ಚಿತ್ರದುರ್ಗದಲ್ಲಿ ಮದುವೆ ಸಂದರ್ಭದಲ್ಲಿ ಮದುಮಗನಿಗೆ ಹೆಣ್ಣಿನ ಮನೆಯವರು ನೀಡುವ ಊಟದಶಾಸ್ತ್ರ. ಉತ್ತರ ಕರ್ನಾಟಕದ ಭಾಗದಲ್ಲಿ ಇದನ್ನು ‘ಮಸೂಟ’ ಎಂದು ಕರೆಯುತ್ತಾರೆ. ಮಲೆನಾಡಿನ ಕಡೆ ಮದುಮಕ್ಕಳಿಗೆ ನೀಡುವ ಊಟವನ್ನು ಕೋರೂಟ ಎಂದು ಕರೆಯುತ್ತಾರೆ. ಆದರೆ ಮಸಿಯೂಟದ ಆಚರಣೆಗಿಂತ ಭಿನ್ನವಾಗಿದೆ.

ಮದುವೆ ಹಿಂದಿನ ದಿನ ಮಸಿಯೂಟದ ಆಚರಣೆ ನಡೆಯುತ್ತದೆ. ಮದುವೆ ಗಂಡು ಹಾಗೂ ಬೀಗರು ಒಂದು ನಿಗದಿತ ಸ್ಥಳದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಅದನ್ನು ಬಿಡದಿ ಮನೆಯೆಂದು ಕರೆಯುತ್ತಾರೆ. ಸಂಜೆ ಹೊತ್ತಿಗೆ ಹೆಣ್ಣಿನ ಮನೆಯವರು ಬಿಸಿಬಿಸಿ ಅನ್ನವನ್ನು ತಯಾರಿಸಿ, ಅದಕ್ಕೆ ಹಾಲು, ತುಪ್ಪ ಹಾಗೂ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ ತಟ್ಟೆಯೊಂದರಲ್ಲಿ ತುಂಬಿಕೊಳ್ಳುತ್ತಾರೆ. ತಟ್ಟೆಗೆ ಬಿಳಿಯ ವಸ್ತ್ರ ವೊಂದನ್ನು ಮುಚ್ಚಿ, ರೊಟ್ಟಿ ಹೆಂಚನ್ನು ತೊಳೆದು ಅದರ ಮಸಿ ನೀರನ್ನು ಅದರ ಮೇಲೆ ಚಿಮುಕಿಸಿಕೊಂಡು ಯಾರಿಗೂ ಕಾಣದಂತೆ ಮುಚ್ಚಿಕೊಂಡು ಮದುವೆ ಗಂಡಿಗೆ ನೀಡು ತ್ತಾರೆ. ಮದುಮಗನ ಊಟದ ಆಚರಣೆ ನಡೆದ ಮೇಲೆ ಇತರರಿಗೆ ಸಿಹಿಯೂಟ ನೀಡಿ ಸತ್ಕರಿಸುತ್ತಾರೆ. ಉತ್ತರ ಕರ್ನಾಟಕದ ಭಾಗ ಗಳಲ್ಲಿ ಮದುವೆಯ ನಂತರ ಹೆಣ್ಣಿನ ಮನೆಯವರು ತಮ್ಮ ಮಗಳ ಸಂಸಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಗಂಡಿನ ಮನೆಗೆ ಹಣ್ಣು ಹಾಗೂ ಬಗೆ ಬಗೆಯ ಸಿಹಿ ತಿಂಡಿಗಳೊಂದಿಗೆ ಕಳುಹಿಸಿಕೊಡುತ್ತಾರೆ. ಮಸಿ ಊಟವೆಂದರೆ ಮದುಮಗನಿಗೆ ನೀಡುವ ವಿಶೇಷವಾದ ಸಿಹಿ ಊಟವೆಂದು ಅರ್ಥ. ಈ ಆಚರಣೆಯ ಸಂದರ್ಭದಲ್ಲಿ ಹೆಣ್ಣಿನ ಮನೆಯವರು ಹಲವು ಬಗೆಯಲ್ಲಿ ಬೀಗರನ್ನು ಕೀಟಲೆ ಮಾಡುತ್ತಾರೆ. ಅದರಲ್ಲೂ ಮದುಮಗನಿಗಂತೂ ಇನ್ನಿಲ್ಲದಂತೆ ಕಾಡಿಸುತ್ತಾರೆ. ಬೀಗರನ್ನು ಇದಿರುಗೊಳು್ಳವಾಗ “ಎತ್ತಲಿಂದ ಬಂದೀರಿ ನೆತ್ತಿಗಿಷ್ಟು ಎಣ್ಣಿಲ್ಲ, ವಲ್ಲೆ ಮುಂಡಾಸ ವಗೆದಿಲ್ಲ ನಮ ಬೀಗರು, ಕಲ್ಲೇ ಬಾವ್ಯಾಗೆ ಸೆಳಕೊಳ್ಳಿರಿ”, ಹಾಡುವವರು ಇನ್ನೂ ಮುಂದೆ ಬೀಗರ ತಾಳ್ಮೆಯನ್ನು ಮತ್ತು ಅವರಿಗಾಗಿ ಮಾಡಿದ ವಿಶೇಷ ಅಡುಗೆಯ ಬಗ್ಗೆ “ಕಟ್ಟಿ ಹಿಂದೆ ಇರುವ ಬುಟ್ಟಿ ಬದನೆಕಾಯಿ, ತೊಟ್ಟು ತೆಗೆ ಹೊತ್ತಿಗೆ ತಡವಾಯಿತು ನಮಬೀಗರೆ, ತಲ್ಲಣಸದಿರಿ ತರುತೀವಿ ಸೋಬಾನವೇ” ಎಂದು ಹಾಡುತ್ತಾರೆ.