ಬಾಗಲಕೋಟೆ ಜಿಲ್ಲೆಯ ಹುನುಗುಂದ ತಾಲ್ಲೂಕಿನ ಹೇಮವಾಡಗಿ ಗ್ರಾಮದೇವತೆ ಹನುಮಂತ. ಯುಗಾದಿಯಂದು ಗುಡಿಯನೇರಿದ ವ್ಯಕ್ತಿಯೊಬ್ಬ ಆ ವರ್ಷದ ಭವಿಷ್ಯವನ್ನು ಗೂಢಾರ್ಥದ ಮೂಲಕ ನೀಡುತ್ತಾನೆ. ಭವಿಷ್ಯವಾಣಿ ಯನ್ನು ಆಲಿಸಲು ಸುಮಾರು ಐದರಿಂದ ಆರು ಸಾವಿರ ಜನ ಅಲ್ಲಿ ಸೇರುತ್ತಾರೆ. ಅಲ್ಲಿಯ ವಿಶೇಷವೆಂದರೆ ಯಾವುದೇ ಉತ್ಸವ, ಜಾತ್ರೆ ಹಾಗೂ ದೇವರ ತೇರೂ ಕೂಡ ಇರುವುದಿಲ್ಲ. ಸಾವಿರಾರು ಜನರು ಬರಿಗೈಲಿ ಬರುತ್ತಾರೆ. ಭವಿಷ್ಯವಾಣಿ ಕೇಳಿ ಊರ ದಾರಿ ಹಿಡಿ ಯುತ್ತಾರೆ.

ಯುಗಾದಿಯ ಸಂಜೆ ಕುರುಬ ಜನಾಂಗಕ್ಕೆ ಸೇರಿದ ಸಾಬಣ್ಣ ಕೆಂಪು ವಸ್ತ್ರ ಧರಿಸಿ, ಹಣೆಗೆ ಭಂಡಾರ ಬಳಿದುಕೊಂಡು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಡೋಲು ಡಂಗುರಗಳೊಂದಿಗೆ ಹನುಮಂತ ಗುಡಿಗೆ ಮೆರವಣಿಗೆ ಯಲ್ಲಿ ಬರುತ್ತಾನೆ. ಸಾಬಣ್ಣ ಸಾವಿರಾರು ಜನರ ಸಮ್ಮುಖದಲ್ಲಿ ಹನುಮಂತ ದೇವರ ಗುಡಿಯನ್ನು ಐದು ಬಾರಿ ಸುತ್ತು ಹಾಕಿ ಧಡಧಢ ಮುನ್ನಡೆದು ಗುಡಿಯನ್ನು ಏರಿ, ತುದಿಗೆ ನಿಲ್ಲುತ್ತಾನೆ. ಅಲ್ಲಿಯವರೆಗೆ ಸದ್ದುಗದ್ದಲದಲ್ಲಿದ್ದ ಜನಸಮೂಹ ತಕ್ಷಣ ಮೌನವಹಿಸಿ, ಸಾಬಣ್ಣನ ಕಡೆ ದೃಷ್ಟಿ ಹಾಯಿಸಿ, ಭವಿಷ್ಯವಾಣಿ ಕೇಳಲು ಕಿವಿಗೊಡುತ್ತಾರೆ.