ಯುಗಾದಿಯ ಅಮವಾಸ್ಯೆ ದಿನ ನಡೆಯುವ ಪಶುಸಂಬಂಧೀ ಆಚರಣೆ. ಕೊಪ್ಪಳ ಜಿಲ್ಲೆಯ ಹಿರೇಬನ್ನಿಗೋಳ ಊರಿನಲ್ಲಿರುವ ವಿಚಿತ್ರ ಹಾಗೂ ದ್ವಂದ್ವ, ಭಯಾನಕ ಆಚರಣೆ. ಯುಗಾದಿಯ ಪಾಡ್ಯ, ಅಮವಾಸ್ಯೆಯ ಮುಂಜಾನೆ ಊರಿನ ಜನರೆಲ್ಲ ಅಗಸೆ ಬಾಗಿಲಲ್ಲಿ ಸೇರುತ್ತಾರೆ. ಅಗಸೆ ಕಲ್ಲಿನ ಹತ್ತಿರ, ಬಲಿಷ್ಠ ಜೀವಂತ ಹಂದಿಯೊಂದನ್ನು ಕುತ್ತಿಗೆಯವರೆಗೆ ನೆಲದೊಳಗೆ ಹುಗಿದಿಡುತ್ತಾರೆ. ಹಂದಿಯ ಪಕ್ಕದಲ್ಲಿ ಊರಿನ ದನಕರುಗಳನ್ನೆಲ್ಲಾ ಸಾಲಾಗಿ ಕಟ್ಟುತ್ತಾರೆ. ಪಕ್ಕದಲ್ಲಿ ದಗದಗಿಸುವಂತೆ ಬೆಂಕಿ ಹಾಕಿರುತ್ತಾರೆ. ಹಂದಿ ಜೀವಂತ ಸಮಾಧಿಯ ಮುಂದೆ ರಂಗೋಲಿ ಇಟ್ಟು ವಿವಿಧ ಬಗೆಯ ಹೂಗಳಿಂದ ಮತ್ತು ಅರಿಶಿಣ-ಕುಂಕುಮಗಳಿಂದ ಅಲಂಕರಿಸಿರುತ್ತಾರೆ.

ದಗದಗಿಸುವ ಬೆಂಕಿಯಿಂದ ‘ಕುಂಟೆಬಳೆ’ ಎಂಬ ಕೃಷಿ ಉಪಕರಣ ವನ್ನು ಕೆಂಪಗೆ ಕಾಯಿಸಿ, ಇಕ್ಕಳದ ಸಹಾಯದಿಂದ ಹಂದಿಯ ನೆತ್ತಿಯ ಮೇಲಿಟ್ಟು, ನಂತರ ಪಕ್ಕದಲ್ಲಿ ನಿಂತಿದ್ದ ಎತ್ತಿನ ಬೆನ್ನಿನ ಮೇಲೆ ಬರೆ ಹಾಕುತ್ತಾರೆ. ಬರೆ ಹಾಕಿಸಿಕೊಂಡ ಎತ್ತು ಬಿದ್ದೆನೋ ಸತ್ತೆನೋ ಎಂದು ಹಗ್ಗ ಹರಿದುಕೊಂಡು ಓಡಿ ಹೋಗುತ್ತದೆ. ಹೀಗೆ ಆ ಊರಿನ ಪ್ರತಿಯೊಬ್ಬ ರೈತನು ಕೆಂಪಗೆ ಕಾದ ಬಳೆಯನ್ನು ಹಂದಿಯ ತಲೆಯ ಮೇಲೆ ಇರಿಸಿ ನಂತರ ತನ್ನ ರಾಸುಗಳ ಮೇಲೆ ಇಡುತ್ತಾರೆ. ಇದನ್ನು ‘ಬುಲ್ ಕೊಡುವುದು’ ಎಂದು ಕರೆಯುತ್ತಾರೆ.

ಊರಿನ ದನಕರುಗಳೆಲ್ಲ ಬುಲ್ ಹಾಕಿಸಿಕೊಂಡ ನಂತರ ಅರೆ ಬರೆ ಜೀವಂತವಾಗಿರುವ ಹಂದಿಯನ್ನು ಪೂರ್ಣ ಸಮಾಧಿ ಮಾಡುತ್ತಾರೆ. ಸಮಾಧಿಯನ್ನು ಮೂರು ದಿನಗಳವರೆಗೆ ವಾಲಿಕಾರರು ಕಾಯುತ್ತಾರೆ. ಅಂದಿನಿಂದ ಆ ಸ್ಥಳ ಊರಿನವರಿಗೆ ಲಕ್ಷ್ಮಿಯ ಆವಾಸಸ್ಥಾನ ಎಂದೇ ಭಾವಿಸುತ್ತಾರೆ. ಇದೊಂದು ಕ್ರೂರ ಆಚರಣೆಯಾಗಿದ್ದು, ಹಂದಿ ಹಾಗೂ ದನಕರುಗಳ ಮೇಲೆ ನಡೆಯುವ ಮಾರಣಾಂತಿಕ ಹಿಂಸೆಯಾಗಿದೆ.