ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ಭಾಗಗಳಲ್ಲಿ ಮರಗಳ ಮದುವೆ ಕಂಡುಬರುತ್ತದೆ. ಅರಳಿ ಮತ್ತು ಬೇವಿನ ಮರಗಳಿಗೆ ಮದುವೆ ಮಾಡುವ ಪದ್ಧತಿ ಬಹು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅರಳಿ ಮತ್ತು ಬೇವಿನ ಮರಗಳ ಮದುವೆ ನಿಜಕ್ಕೂ ಅರ್ಥಪೂರ್ಣವಾಗಿದೆ. ಅರಳಿ ಆಮ್ಲಜನಕವನ್ನು ಬಿಟ್ಟು ಸುತ್ತಲಿನ ವಾತಾವರಣವನ್ನು ಆರೋಗ್ಯಗೊಳಿಸಿ, ಬೇಸಿಗೆಯಲ್ಲಿ ತಂಪು ನೀಡುತ್ತದೆ. ಬೇವು ಅಮೂಲ್ಯ ಔಷಧಿಗಳ ಆಗರವಾಗಿ ಉಪಯುಕ್ತವಾಗಿದೆ. ಈ ಎರಡು ಮರಗಳ ತಳದಲ್ಲಿ ನಿಲ್ಲುವುದು, ಪ್ರದಕ್ಷಿಣೆ ಹಾಕುವುದು  ಆರೋಗ್ಯಕರ.

ಎರಡು ಜೊತೆಯಾಗಿರುವ ಅರಳಿ ಹಾಗೂ ಬೇವಿನ ಮರಗಳಲ್ಲಿ ಅರಳಿಯನ್ನು ಬಿಳಿ ಪಂಚೆ, ಬಿಳಿ ಅಂಗಿ, ಹಾರಗಳಿಂದ ಸಿಂಗರಿಸಿ, ಬಾಸಿಂಗ ಕಟ್ಟಿ ಮದುಮಗನ ನ್ನಾಗಿ ಮಾಡುತ್ತಾರೆ. ಬೇವಿನ ಮರಕ್ಕೆ ಸೀರೆ, ರವಿಕೆ, ಹೂಹಾರ, ಬಳೆ, ಸಿಂಧೂರ ಇತ್ಯಾದಿಗಳಿಂದ ಸಿಂಗರಿಸಿ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯ ಮಾಡುತ್ತಾರೆ. ಮೊದಲೇ ಪುರೋಹಿತರು ಮದುವೆಯ ಮುಹೂರ್ತ ನೋಡಿ ದಿನವನ್ನು ಗೊತ್ತುಮಾಡುತ್ತಾರೆ. ಧಾರೆ ಎರೆಯುವ ದಂಪತಿಗಳ ಮನೆಯವರು ಅಲ್ಲಿ ಚಪ್ಪರವನ್ನು ಹಾಕಿ ಮದುವೆ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಅಂದು ನಡೆಯುವ ಮದುವೆಗೆ ಊರಿನವವರನ್ನು ಸ್ನೇಹಿತರನ್ನು ಬಂಧು-ಬಾಂಧವರನ್ನು ಆಹ್ವಾನಿಸುತ್ತಾರೆ. ಅಲ್ಲಿ ಮದುವೆಯ ಸಡಗರದ ವಾತಾವರಣವೇ ನಿರ್ಮಾಣವಾಗಿರುತ್ತದೆ. ಮದುವೆ ಮಾಡಿಸಲು ಪುರೋಹಿತರು, ಮಂಗಳ ವಾದ್ಯ ನುಡಿಸಲು  ವಾಲಗದವರು ಇರುತ್ತಾರೆ. ಧಾರಾಮುಹೂರ್ತದ ಸಮಯ ಅಲ್ಲಿದ್ದ ಹಿರಿಯರಿಂದ ಕರಿಮಣಿ ತಾಳಿ ಕಟ್ಟಿಸಿ, ಹೋಮ ಹವನಾದಿಗಳನ್ನು ಮಾಡಿ, ಬೆಳ್ಳಿ ಆರತಿ ತಟ್ಟೆಯಿಂದ ಹೆಣ್ಣುಮಕ್ಕಳು ಆರತಿ ಬೆಳಗಿ ಹಾಡುತ್ತಾರೆ. ನಂತರ ಎಲ್ಲರಿಗೂ ಸಹಭೋಜನವಿರುತ್ತದೆ. ಈ ಬಗೆಯ ಆಚರಣೆಗಳು ಕರ್ನಾಟಕದ ಹಲವು ಭಾಗಗಳಲ್ಲಿ ಕಂಡುಬರುತ್ತವೆ. ಮಲೆನಾಡಿನ ಭಾಗಗಳಲ್ಲಿ ಅಡಿಕೆ ಹಾಗೂ ಬಾಳೆ ಮರಗಳಿಗೆ ಮದುವೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಇದನ್ನು  ‘ಶಾಂತಿ’ ಎಂದು ಕರೆಯುತ್ತಾರೆ. ಇಲ್ಲಿ ಅಡಿಕೆ ಮರವನ್ನು ಗಂಡಾಗಿಯೂ ಬಾಳೆಗಿಡ ಹೆಣ್ಣಾಗಿಯೂ ಅಲಂಕರಿಸುತ್ತಾರೆ. ಹೀಗೆ ಮದುವೆ ಮಾಡುವುದರಿಂದ ತೋಟಕ್ಕೆ ತಗುಲಿದ ಕೆಟ್ಟದೃಷ್ಟಿ ಮಾಯವಾಗಿ ಉತ್ತಮ ಫಲ ಬರುತ್ತದೆಂದು ನಂಬಿಕೆ ಇದೆ.