗೆ ಮೊದಲು ಊರಿನ ಹುಡುಗರೆಲ್ಲ ಸೇರಿ ಬೂದಗಾಮ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸಲು ತೊಡಗುತ್ತಾರೆ. ಕೇರಿ ಕೇರಿಗಳಲ್ಲಿ ತಿರುಗಿದ ಹುಡುಗರು ಕುಳ್ಳು -ಕಟ್ಟಿಗೆ, ಹರಿದ ಬಟ್ಟೆ -ಬರೆ, ಪೊರಕೆ ಅಲ್ಲದೆ ನಿರರ್ಥಕ ವಸ್ತುಗಳನ್ನು ಸಂಗ್ರಹಿಸುತ್ತಾರೆ. ನಂಬಿಕೆಯ ಪ್ರಕಾರ ಕದ್ದು ಸಂಗ್ರಹಿಸಿದ ವಸ್ತುಗಳು ಹೆಚ್ಚು ಯೋಗ್ಯವೆಂದು ಹೇಳಲಾಗುತ್ತದೆ. ಹೀಗೆ ಸಂಗ್ರಹಿಸಿದ ವಸ್ತುಗಳಿಂದ ಬೂದಗಾಮನನ್ನು ಸೃಷ್ಟಿಸುತ್ತಾರೆ. ಅಲ್ಲದೇ ಅದೇ ರಾತ್ರಿ ಸುಡುತ್ತಾರೆ. ಸುಟ್ಟು ಬೂದಿಯಾಗುವ ಕಾಮನ ಗೊಂಬೆಗೆ  ‘ಬೀದಗಾಮ’ ಬುಧಗಾಮ ಎಂತಲೂ ಕರೆಯುತ್ತಾರೆ. ಕಾಮದಹನದ ಬೆಂಕಿಯಿಂದ ತಮ್ಮ ಮನೆಯ ಒಲೆ ಹೊತ್ತಿಸಿಕೊಳ್ಳುತ್ತಾರೆ. ಅದೇ ಬೆಂಕಿಯಿಂದ ಕಡಲೆ ಹುರಿದು ತಿನ್ನುತ್ತಾರೆ.