ಎಲೆ ತೋಟಗಾರರ ದೈವ. ಗೌರಿಹಬ್ಬದ ದಿನ ಅಥವಾ ಹಬ್ಬ ಕಳೆದು ಒಂಬತ್ತನೇ ದಿನದಲ್ಲಿ ಎಡೆ ಅರ್ಪಿಸಿ ಪೂಜಿಸುತ್ತಾರೆ. ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಈಗಲೂ ಆಚರಣೆ ಪ್ರಚಲಿತವಿದೆ. ಪೂಜನೀಯ ವಸ್ತುವಾಗಿ ಬಳಕೆಯಾಗುವ ‘ಎಲೆ’ ಬೆಳೆಗಾರನ ದೃಷ್ಟಿಯಲ್ಲಿ ಸಾಕ್ಷಾತ್ ಗೌರಿಯ ಅವತಾರ. ಅದು ಅವಳ ದೇವಾಲಯ. ಈ ಹಿನ್ನೆಲೆಯಲ್ಲಿ ವೀಳ್ಯದೆಲೆ ತೋಟಗಳ ಬಗೆಗೆ ರೈತರಿಗೆ ಎಲ್ಲಿಲ್ಲದ ಭಕ್ತಿ, ಗೌರವ – ನಂಬಿಕೆಗಳು ಹೆಚ್ಚು. ಅವರ ಪ್ರಕಾರ ವೀಳ್ಯದೆಲೆ ದೇವಲೋಕದ್ದು, ಅದನ್ನು ಭೂಮಿಗೆ ತಂದದ್ದು ಪಾಂಡವರು. ಬೊಮ್ಮಪ್ಪನೆಂಬ ಗಂಗಾಮತಸ್ಥನು ಶಾಶ್ವತವಾಗಿ ಭೂಮಿಯಲ್ಲಿ ಉಳಿಯುವಂತೆ ಮಾಡಿದನು. ಬೊಮ್ಮಪ್ಪ ಮತ್ತು ವೀಳ್ಯದೆಲೆ ಸಂಬಂಧ ಕುರಿತು ಜನಪದ ಕಥೆಯೊಂದು ಹೀಗಿದೆ.

ಗಜಗೌರಿ ವ್ರತವನ್ನು ಕುಂತಿದೇವಿ ಆಚರಿಸುವ ವೇಳೆ ಅದಕ್ಕೆ ಬೇಕಾದ ವಸ್ತುಗಳನ್ನು ಅರ್ಜುನನು ದೇವಲೋಕದಿಂದ ತರಿಸಿದನಂತೆ. ಆಗ ಬಂದ ವಸ್ತುಗಳಲ್ಲಿ ವೀಳ್ಯದೆಲೆಯೂ ಒಂದು. ಗಜಗೌರಿ ವ್ರತ ಮುಗಿದ ನಂತರ ಆ ವಸ್ತುಗಳೆಲ್ಲ ಕರಾರಿನಂತೆ ದೇವಲೋಕದ ಕಡೆಗೆ ಪ್ರಯಾಣ ಬೆಳೆಸಿದವು. ಆಗ ಅವುಗಳನ್ನು ಹೋಗಲು ಬಿಡದೆ ಕಟ್ಟಿ ಹಾಕಿದರಂತೆ. ಭೀಮ, ಐರಾವತವನ್ನು ಕಟ್ಟಿದರೆ, ಧರ್ಮರಾಯ ಅವರೇಕಾಳನ್ನು, ನಕುಲ – ಸಹದೇವರು ಭತ್ತ ವನ್ನು ಕಟ್ಟಿಹಾಕಿದರಂತೆ. ಬೊಮ್ಮಪ್ಪನು ವೀಳ್ಯದೆಲೆ ಅಂಬನ್ನು ಕಟ್ಟಿ, ಭೂಮಿಯಲ್ಲಿ ಉಳಿ ಯುವಂತೆ ಮಾಡಿದನಂತೆ. ಅವನ ನೆನಪಿ ಗಾಗಿಯೇ ಈ ಹಬ್ಬ ಆಚರಿಸುತ್ತಿದ್ದೇವೆ ಎಂದು ಹೇಳುತ್ತಾರೆ.

