ದಕ್ಷಿಣ ಕನ್ನಡ ಜಿಲ್ಲೆಯ ಮರಾಟಿ ನಾಯ್ಕ, ಮಲೆಕುಡಿಯ ಹಾಗೂ ಒಕ್ಕಲಿಗ ಸಮುದಾಯದವರ ಆಚರಣೆ. ಸುಳ್ಯ, ಪುತ್ತೂರು, ಬಂಟ್ವಾಳ ಹಾಗೂ ಕಾಸರಗೋಡುಗಳ ಕಡೆ ಪ್ರಚಲಿತವಿದೆ. ಮರಾಟಿ ನಾಯ್ಕರು ಗೋಂದೋಳು ಪೂಜೆಯನ್ನು ಭೈರವನ ಪೂಜೆಯ ಮೂಲಕವೇ ಆರಾಧಿಸುತ್ತಾರೆ. ಇವರ ಆರಾಧ್ಯದೈವ ಮಹಮ್ಮಾಯಿಯ ಭಂಟನೇ ಭೈರವನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ತನ್ನ ಜಮೀನಿನಲ್ಲಿ ಭೈರವನ ಬನಗಳನ್ನು ಪ್ರತಿಷ್ಠಾಪಿಸಿಕೊಂಡು ಪೂಜಿಸುತ್ತಾರೆ. ಭೈರವ ಬನದಲ್ಲಿ ಬಹಳ ಮುಖ್ಯವಾಗಿ ಕಾಸರಕನ ಮರ ಹಾಗೂ ಹಾಲೆಮರಗಳು ಇರಲೇಬೇಕು. ಕಲ್ಲು ಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಭೈರವನನ್ನು ‘ಭೂತದಕಲ್ಲು’ ಎಂದು ಕರೆಯುತ್ತಾರೆ. ಭೈರವ ನಾಗನ ರೂಪದಲ್ಲಿ ಅಭಯ ನೀಡಿ, ಜನ-ಜಾನು ವಾರು ಹಾಗೂ ಊರಿನ ರಕ್ಷಣೆ ಮಾಡುತ್ತಾನೆಂದು ನಂಬುತ್ತಾರೆ. ಈ ಕಾರಣದಿಂದಲೇ ಭೈರವನ ಬನದಲ್ಲಿ ನಾಗನಿಗೂ ಪೂಜೆ ಸಲ್ಲುತ್ತದೆ. ಭೈರವ ಬನದಲ್ಲಿ ನಾಗರಹಾವು ಜೀವಂತವಾಗಿ ಕಾಣಿಸಿ ಕೊಂಡರೆ ಹಾಲೆರೆದು ಪೂಜಿಸುತ್ತಾರೆ. ಕೆಲವು ಭಾಗಗಳಲ್ಲಿ ಬಲಿ ನೀಡಿ ಪೂಜಿಸುವ ಪದ್ಧತಿಯು ಇದೆ.

ಭೈರವ ಪೂಜೆಯೆಂದು ದೈವದ ಪೂಜಾರಿ ಮಡಿಯುಟ್ಟು ಭೈರವ ಬನವನ್ನು ಸ್ವಚ್ಛಗೊಳಿಸಿ, ಪೂಜೆಯ ಸಕಲ ಸಿದ್ಧತೆಗಳನ್ನು ಮಾಡುತ್ತಾನೆ. ಮಡಿಯಿಂದ ಇದ್ದ ಇಬ್ಬರು ಅಂದಿನ ಎಡೆ ಅಡುಗೆಗೆ ತಯಾರಿ ನಡೆಸುತ್ತಾರೆ. ಅಂದು ಸಂಜೆ ಬಂಧುಬಾಂಧವರೊಡಗೂಡಿ ಪೂಜಾ ಸಿದ್ಧತೆಗಳೊಂದಿಗೆ ಭೈರವ ಬನಕ್ಕೆ ಹೋಗುತ್ತಾರೆ. ಪೂಜೆಯಲ್ಲಿ ಹೆಂಗಸರು ಭಾಗವಹಿಸುವಂತಿಲ್ಲ ಎಂಬ ನಿಷೇಧವಿದೆ. ಪೂಜಾರಿಯು ಬನದ ಕಲ್ಲಿನ ಮೇಲೆ ಬೆಳ್ತಿಗೆ, ಅಕ್ಕಿ ಹಾಗೂ ತೆಂಗಿನಕಾಯಿ ಇಟ್ಟು ಪ್ರಾರ್ಥಿಸುತ್ತಾನೆ. ಬನದ ನಾಲ್ಕು ದಿಕ್ಕಿಗೂ ನಾಲ್ಕು ಬಾಳೆ ಎಲೆಯ ಮೇಲೆ ಮಡಿಯಿಂದ ತಯಾರಿಸಿದ ಮೀನಿನ (ತೊರಕೆ) ಪದಾರ್ಥ ಹಾಗೂ ಹುರಳಿಯನ್ನು ಎಡೆಮಾಡಿ ಪೂಜಿಸುತ್ತಾರೆ. ಭಕ್ತಾಧಿಗಳು ತೆಂಗಿನಕಾಯಿ ಹಾಗೂ ಸಾರಾಯಿಯನ್ನು ಅರ್ಪಿಸುತ್ತಾರೆ. ಪೂಜಾರಿಯು ಅಕ್ಕಿ ಮತ್ತು ತೆಂಗಿನಕಾಯಿಗಳನ್ನು ತೆಗೆಯುತ್ತಾನೆ. ಭೂತದ ಕಲ್ಲಿಗೆ ಅನ್ನ ಮತ್ತು ರೊಟ್ಟಿಯನ್ನು ಎಡೆ ಮಾಡುತ್ತಾರೆ. ನಂತರ ಭಕ್ತರು ಬಲಿಗಾಗಿ ತಂದ ಕೋಳಿಗಳನ್ನು ಬಲಿ ನೀಡಿ, ಎಲ್ಲರೂ ಪ್ರಾರ್ಥಿಸಿಕೊಳ್ಳುತ್ತಾರೆ. ನಂತರ ತೀರ್ಥ ಪ್ರಸಾದವಾಗಿ ಸೇಂದಿ ಹಾಗೂ ಬೇಯಿಸಿದ ಮೀನು, ಹುರುಳಿ ನೀಡುತ್ತಾರೆ. ಅಂದು ಎಲ್ಲರಿಗೂ ಕೋಳಿ ಮಾಂಸದ ಊಟವಿರುತ್ತದೆ.