ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳಲ್ಲಿ ದೀಪಾವಳಿಯಂದು ಹಾಲೆ ಮರದ ಕಂಬವನ್ನು ಅಲಂಕರಿಸಿ ಪೂಜಿಸುವುದು. ಬಲಿಪಾಡ್ಯಮಿಯಂದು ಕವಲಿರುವ ಹಾಲೆ ಮರದ ಕಂಬವನ್ನು ಕಡಿದು ತರುತ್ತಾರೆ. ಅಂಗಳದ ತುಳಸಿ ಕಟ್ಟೆಯ ಬಲಭಾಗದಲ್ಲಿ ಕಂಬವನ್ನು ನೆಟ್ಟು ಅದಕ್ಕೆ ಬಾಳೆ ದಿಂಡಿನ ಅಂಕಣ ಹಾಕುತ್ತಾರೆ. ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಮಾವಿನ ತೋರಣ ಕಟ್ಟುತ್ತಾರೆ. ಅಲ್ಲದೆ ಕಾಡಿನಲ್ಲಿ ದೊರಕುವ ಉಗನೇ ಕಾಯಿಗಳ ಸರ, ಪಾರೆ ಹೂ, ಅಂಬಲಿಕಾಯಿ, ನರಿಕೊಂಬು, ಸೀತೆ ಹೂವು, ಸೇವಂತಿಗೆ, ತುಳಸಿಮಾಲೆ, ಕೇಪುಳು, ವೀಳ್ಯದೆಲೆ, ಅಡಿಕೆ ಹಿಂಗಾರ, ಇತ್ಯಾದಿ ಗಳಿಂದ ಅಲಂಕರಿಸುತ್ತಾರೆ. ಹೀಗೆ ಬಿದಿರಿನ ಪ್ರಭಾವಳಿ ಯಿಂದ ಸಿದ್ಧವಾದ ಆಕೃತಿಗೆ ‘ಬಲೀಂದ್ರ’ನೆಂದು ಕರೆಯುತ್ತಾರೆ. ಬಲೀಂದ್ರನ ಎದುರು ರಂಗೋಲಿ ಹಾಕಿ ಚಂದಗೊಳಿಸುತ್ತಾರೆ. ಪುತ್ತೂರು, ಬೆಳ್ತಂಗಡಿ ಇತ್ಯಾದಿ ತಾಲೂಕುಗಳಲ್ಲಿ ಬಲೀಂದ್ರನನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ಪೂಜಿಸುತ್ತಾರೆ. ಈ ಆಚರಣೆಯ ನಂತರ ಭೂತಾರಾಧನೆಗೆ ಚಾಲನೆ ಸಿಗುತ್ತದೆ. ಪತ್ತನಾಜೆಯಂದು ಭೂತಸ್ಥಾನಗಳಿಗೆ ಹಾಕಿದ ಬಾಗಿಲನ್ನು ದೀಪಾವಳಿ ಬಳಿಕವೇ ತೆರೆಯುತ್ತಾರೆ.

ಕಾರ್ತಿಕ ಶುದ್ಧ ಪಾಡ್ಯದಂದು ಸಂಜೆ ಎಲ್ಲರೂ ಸೇರಿ ಬಲೀಂದ್ರನ ಸುತ್ತಲೂ ದೀಪ ಹಚ್ಚುತ್ತಾರೆ. ಅಂದು ಬಲೀಂದ್ರನಿಗೆ ಎಡೆಗಾಗಿ ಬಾಳೆಯ ಎಲೆಯಲ್ಲಿ ಅಕ್ಕಿ, ತೆಂಗಿನಕಾಯಿ, ಹೊದ್ಲು, ಎಳ್ನೀರು, ಅವಲಕ್ಕಿ ಇತ್ಯಾದಿಗಳನ್ನು ಇಡುತ್ತಾರೆ. ಎಡೆಯನ್ನು ದೀಪ ಬೆಳಗಿ, ಆರತಿ ಎತ್ತಿ ಪೂಜಿಸುತ್ತಾರೆ. “ಹರಿ, ಹರಿ ಬಲೀಂದ್ರ…ಸಿರಿ….ಸಿರಿ…ಬಲೀಂದ್ರ ಆ ಊರುದ ಪೊಲಿ ಕೊರುದು ಈ ಊರುದ ಕಲಿ ಪತ್ತೊಂದು ಪೋಲ ಕೂ….” ಎಂದು ಬಲೀಂದ್ರನನ್ನು ಆಹ್ವಾನಿಸುತ್ತಾರೆ. ಈ ಹಬ್ಬಕ್ಕಾಗಿ ಹತ್ತಾರು ಬಗೆಯ ಅಡುಗೆ ಮಾಡಿದ್ದು, ಅಕ್ಕಿ ದೋಸೆ ಅದರಲ್ಲಿ ಪ್ರಮುಖವಾಗಿರುತ್ತದೆ. ಬಲಿ ಮಹಾವಿಷ್ಣುವಿನ ವರದಂತೆ ಪ್ರತಿ ದೀಪಾವಳಿ ಹಬ್ಬದಂದು ಭೂಮಿಗೆ ಬರುತ್ತಾನೆಂದೂ, ದೀಪಗಳನ್ನು ನೋಡಿ ಸಂತೋಷಪಡುವನೆಂದು ನಂಬುತ್ತಾರೆ.