ವರ್ಷವಿಡೀ ಅನ್ನ ನೀಡುವ ಭೂಮಿ ತಾಯಿಗೆ ಋಣ ತೀರಿಸುವ ಹಬ್ಬ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸಾಸ್ವಿಹಳ್ಳಿ ಹಾಗೂ ಸುತ್ತಲಿನ ಊರುಗಳಲ್ಲಿ ಭೂಮಿ ಹುಣ್ಣಿಮೆಯಂದು ತೆಂಗಿನ ಮರವೊಂದಕ್ಕೆ ಲಕ್ಷಣವಾಗಿ ಸೀರೆ ತೊಡಿಸಿ, ತಂಬಿಗೆ ಮೇಲೆ ಲಕ್ಷ್ಮಿಯ ವಿಗ್ರಹವಿರಿಸಿ, ಹೂವು, ಸಿಂಗಾರಗಳಿಂದ ಸುಂದರಗೊಳಿಸಿ ಭೂತಾಯಿಯಂತೆ ಭಕ್ತಿಯಿಂದ ಕಾಣುತ್ತಾರೆ. ಪ್ರತಿ ವರ್ಷ ಪೂಜೆಗಾಗಿ ಬೇರೆ ಬೇರೆ ತೆಂಗಿನ ಮರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಅಡಿಕೆ ಮರ, ಭತ್ತದ ಗದ್ದೆ, ಶೇಂಗಾ ಹೊಲ ಇತ್ಯಾದಿ ತಾವು ಬೆಳೆದ ಹೊಲಗಳಲ್ಲಿ ಭೂಮಿ ತಾಯಿಯನ್ನು ಮಾಡಿ, ಚಪ್ಪರ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಿ ಪೂಜಿಸುವ ಪದ್ಧತಿ ಯನ್ನು ಕಾಣಬಹುದು.

ಅಂದಿನ ಎಡೆಗಾಗಿ ಹೆಂಗಸರು ಬಗೆ ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಗಂಡು ಮಕ್ಕಳು ಎತ್ತಿನ ಬಂಡಿ ಇತ್ಯಾದಿ ವಾಹನಗಳನ್ನು ತೊಳೆದು ಸಿಂಗರಿಸಿ, ಹೊಸ ಬಟ್ಟೆ ಧರಿಸಿ ಭೂಮಿ ಪೂಜೆಗೆ ಹೊಲದ ಕಡೆ ಹೊರಡುತ್ತಾರೆ. ಭೂತಾಯಿ ಎದುರು ಎರಡು ಎಡೆ ಇರಿಸಿ, ಊದುಬತ್ತಿ, ಕರ್ಪೂರದಾರತಿ ಬೆಳಗಿ ನಮಿಸುತ್ತಾರೆ. ನಂತರ ಒಂದು ಎಡೆಯನ್ನು ಭೂತಾಯಿ  ಎದುರು ಸಣ್ಣ ತಗ್ಗು ತೆಗೆದು ಅದರಲ್ಲಿ ಎಡೆಯನ್ನು ಇಟ್ಟು ಮಣ್ಣು ಮುಚ್ಚುತ್ತಾರೆ.  ಉಳಿದ ಇನ್ನೊಂದು ಎಡೆಯನ್ನು ಪಾತ್ರೆಗೆ ಹಾಕಿಕೊಂಡು ಬೆಳೆದು ನಿಂತ ಪೈರಿಗೆ ಚೆಲ್ಲಿ ‘ಹುಲಿಗ್ಯ’ ಎಂದು ಹೇಳುತ್ತಾರೆ. ನಂತರ ಎಲ್ಲರೂ ಕುಳಿತು ಹಬ್ಬದ ಊಟ ಮಾಡುತ್ತಾರೆ. ಹುಗ್ಗಿ ಪಾಯಸ, ಕರ್ಜಿಕಾಯಿ ಅಂದಿನ ವಿಶೇಷ.