ತೋಟದಲ್ಲಿ ಪೂಜೆಗಾಗಿ ಪೂರ್ವ ದಿಕ್ಕಿನ ದೇವಮೂಲೆಯಲ್ಲಿ ಚಿಕ್ಕದೊಂದು ಚಪ್ಪರ ಹಾಕಿ, ಬಾಳೆ, ಮಾವು ಇತ್ಯಾದಿಗಳಿಂದ ಶೃಂಗರಿಸಿ, ತೆಂಗಿನಕಾಯಿಯ ಮೇಲೆ ಗೌರಿಯ ಮುಖವನ್ನು ಬರೆದು ಕಲಶ ಪ್ರತಿಷ್ಠಾಪಿಸಿ, ವಾಲೆ, ಜುಮುಕಿ, ಬಳೆ, ಸರ ಇತ್ಯಾದಿಗಳನ್ನು ತೊಡಿಸಿ, ಹೊಸ ಸೀರೆ ಹಾಗೂ ರವಿಕೆ ಉಡಿಸಿ ಶೃಂಗರಿಸುತ್ತಾರೆ. ಅಲ್ಲದೆ ಪಕ್ಕದಲ್ಲಿ ತೋಟದಲ್ಲಿ ಬಳಸುವ ಕುಡುಗೋಲು ಏಣಿ, ಬಗುರು, ನೀರಿನ ಗುಂಬ ಇತ್ಯಾದಿಗಳನ್ನು ಜೋಡಿಸಿ, ವಿಶೇಷವಾಗಿ ಸೇವಂತಿಗೆ ಹೂಹಾರಗಳಿಂದ ಅಲಂಕರಿಸುತ್ತಾರೆ. ಎಳ್ಳಿನ ಚಿಗಳಿ, ಅಕ್ಕಿಯ ತಂಬಿಟ್ಟು ಇತ್ಯಾದಿ ಸಿಹಿ ಅಡುಗೆಗಳನ್ನು ಎಡೆ ಇಡುತ್ತಾರೆ. ಮೊದಲು ಗಂಗೆಯನ್ನು ಪೂಜಿಸಿದ  ಮುತ್ತೈದೆಯರು ನಂತರ ಗೌರಿಯನ್ನು ಪೂಜಿಸಿ ಅಕ್ಷತೆ ಹಾಕಿ, ಬಾಗಿನ ಕೊಡುತ್ತಾರೆ.

ವಿಶೇಷವಾಗಿ ಬೊಮ್ಮಪ್ಪನಿಗೆ ಪೂಜಿಸುವವರು ಹೆಂಗಸರಾದರೂ  ಎಡೆ ಹಾಕುವ ಕೆಲಸ ಗಂಡಸರದು. ಜೀರಿಗೆ ಮೆಣಸಿನಿಂದ ಮಾಡಿದ ಕಿಚಡಿ ಅನ್ನ, ನೀರು ಮತ್ತು ಗಂಧದ ಕಡ್ಡಿ ಹಿಡಿದ ವ್ಯಕ್ತಿಗಳು ತೋಟವನ್ನು ಮೂರು ಸುತ್ತು ಹಾಕುತ್ತಾರೆ.  ಬೊಮ್ಮಪ್ಪೊ, ಬೊಮ್ಮಪ್ರೋವರಗುಡ್ಲು ಮಡಗಿವ್ನಿ, ಉಗುರು ಮಡಗಿವ್ನ್ಛಿ ಏಣಿ ಮಡಗಿವ್ನಿ, ಗುಂಬ ಮಡಗಿವ್ನಿ, ನಿಂಗೆ ಬೇಕಾದ್ದೆಲ್ಲ ಮಡಗಿವ್ನಿ ಊಟ ಮಾಡಿ ಬೊಮ್ಮಪ್ರೋಒಳ್ಳೇದು ಮಾಡು ಬೊಮ್ಮಪ್ರೋಎಂದು ಹೇಳುತ್ತಾ ಕಿಚಡಿ ಅನ್ನ, ನೀರು ಎರಚುತ್ತಾರೆ.

ವೀಳ್ಯದೆಲೆಯ ಔಷಧಿ ಗುಣವೇ ಅದಕ್ಕೆ ದೈವತ್ವವನ್ನು ತಂದಿದೆ. ಎಲೆಯನ್ನು ಬಳಸದ ಆಚರಣೆ ಇಲ್ಲವೆಂದೇ ಹೇಳಬೇಕು. ಮಗುವನ್ನು ಎತ್ತಿಕೊಂಡು ನದಿ ದಾಟಿದ ತಾಯಿ ಎಲೆ ಅಡಿಕೆಯನ್ನು ನೀರಿಗಿಡುವುದು, ಸಂಬಂಧಿ ಬೆಳೆಸುವಾಗ, ಕೊಟ್ಟು ತೆಗೆದುಕೊಳ್ಳುವಾಗ, ಬಾಗಿನ ಕೊಡುವಾಗ, ಹೀಗೆ ಎಲ್ಲದಕ್ಕೂ ವೀಳ್ಯದಲೆ ಬಹು ಉಪಯೋಗಿ.