ಎಂಜಲು ಎಲೆಯ ಮೇಲೆ ಮಾಡುವ ಉರುಳು ಸೇವೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ನಾಗಾರಾಧನೆಗೆ ಹೆಸರುವಾಸಿ. ಈ ದೇವಾಲಯದಲ್ಲಿ  ಷಷ್ಠಿ ಉತ್ಸವದಲ್ಲಿ ‘ಮಡೆಸ್ನಾನ ’ ಎಂಬ ಆಚರಣೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಷಷ್ಠಿ ಜಾತ್ರೆಯ ದಿನ ಕುಕ್ಕೆ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಮಡಿಯುಟ್ಟು ಬಂದು, ಮಧ್ಯಾಹ್ನ ದೇವಸ್ಥಾನದ ಒಳಾಂಗಣದಲ್ಲಿ ಬ್ರಾಹ್ಮಣ ಸಮುದಾಯದವರ ಭೋಜನ ಆದ ಕೂಡಲೇ ಅವರು ಬಿಟ್ಟಿದ್ದ ಎಂಜಲು ಎಲೆಗಳ ಮೇಲೆ ಉರುಳುವ ಸೇವೆ ಮಾಡುತ್ತಾರೆ. ಈ ಆಚರಣೆಯಲ್ಲಿ ವಿವಿಧ ಸಮುದಾಯಗಳ ಹೆಂಗಸರು, ಗಂಡಸರು, ಮಕ್ಕಳು ಅಲ್ಲದೇ ಅನ್ಯಧರ್ಮಿಯರು ಭಾಗವಹಿಸುತ್ತಾರೆ. ಹರಕೆ ಹೊತ್ತು ಎಂಜಲೆಲೆಯ ಮೇಲೆ ಉರುಳು ಸೇವೆ ಸಲ್ಲಿಸಿದರೆ ಪಾಪಗಳು ನಿವಾರಣೆ ಆಗುತ್ತವೆ. ಕಷ್ಟಗಳು ಕಳೆಯುತ್ತವೆ ಎಂದು ಜನ ನಂಬಿದ್ದಾರೆ. ಸಾಲು, ಸಾಲು ಎಂಜಲ ಎಲೆಗಳ ಮೇಲೆ ಹರಕೆ ಹೊತ್ತವರು ಉರುಳುತ್ತಾರೆ. ಅವರ ಮುಖ, ಮೈಗೆ ಎಲೆಗಳ ಎಂಜಲು ಪದಾರ್ಥಗಳು ಮೆತ್ತಿಕೊಳ್ಳುತ್ತವೆ. ಮೇಲ್ಜಾತಿಯ ಜನರ ಎಂಜಲು ಎಲೆಗೆ ಜನರ ಪಾಪ ತೊಳೆಯುವ ಶಕ್ತಿ ಇದೆ ಎಂದು ನಂಬಲಾಗಿದೆ. ಇದು ಕರಾವಳಿ ಜಿಲ್ಲೆಯ ಕೊರಗರ  ‘ಅಜಲು’ ಪದ್ಧತಿಯನ್ನು ನೆನಪಿಗೆ ತರುತ್ತದೆ. ‘ಅಜಲು’ ಕೊರಗರ ಆತ್ಮಗೌರವಕ್ಕೆ ಧಕ್ಕೆ ತರುವ ಆಚರಣೆಯಾಗಿದ್ದರಿಂದ ಅದನ್ನು ಈಗ ನಿಷೇಧಿಸಲಾಗಿದೆ.