ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ದೈವ ಅಂಕಾಲಮ್ಮ. ಪೂರ್ವಾಭಿಮುಖವಾಗಿರುವ ದೇವಾಲಯದ ಎದುರು ಕೊಂಡ ಹಾಯುವ ಸ್ಥಳವಿದೆ. ಮಹಿಷಮರ್ದಿನಿಯ ಅವತಾರದಂತಿರುವ ಏಕಶಿಲಾ ವಿಗ್ರಹವು ಗರ್ಭಗೃಹಕ್ಕೆ ಹೊಂದಿಕೊಂಡಿದೆ. ಅಮ್ಮನಿಗೆ ಉತ್ಸವದಂದು ಸೀರೆ, ಬಳೆ, ಆಭರಣ ಇತ್ಯಾದಿಗಳಿಂದ ಅರ್ಚಕರು ಅಲಂಕರಿಸುತ್ತಾರೆ. ನಾಲ್ಕರಿಂದ ಐದು ತಲೆಮಾರಿನಿಂದ ಇದನ್ನು ಕುರುಬ ಜನಾಂಗದವರೇ ನಡೆಸುತ್ತಾ ಬಂದಿದ್ದಾರೆ. ಕುರುಬರನ್ನುಳಿದು ಇತರ ವರ್ಗದವರಿಗೆ ಗರ್ಭಗುಡಿಗೆ ಪ್ರವೇಶ ನಿಷಿದ್ಧ. ಉತ್ಸವದ ಸಂದರ್ಭದಲ್ಲಿ ದೇವಿಗೆ ಭಕ್ತರು ಬಾಳೆದಿಂಡಿನ ಪವಾಡ, ಪಾಯಸ ಪವಾಡ, ಕೊಂಡ ಪವಾಡಗಳನ್ನು ಮಾಡುತ್ತಾರೆ. ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಉತ್ಸವದಲ್ಲಿ ಹೊಸಪೇಟೆ, ಕಾರಿಗನೂರು, ಗುಂಡಲ ವದ್ದಿಗೇರಿ, ಬೈಲುವದ್ದಿಗೇರಿ, ಗಾದಿಗನೂರು ಹಾಗೂ ತೋರಣಗಲ್ಲು ಇತ್ಯಾದಿ ಸುತ್ತಲ ಊರುಗಳ ಜನ ಸೇರುತ್ತಾರೆ. ರಾತ್ರಿಯ ಉತ್ಸವದಲ್ಲಿ ಎಲ್ಲಾ ಪವಾಡಗಳನ್ನು ಮಾಡುವುದು ಇಲ್ಲಿನ ವಿಶೇಷ. ಅದರಲ್ಲಿ ಬಾಳೆದಿಂಡಿನ ಪವಾಡ ವೈಶಿಷ್ಠ್ಯಗಳಿಂದ ಕೂಡಿದೆ. ಎಲ್ಲಾ ಪವಾಡಗಳಿಗಿಂತ ಮೊದಲು ಬಾಳೆದಿಂಡಿನ ಪವಾಡ ನಡೆಯುತ್ತದೆ. ಬಾಲಕನನ್ನು ಹೊತ್ತ ಬಾಳೆದಿಂಡು ಪವಾಡ ದೇವಿಗೆ ಮೂರನೇ ಸುತ್ತಿನ ಪ್ರದಕ್ಷಿಣೆ ಬಂದಾಗ ಬಾಲಕನ ಜೀವ ಹೋಗಿರುತ್ತದೆಂದು ಜನ ನಂಬಿರುತ್ತಾರೆ. ಈ ಸಂಬಂಧ ದೇವಿಯನ್ನು ಜೋಗತಿಯರು ಹೀನಾಯವಾಗಿ ಬಯ್ಯುತ್ತಾರೆ. ನಂತರ ಬಾಲಕನು ಮೊದಲಿನಂತಾಗುವನು. ಅಲ್ಲಿ ನೆರೆದ ಭಕ್ತವೃಂದ ಬಾಳೆದಿಂಡಿಗೆ ಕಟ್ಟಿದ ಕಟ್ಟನ್ನು ಪಡೆಯಲು ಕಾತರರಾಗಿ ಕಾಯುತ್ತಿರುತ್ತಾರೆ. ನಂತರ ಕಟ್ಟನ್ನು ಪಡೆಯುತ್ತಾರೆ. ಕಟ್ಟನ್ನು ಪ್ರಸಾದದಂತೆ ಸ್ವೀಕರಿಸುತ್ತಾರೆ. ರಾತ್ರಿಹೊತ್ತು ದೇವಾಲಯದಲ್ಲಿ ಯಾರು ಮಲಗುವಂತಿಲ್ಲ. ದೇವಿ ರಾತ್ರಿ ಹೊತ್ತು ಭಯಾನಕ ರೂಪದಲ್ಲಿ ಗಸ್ತು ತಿರುಗುತ್ತಾಳೆಂದು ನಂಬಿಕೆ ಇದೆ.