ಹರಕೆಗಳಲ್ಲಿ ಅನೇಕವು ವಿಚಿತ್ರ ಬಗೆಯವು. ಮುಸ್ಲಿಂ ಗೋರಿಗಳಿಗೆ ಬೀಗ ಹಾಕಿ ಹರಕೆ ತೀರಿಸುವುದು ಒಂದು ಬಗೆ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ಹಿಂಭಾಗದಲ್ಲಿ ಒಂದು ಮುಸಲ್ಮಾನರ ಗೋರಿ ಇದೆ. ಈ ಗೋರಿಗೆ ಹಿಂದೂ ಮುಸ್ಲಿಮರೆನ್ನದೆ ಬೀಗದ  ಹರಕೆ ತೀರಿಸುತ್ತಾರೆ. ವರ್ಷಕ್ಕೆ ಸರಿ ಸುಮಾರು ಸಾವಿರದೈದುನೂರಕ್ಕೂ ಹೆಚ್ಚು ಜನರು ಇಲ್ಲಿ ಹರಕೆ ಸಲ್ಲಿಸುತ್ತಾರೆ. ಗೋರಿಗೆ ಹರಕೆ ಸಲ್ಲಿಸಿ, ಕಟಕಟೆಗೆ ಬೀಗ ಹಾಕಿ ಗೋರಿಗೆ ಸಮಸ್ಕರಿಸಿ, ಪ್ರಾರ್ಥನೆ ಮಾಡಿ, ಬೀಗದ ಕೈ ಯನ್ನು ಒಯ್ಯುತ್ತಾರೆ. ಇಲ್ಲಿ ಎಲ್ಲಾ ವಯೋಮಾನದ ಭಕ್ತರು ಬೀಗದ ಹರಕೆ ಸಲ್ಲಿಸುತ್ತಾರೆ. ಮದುವೆ ಆಗದವರು, ನೌಕರಿಗಾಗಿ, ಕಷ್ಟ ಗಳಿಂದ ಪಾರಾಗಲು, ವ್ಯಾಪಾರಿ ಗಳು, ಕೂಲಿಕಾರ್ಮಿಕರು, ಮಕ್ಕಳ ಫಲ ಬೇಡುವವರು ಇತ್ಯಾದಿ ಫಲಗಳನ್ನು ಬೇಡುವ ಭಕ್ತರನ್ನು ಇಲ್ಲಿ ಕಾಣಬಹುದು. ಇಲ್ಲಿ ಬಗೆ ಬಗೆಯ ಬೀಗಗಳನ್ನು ಕಾಣ ಬಹುದು. ಅವರವರ ಅಂತಸ್ತಿಗೆ ತಕ್ಕಂತೆ ಹರಕೆ ಬೀಗಗಳನ್ನು ಹಾಕುವುದನ್ನು ಕಾಣಬಹುದು. ಹೀಗಾಗಿ ಇಲ್ಲಿ ಮಾವಿನ ಕುರ್ಚಿ ಬೀಗದಿಂದ ಹಿಡಿದು ಗೋದ್ರೇಜ್ ಲಾಕ್‌ನವರೆಗೆ, ಅಜ್ಜಿ ಪೆಟ್ಟಿಗೆಯ ಪುಟಾಣಿ ಬೀಗದಿಂದ ಸಂತೆಪೇಟೆಯ ಗುಡಾಣ ಗಾತ್ರದ ಬೀಗದವರೆಗೆ ಎಲ್ಲಾ ರೀತಿಯ ಬೀಗಗಳನ್ನು ಕಾಣಬಹುದು. ಹೀಗೆ ಹರಕೆ ಸಲ್ಲಿಸಿದ ಬೀಗಗಳನ್ನು ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ತೆಗೆದು ಮಾರುವ ಪದ್ಧತಿ ಇದೆ. ಬೀಗಗಳನ್ನು ತೆಗೆಯುವುದಕ್ಕೆ ಕಬ್ಬಿಣದ ಕಡ್ಡಿಗಳನ್ನು ಬಳಸುತ್ತಾರೆ. ಇದು ಹಿಂದೂ ಮುಸ್ಲಿಂ ಭಾವೈಕ್ಯಕ್ಕೆ ಸಾಕ್ಷಿ ನೀಡುವ ಆಚರಣೆಯಾಗಿದೆ.