ಮಲೆನಾಡಿನ ಕೃಷಿಕರ ಕೃಷಿಸಂಬಂಧೀ ಆಚರಣೆ. ನಾಟಿ ಮುಗಿದ ಮೇಲೆ ಗದ್ದೆಯಲ್ಲಿ ಒಂದರಂತೆ ‘ಮುಂಡುಗ’ ಎನ್ನುವ ಒಂದು ಜಾತಿಯ ಸಸ್ಯವನ್ನು ನೆಡುತ್ತಾರೆ. ಮಗೆ ಮಳೆಯಲ್ಲಿ ಈ ಮುಂಡುಗವನ್ನು ಗದ್ದೆಯಲ್ಲಿ ನೆಡುವುದರಿಂದ ಮಗೆ ಮುಂಡುಗ ಎಂಬ ಹೆಸರು ಬಂದಿದೆ. ಮುಂಡುಗ ಎಂಬುದು ನೀರಿನ ಒರತೆ ಇರುವ ಕಡೆ; ಹಳ್ಳ, ಕೆರೆ, ಹೊಳೆ ಹಾಗೂ ಕಾಡಿನ ಇಳಿಜಾರು ಸ್ಥಳ ದಲ್ಲಿ ಬೆಳೆಯುವ ಪೊದೆಯಂತಹ ಗಿಡ. ಮಗೆ ಮಳೆ ಆರಂಭದ ಹಿಂದಿನ ದಿನ ಕೆಲವರು ಮುಂಡುಗ ಹಾಕುವ ಪದ್ಧತಿ ಇದೆ. ಮತ್ತೆ ಕೆಲವರು ಮಗೆ ಮಳೆಯ ಯಾವು ದಾದರೂ ಒಂದು ಅನುಕೂಲ ದಿನ ಹಾಕುತ್ತಾರೆ. ಸೂರ್ಯ ಹುಟ್ಟುವ ಮೊದಲು ಬರಿಮೈಯಲ್ಲಿ ಗದ್ದೆಗೆ ಹೋಗಿ ಮುಂಡುಗ ನೆಟ್ಟು ಬರಬೇಕೆಂಬ ನಿಯಮವಿದೆ. ಹೀಗೆ ವಿಧಿವತ್ತಾಗಿ ಮಾಡಿದ ವ್ಯಕ್ತಿಯ ಆಯಸ್ಸು ವೃದ್ದಿಯಾಗುವುದೆಂದು, ಅದೇ ಬಗೆಯಲ್ಲಿ ಭತ್ತವು ಹೆಚ್ಚಾಗುತ್ತದೆಂದು ನಂಬಿಕೆ ಇದೆ. “ಖಂಡುಗಕ್ಕೆ ಒಂದು ಮುಂಡುಗ ಹಾಕಿದರೆ ಶ್ರೇಯಸ್ಸು” ವಾಡಿಕೆಯ ಮಾತು. ಕೃಷಿಕ ವರ್ಗದವರಲ್ಲಿ ರೂಢಿಯಲ್ಲಿದೆ. ಈ ಆಚರಣೆಯ ಒಡಲಲ್ಲಿ ಕೀಟ ನಿಯಂತ್ರಣದ ತಂತ್ರವಿರುವುದನ್ನು ಕಾಣಬಹುದು. ಬಯಲಾದ ಗದ್ದೆಗಳಲ್ಲಿ ಹಕ್ಕಿಗಳು ಕುಳಿತು ವಿರಮಿಸಿ, ಹುಳು ಹುಪ್ಪಟಿ ಹುಡುಕುವುದಕ್ಕೆ ಇವು ಸಹಕಾರಿಯಾಗಿವೆ. ಇದೊಂದು ಜೈವಿಕ ಕೀಟ ನಿಯಂತ್ರಣ ವಿಧಾನವೆಂದೇ ಹೇಳಬಹುದು.