ಮಲೆನಾಡಿನ ಕೆಲವು ಭಾಗಗಳಲ್ಲಿ ಭೂಮಿಹುಣ್ಣಿಮೆಯಂದು ತೆಂಗಿನಮರ ಹಾಗೂ ಅಡಿಕೆ ಮರಗಳನ್ನು ಪೂಜಿಸುವ ಪದ್ಧತಿ ಇದೆ. ತೆಂಗಿನ ಮರವನ್ನು ಮುಕ್ಕಣ್ಣೇಶ್ವರ ಎಂದು ಭಾವಿಸಿ, ಅದಕ್ಕೆ ಪಂಚೆ, ಟವೆಲ್‌ಗಳನ್ನು ಹೊದಿಸಿ, ಸಿಂಗರಿಸುತ್ತಾರೆ. ಅಡಿಕೆ ಮರವನ್ನು ಹೆಣ್ಣು ದೇವರೆಂದು ಪರಿಗಣಿಸಿ, ಸೀರೆ ಮತ್ತು ತಾಳಿ, ಬಳೆ, ಬಿಚ್ಚೋಲೆ ಒಡವೆಗಳನ್ನು ಹಾಕಿ, ಶೃಂಗಾರ ಮಾಡಿ ‘ಲಕ್ಷ್ಮೀ’ ಎಂದೇ ಭಾವಿಸುತ್ತಾರೆ. ಅಂದು ಅವರವರ ತೋಟಗಳಲ್ಲಿ ಭಕ್ತರು ಮುಕ್ಕಣ್ಣೇಶ್ವರ ಹಾಗೂ ಲಕ್ಷ್ಮೀಯನ್ನು ಸ್ಥಾಪಿಸಿ ಪೂಜಿಸುವುದು ಇಲ್ಲಿಯ ವಿಶೇಷತೆಗಳಲ್ಲಿ ಒಂದು. ಅಂದು ತರತರದ ಅಡುಗೆ-ಪದಾರ್ಥಗಳೊಂದಿಗೆ ಹೂ-ಹಣ್ಣು, ನಗ ನಾಣ್ಯಗಳೊಂದಿಗೆ ಭೂಮಿತಾಯಿಯನ್ನು ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ. ತೆನೆಯೊಡೆಯುವ ಆ ಸಂದರ್ಭದಲ್ಲಿ ಭೂಮಿತಾಯಿ ಗರ್ಭಿಣಿ ಆದಳೆಂದು ಭಾವಿಸಿ, ಆಕೆಯ ಬಯಕೆ ತೀರಿಸುವ ‘ಸೀಮಂತ’ ದಿನವೆಂದು ಭಕ್ತಿಯಿಂದ ಪೂಜಿಸುತ್ತಾರೆ. ಅಂದು ಕಾಗೆ, ಇಲಿಗಳಿಗೂ ಎಡೆ ಹಾಕಿ, ಭಕ್ತಿ ಗೌರವಗಳಿಂದ ಪೂಜಿಸುತ್ತಾರೆ. ಭೂಮಿ ಪೂಜೆಯ ನಂತರ ನೈವೇದ್ಯವನ್ನು ಗಂಡಸರು ಮಣ್ಣಿನಲ್ಲಿ ಹೂತು ಹಾಕುತ್ತಾರೆ. ಅಲ್ಲದೆ ಹಲವು ಬಗೆಯ ತರಕಾರಿಗಳಿಂದ ಮಾಡಿದ ಅನ್ನ, ಮೊಸರು, ಮಜ್ಜಿಗೆ, ತುಪ್ಪಗಳಿಂದ ತಯಾರಿಸಿದ ಚರಗವನ್ನು ತಮ್ಮ ತಮ್ಮ ಗದ್ದೆ ತೋಟಗಳಿಗೆ ಚೆಲ್ಲುತ್ತಾರೆ.

ಗುಡಿಯ ಮೇಲೆ ಠೀವಿಯಿಂದ ನಿಂತ ಸಾಬಣ್ಣ ಭವಿಷ್ಯ ನುಡಿಯುತ್ತಾನೆ. “ವೀರಾಧಿವೀರ ಬಂದಾನ, ಭೂತಾಳ ಸಿದ್ಧ ಬಂದಾನ, ಕೇಳೆಂದ ಜಂಗಮ, ಸೂರ್ಯ ಮೂಡಲಿಗೆ ಸೂರ್ಯ ಮುಳುಗಲಿಗೆ ಕೋಳಿ ಕೂಗದ ಹಳ್ಳಿಗೆ ಇಡೀ ಚಪ್ಪನ್ನಾರ ದೇಶದ ಒಕ್ಕಲಿಗನಿಗೆ ಕೊಟ್ಟ ಭಾಷೆ ತಪ್ಪೊದಿಲ್ಲಂತ ಹೇಳ್ತಾನ ಜಂಗಮ” ಎಂದು ಹೇಳಿ ಗುಡಿಯಿಂದ ಕೆಳಗಿಳಿಯುತ್ತಾನೆ. ಸಾಬಣ್ಣ ಅರ್ಧ ನಿಮಿಷದಲ್ಲಿ ಹೇಳಿದ ಮಂತ್ರವಾಕ್ಯಗಳನ್ನು ಜನರು ತಮಗೆ ತಿಳಿದಂತೆ ನಾನಾ ರೀತಿಯಲ್ಲಿ ಅರ್ಥೈಸುತ್ತಾರೆ;

ಸಾಬಣ್ಣ ಈವರೆಗೆ ಹೇಳಿದ ಭವಿಷ್ಯವಾಣಿಗಳು ಕೆಳಗಿನಂತಿವೆ.

