ಬಯಲುಸೀಮೆಯ ರೈತರು ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣೆತ್ತಿಗೆ ಪೂಜೆ ಸಲ್ಲಿಸುತ್ತಾರೆ. ಜೇಷ್ಠ ಮಾಸದಲ್ಲಿನ ಕೊನೆಯ ಹಬ್ಬವಾಗಿ ಆಚರಣೆಗೊಳ್ಳುತ್ತದೆ. ಭೂಮಿ ತಾಯಿಯ ಚೊಚ್ಚಲ ಮಗ ಹಾಗೂ ಆತ ಕೃಷಿಗಾಗಿ ಅವಲಂಬಿಸಿದ ಎತ್ತುಗಳ ನಡುವಣ ನಂಟು ಸಾರುವ ಹಬ್ಬವೂ ಹೌದು.

ಕುಂಬಾರರು ಕೆರೆಯಿಂದ ಎರೆಮಣ್ಣನ್ನು ಸಂಗ್ರಹಿಸಿ, ತುಳಿದು, ಹದಮಾಡಿ, ಮಣ್ಣೆತ್ತು ಗಳನ್ನು ನಿರ್ಮಿಸುತ್ತಾರೆ. ಹಬ್ಬದ ಹಿಂದಿನ ದಿನ ಕುಂಬಾರರು ಬುಟ್ಟಿಯಲ್ಲಿ ತಾವು ತಯಾರಿಸಿದ ಮಣ್ಣೆತ್ತುಗಳನ್ನು ತುಂಬಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಹೊತ್ತು ಮಾರುತ್ತಾರೆ. ರೈತರು ದವಸ ಧಾನ್ಯಗಳನ್ನು ನೀಡಿ ಎತ್ತು ಗಳನ್ನು ಖರೀದಿಸುತ್ತಾರೆ. ಕೆಲವು ಸಾರಿ ರೈತರು ತಮ್ಮ ಜಮೀನಿನ ಮಣ್ಣಿನಿಂದ ತಾವೇ ಮಣ್ಣೆತ್ತುಗಳನ್ನು ತಯಾರಿಸಿ ಕೊಳ್ಳುತ್ತಾರೆ.

ಉತ್ತುವ ಕಾಯಕದಲ್ಲಿ ಬೆವರು ಸುರಿಸಿದ ಎತ್ತುಗಳು ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದಂದು ಸಂಪೂರ್ಣ ವಿಶ್ರಾಂತಿ ಪಡೆದು ರೈತನಿಂದ ಪೂಜೆ ಮಾಡಿಸಿಕೊಳ್ಳುತ್ತವೆ. ಅಲ್ಲದೇ ನೈವೇದ್ಯವೂ ಎತ್ತುಗಳಿಗೆ ಸಿಗುತ್ತದೆ. ಎಲ್ಲಾ ಧಾನ್ಯಗಳನ್ನು ಸೇರಿಸಿ ಮಾಡಿದ ಬಹು ಧಾನ್ಯ ದೋಸೆಯನ್ನು  ನೈವೇದ್ಯವಾಗಿ ಬಳಸುತ್ತಾರೆ. ಗೊಂಬೆ ಎತ್ತುಗಳಿಗೆ ಎಡೆ ಅರ್ಪಿಸುತ್ತಾರೆ. ಮಣ್ಣೆತ್ತುಗಳ ಪೂಜೆಯಿಂದ ಮಳೆ ಬರುತ್ತದೆ ಎಂದು ನಂಬುತ್ತಾರೆ.

ಹಬ್ಬದ ದಿನ ಬೆಳಿಗ್ಗೆ ರೈತರು ದನಕರುಗಳನ್ನು ಕೆರೆ, ಬಾವಿ, ಹಳ್ಳಗಳಲ್ಲಿ ಮೈತೊಳೆದು ಗೆಜ್ಜೆಸರ, ಗಂಟೆ, ಹಣೆಗೆಜ್ಜೆ ತೊಡಿಸಿ ಮೈ ತುಂಬಾ ರಂಗು ಹಚ್ಚಿ ಅಲಂಕರಿಸಿ, “ಕಾಯೋ ಬಸವಣ್ಣ” ಎಂದು ಪೂಜಿಸುತ್ತಾರೆ.

ಅಂದು ಮಧ್ಯಾಹ್ನ ಎತ್ತುಗಳ ಗೆಜ್ಜೆ ಸರಗಳನ್ನು ತೆಗೆದು ಮಕ್ಕಳು ಹಾಕಿಕೊಳ್ಳುತ್ತಾರೆ. ಮೆರವಣಿಗೆ ಹೊರಟ ಮಕ್ಕಳು ಮನೆ ಮನೆಗೆ ಹೋಗಿ “ಎಂಟೆತ್ತಿಗೊಂದು ಕುಂಟಿತ್ತು ಕೊಡ್ರೋ” ಎಂದು ಹೇಳುತ್ತಾರೆ. ಮನೆಯ ಒಡತಿ ತಾವು ಪೂಜಿಸಿದ ಮಣ್ಣಿನ ಎತ್ತುಗಳ ಜೊತೆಗೆ ಜೋಳ ನೀಡುತ್ತಾಳೆ. ಸಂಗ್ರಹವಾದ ದವಸ ಧಾನ್ಯಗಳನ್ನು ಮಾರಿ, ಬಂದ ಹಣದಿಂದ ತಮಗೆ ಬೇಕಾದ ತಿನಿಸನ್ನು ಜೊತೆಗೆ ಪೂಜಾ ಸಾಮಾಗ್ರಿಗಳನ್ನು ಖರೀದಿಸುತ್ತಾರೆ. ಮಣ್ಣೆತ್ತುಗಳನ್ನು ಪೂಜಿಸಿ, ಮರಳಿ ಮಣ್ಣಿಗೆ ಕಳಿಸುತ್ತಾರೆ. ತಾವು ತಂದ ತಿನಿಸುಗಳನ್ನು ಹಂಚಿಕೊಂಡು ತಿನ್ನುತ್ತಾರೆ.

ಹೊಲದ ಬೆಳೆಯ ಮೇಲೆ ಜಾಗೃತಿ ಮೂಡಿಸಲೆಂದೇ ಬರುವ ಚರ್ಚೆ ಹಬ್ಬದಂತೆ, ದನಗಳ ರೋಗ ರುಜಿನಗಳನ್ನು ಗುರುತಿಸುವುದಕ್ಕಾಗಿ ಬರುವ ಕಾರಹುಣ್ಣಿಮೆಯ ಮಣ್ಣೆತ್ತಿನ ಹಬ್ಬದಲ್ಲೂ ವಿಶೇಷ ಇದೆ. ತಮ್ಮ ಜಮೀನಿನ ಮಣ್ಣಿನಲ್ಲಿ ಗೊಂಬೆ ತಯಾರಿಸುವುದರಿಂದ ಆಯಾಯ ಹೊಲದ ಮಣ್ಣಿನ ಗುಣಧರ್ಮವನ್ನು ತಿಳಿಯಲು ಸಹಕಾರಿಯಾಗಿದೆ.