ತುಳುನಾಡಿನ ಮರಾಟಿ ನಾಯ್ಕರ ಆಚರಣಾತ್ಮಕ ಕುಣಿತ. ಪ್ರತಿವರ್ಷ ಮಾಯಿ ತಿಂಗಳ ಚತುರ್ಥಿಯಿಂದ ಹುಣ್ಣಿಮೆಯವರೆಗೆ ನಡೆಯುತ್ತಿತ್ತು ಈಗ ಕಣ್ಮರೆಯಾಗಿದೆ.  ಕಲಾ ತಂಡದಲ್ಲಿ ಸುಮಾರು ಹನ್ನೊಂದು ಮಂದಿ ವೇಷಧಾರಿಗಳಿರುತ್ತಾರೆ. ಸನ್ಯಾಸಿ, ಪೂಜೆಭಟ್ಟ, ಪೂಜಾರಿ, ಗುರಿಕಾರ, ಕೊರಜ್ಜಿಕೊರಪೊಳು, ಕೊರಗ, ಸಾಹೇಬ, ಮಂಗ ಕುಣಿಸುವವ ಇತ್ಯಾದಿ ವೇಷಗಳಿರುತ್ತವೆ. ಬಂಟ್ವಾಳ, ಕಾಸರಗೋಡಿನ ಎಣ್ಮಕಜೆ, ಕೋಡಂದೂರು ಪ್ರದೇಶಗಳಲ್ಲಿ ಪ್ರಚಲಿತವಿತ್ತು. ಶೃಂಗೇರಿ ಶಾರದಾಂಬೆಯ ಆರಾಧನಾ ನೃತ್ಯವೆಂದು ಹೇಳಲಾಗಿದೆ. ಎಲ್ಲರೂ ಸೇರಿ ಕಾಸರಕನ ಮರವೊಂದರ ಬುಡದಲ್ಲಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ, ಶ್ರೀ ಶಾರದಾಂಬೆಯನ್ನು ಸ್ಮರಿಸುತ್ತಾರೆ. ನಂತರ ವೇಷ ಕಟ್ಟಿದ ಪಾತ್ರಧಾರಿಗಳು ಮನೆ ಮನೆಗೂ ಹೋಗಿ ನೃತ್ಯ ಪ್ರದರ್ಶನ ಮಾಡುತ್ತಾರೆ. ತಂಡದ ನಾಯಕ ಮರಾಠಿ ಭಾಷೆಯ ಹಾಡು ಹೇಳುತ್ತಾನೆ. “ಶೃಂಗೇರಿಚೆ ಶಿಷ್ಯರಮಿ, ಬಾಲ್‌ಬಾಲ್ಯೊ ಬಾಲೆಸಾಂತು, ಕಾಟ್‌ಮಠೊ ಜೋಗಿರಮಿ, ಬಾಲ್ ಬಾಲ್ಯೊ ಬಾಲೆ ಸಾಂತು” ಅದರಂತೆ “ಕಲಾವಿದರು ಬಾಲ್ ಬಾಲೋ ಬಾಲೆಸಾಂತು” ಎಂಬ ಸೊಲ್ಲನ್ನು ಹೇಳುತ್ತಾ ಕುಣಿಯುತ್ತಾರೆ. ಅವರ ಹಾಡುಗಳು ಶೃಂಗೇರಿಯ ಶಾರದ ಮಾತೆ ವರ್ಣನೆಗಳಿಂದ ಕೂಡಿವೆ. ಪ್ರತಿ ಮನೆಯವರಲ್ಲೂ ದಾನವಾಗಿ ಅಕ್ಕಿ, ಭತ್ತ ಹಾಗೂ ಹಣವನ್ನು ಪಡೆಯುತ್ತಾರೆ. ಎಂಟು ದಿನಗಳವರೆಗೆ ಪ್ರದರ್ಶನ ನಡೆದು ಮಾಯಿ ಹುಣ್ಣಿಮೆಯೆಂದು ಮುಕ್ತಾಯವಾಗುತ್ತದೆ.

ಗದ್ದೆಯ ನಿಗದಿತ ಸ್ಥಳವೊಂದರಲ್ಲಿ ಹತ್ತಾರು ಒಲೆಗಳನ್ನು ಕಲ್ಲುಗಳಿಂದ ನಿರ್ಮಿಸಿ, ಸಂಗ್ರಹವಾದ ದವಸಧಾನ್ಯ ಇತ್ಯಾದಿಗಳಿಂದ ಅಡುಗೆ ತಯಾರಿಸುತ್ತಾರೆ. ಬಯಲಿನಲ್ಲಿ ಹಾಗೂ ಕಾಸರಕನ ಮರದ ಬುಡದಲ್ಲಿ ಎಲೆಯ ಮೇಲೆ ರೊಟ್ಟಿ, ಮೀನುಪಲ್ಯ, ಹುರುಳಿ ಇತ್ಯಾದಿ ತಿನಿಸುಗಳನ್ನು ಬಡಿಸಿ, ಎಡೆ ಅರ್ಪಿಸಿ ಪೂಜಿಸುತ್ತಾರೆ. ನಂತರ ಅಲ್ಲಿ ಸೇರಿದ ಎಲ್ಲರೂ ಸಹ ಭೋಜನ ಮಾಡುತ್ತಾರೆ. ಕುಣಿತದಲ್ಲಿರುವ ಕಲಾವಿದರು ವೇಷ ಕಟ್ಟಿದ ಮೇಲೆ ಮದ್ಯಪಾನ  ಹಾಗೂ ಮಾಂಸಾಹಾರ ಮಾಡುವಂತಿಲ್ಲ. ಒಮ್ಮೆ ಕುಣಿತಕ್ಕೆ ಸೇರಿದ ಕಲಾವಿದ ಮೂರು ವರ್ಷಗಳವರೆಗೂ ಬಾಲೆಸಾಂತು ಸಂದರ್ಭದಲ್ಲಿ ನಡೆಯುವ ಕುಣಿತದ ಮೇಳದಲ್ಲಿ ಭಾಗವಹಿಸಬೇಕೆಂಬ ನಿಯಮವಿದೆ. ಪ್ರತಿ ವರ್ಷ ಸಂಪ್ರದಾಯದಂತೆ ಶ್ರೀಕ್ಷೇತ್ರ ಶೃಂಗೇರಿ ಮಠಕ್ಕೆ ಕಾಣಿಕೆ ಕಳುಹಿಸುತ್ತಾರೆ. ಬಾಲೆಸಾಂತು ಆಚರಣೆಯಿಂದ ಊರಿನ ಅನಿಷ್ಟಗಳು, ಜನ – ಜಾನುವಾರುಗಳ ರೋಗರುಜಿನಗಳು ದೂರವಾಗುತ್ತದೆಂದು ನಂಬುತ್ತಾರೆ.