  • “ಕಪ್ಪತ್‌ಗುಡ್ಡ ಚಿದ್ರ ಚಿದ್ರ ಆಗುತ್ತ” ಇದನ್ನು ಇಂದಿರಾಗಾಂಧಿ ಹತ್ಯೆ ಆಗುತ್ತದೆಂದು ಅರ್ಥೈಸಲಾಗಿದೆ.
  • “ಕರೆ ಹೊಲದಾಗ ಬಿಳೆ ಗೂಳಿ ಮಲಗೇತಿ ಎಬಸಾಕ ವ್ಯಾಳೆ ಇಲ್ಲ” ಆ ವರ್ಷ ಬರಗಾಲ ಎಂದು ಅರ್ಥೈಸಲಾಗಿದೆ.
  • “ಕೂಲಿಕಾರ ಕುದುರಿ ಏರತಾನ” ಆ ವರ್ಷ ಮಳೆ-ಬೆಳೆ ಚೆನ್ನಾಗಿ ಆಗಿ ಕೂಲಿಕಾರರಿಗೆ ಕೈತುಂಬ ಹಣ ಬರುವುದೆಂದು ಅರ್ಥವಿದೆ (೧೯೯೫).
  • “ಮುತ್ತು ಒಡದ ಮೂರು ತುಂಡು ಆಗತ್ಯ” ಬಾಂಬ್ ಸ್ಫೋಟಗೊಂಡು ರಾಜೀವಗಾಂಧಿ ಹತ್ಯೆ ಆಗುವ ಗೂಢಾರ್ಥವಿದೆ (೧೯೯೫).
  • “ಅಖಂಡ ಬೆಳೆ, ಅಖಂಡಗಾಳಿ, ಅಖಂಡ ಸಿಡ್ಲು, ಅಖಂಡ ಮಳಿ” ಆ ವರ್ಷ ಭಯಂಕರ ಸಿಡಿಲು, ಗಾಳಿ, ಮಳೆ, ಬೆಳೆಯು ಹೆಚ್ಚಾಗುತ್ತದೆಂದು ಅರ್ಥವಿದೆ.

ಇಷ್ಟೆ ಅಲ್ಲದೆ ಸಾಬಣ್ಣ ಮಾತಾಡುವ ಮಾತುಗಳಲ್ಲಿಯೂ ಭವಿಷ್ಯವಿದೆ ಎಂದು ಜನ ಹೇಳುತ್ತಾರೆ. ಅದು ಆಯಾಯ ಜನರ ಲೆಕ್ಕಾಚಾರಕ್ಕೆ ಒಳಪಟ್ಟಿರುತ್ತದೆ. ಒಮ್ಮೆ ಅನಾಮಿಕ ವ್ಯಕ್ತಿಯು ಬಂದು ‘ನಾನೂ ಈ ಮನೆಯ ವಂಶಸ್ಥ. ಈ ವರ್ಷ ನಾನೂ ಹೇಳಿಕೆ ಹೇಳುತ್ತೇನೆ ಎಂದು ಸವಾಲು ಹಾಕಿದನಂತೆ. ಊರಿನವರು ಇಬ್ಬರನ್ನು ಒಂದೊಂದು ಕೋಣೆಯಲ್ಲಿ ಹಾಕಿ, ಕೀಲಿ ಹಾಕಿದರಂತೆ. ಸಂಜೆ ಆರು ಗಂಟೆಗೆ ವರ್ಷದ ಹೇಳಿಕೆ ಹೇಳುವ ಸಮಯ ಸಮೀಪ ಬಂದಾಗ ಗುಡಿಯ ನೆತ್ತಿಯ ಮೇಲೆ ಸಾಬಣ್ಣ ನಿಂತಿದ್ದನೆಂದು, ಇತ್ತ ಕೀಲಿ ಹಾಕಿದ್ದು ಹಾಕಿದಂತೆಯೇ ಇತ್ತೆಂದು, ಅನಾಮಿಕ ಕೋಣೆಯೊಳಗೆ ಇದ್ದನೆಂದು, ಜನ ಸಾಬಣ್ಣನ ಪವಾಡವನ್ನು ಮೆಲುಕು ಹಾಕುತ್ತಾರೆ.