ಅಥಣಿ ತಾಲ್ಲೂಕಿನ ಮದಬಾವಿ ಗ್ರಾಮದೈವ ಸಿದ್ಧೇಶ್ವರನಿಗೆ ಭಕ್ತರು ಸಲ್ಲಿಸುವ ವಿಶೇಷ ಹರಕೆ. ಏಪ್ರಿಲ್ ತಿಂಗಳಲ್ಲಿ ಜರಗುವ ಸಿದ್ಧೇಶ್ವರನ ಜಾತ್ರೆಯಲ್ಲಿ ಎಳೆಯ ಮಕ್ಕಳನ್ನು ಅಟ್ಟದಿಂದ ಎಸೆಯುತ್ತಾರೆ. ಎಳೆಯ ಕಂದಮ್ಮಗಳ ಉಜ್ವಲ ಭವಿಷ್ಯಕ್ಕಾಗಿ ಅವರನ್ನು ಗುಡಿಯ ಅಟ್ಟದ ಮೇಲಿಂದ ಕೆಳಕ್ಕೆ ಎಸೆಯುವ ಸಂಪ್ರದಾಯ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಜಾತ್ರೆಗೆ ಬಂದ ಸಾವಿರಾರು ಭಕ್ತರು ತಮ್ಮ ಮಕ್ಕಳಿಗೆ ಯಾವುದೇ ಪೈಶಾಚಿಕ ಕಾಟ ಬಾಧಿಸದಿರಲೆಂದು ಈ ಹರಕೆಯನ್ನು ತೀರಿಸುತ್ತಾರೆ. ಐದು ವರ್ಷ ಒಳಗಿನ ಮಕ್ಕಳನ್ನು ಕೈಕಾಲು ಹಿಡಿದು ನಾಲ್ಕು ಜನರು ದೇವಸ್ಥಾನದ ಅಟ್ಟದ ಮೇಲಿಂದ ಎತ್ತಿ ಕೆಳಗೆ ಎಸೆಯುತ್ತಾರೆ. ಹಾಗೆ ಎಸೆದ ಮಕ್ಕಳನ್ನು ಕೆಳಗಿರುವವರು ಕಂಬಳಿ ಜೋಳಿಗೆಯಲ್ಲಿ ಹಿಡಿದು ರಕ್ಷಿಸುತ್ತಾರೆ. ಹೀಗೆ ಎಸೆದ ಮಕ್ಕಳು ಅಳುವುದಾಗಲಿ, ಕಿರುಚುವುದಾಗಲಿ ಮಾಡುವುದಿಲ್ಲ. ಎಸೆಯುವ ಹರಕೆಯನ್ನು ಎರಡು ಸಾರಿ ಪುನರಾವರ್ತಿಸಿದರೆ ಆ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಯಾವುದೇ ರೋಗ-ರುಜಿನಗಳು ಬರುವುದಿಲ್ಲವೆಂದು ನಂಬುತ್ತಾರೆ. ನಲವತ್ತರಿಂದ ಐವತ್ತು ಡೊಳ್ಳಿನ ತಂಡಗಳು ಜಾತ್ರೆಯಲ್ಲಿ ಭಾಗವಹಿಸಿ, ಡೊಳ್ಳನ್ನು ವಿಭಿನ್ನ ಬಗೆಯಲ್ಲಿ ಬಾರಿಸುವುದು ಇಲ್ಲಿನ ವಿಶೇಷ.