ಉತ್ತರ ಕನ್ನಡ ಜಿಲ್ಲೆಯ ಗೌಳಿಗರಲ್ಲಿರುವ ವಿಶಿಷ್ಟ ಬಗೆಯ ದಸರಾ ಆಚರಣೆ. ಶಿರಸಿ ಹಾಗೂ ಯಲ್ಲಾಪುರ ಮಾರ್ಗದ ಮಧ್ಯೆ ಸಿಗುವ ಭರತನಹಳ್ಳಿಯ ಹತ್ತಿರದ ರಾಜವಾಡ ಮತ್ತು ಗೌಳಿವಾಡದ ಊರಿನ ಗೌಳಿಗ ಜನ ದಸರಾದಲ್ಲಿ ಈ ಆಚರಣೆಯನ್ನು ವಿಶಿಷ್ಟವೂ, ಸರಳವೂ ಆಗಿ ಆಚರಿಸುತ್ತಾರೆ. ಆಚರಣೆಯಲ್ಲಿ ‘ಗಜ ನೃತ್ಯ’ ಗೌಳಿಗರ ದಸರಾದ ಸಾಂಪ್ರದಾಯಕ ನೃತ್ಯವಾಗಿದೆ. ವಿವಿಧ ಆಕಾರದ ವೇಷ ಧರಿಸಿ ಹೆಂಗಸರು, ಮಕ್ಕಳು ಹಾಗೂ ಗಂಡಸರು ಸೇರಿ ಹಿರಿಯರ ಒಪ್ಪಿಗೆ ಪಡೆದು ನೃತ್ಯ ಮಾಡುತ್ತಾರೆ.

ಗೌಳಿಗರು ದಸರಾವನ್ನು ಊರೊಟ್ಟಿನ ಹಬ್ಬವಾಗಿ ಆಚರಿಸುತ್ತಾರೆ. ದಸರಾ ಆಚರಣೆಗೆ ಊರಿನ ಶಾಲೆಯ ಎದುರಿನ ಅಂಗಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಗಳವನ್ನು ಸಾರಿಸಿ, ತಳಿರುತೋರಣ, ಬಾಳೆಕಂಬ ಹಾಗೂ ಚಪ್ಪರಗಳಿಂದ ಅಲಂಕರಿಸುತ್ತಾರೆ. ಗೌಳಿಗರ ಹಿರಿಯರೆಲ್ಲರೂ ಸೇರಿ, ಮಡಚಿದ ಕರಿ ಕಂಬಳಿ ಹಾಸಿ ಅದರ ಎರಡೂ ಅಂಚಿಗೆ ಬೂದು ಬಣ್ಣದ ಕಂಬಳಿಗಳನ್ನಿಟ್ಟು ಮಂಡಲ ಹಾಕುತ್ತಾರೆ. ಕಂಬಳಿಯ ಮೇಲೆ ಅಕ್ಕಿಯಿಂದ ರಂಗೋಲಿ ಮಂಡಲ ಬರೆಯುತ್ತಾರೆ. ಅಕ್ಕಿಯ ಮಂಡಲದ ಸುತ್ತ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ, ವೀಳ್ಯದೆಲೆ ಇಟ್ಟು, ಅವುಗಳ ಮೇಲೆ ಹಾಲಿನಿಂದ ತಯಾರಿಸಿದ ಅನ್ನದ ಗಂಜಿಯನ್ನು ಬಡಿಸುತ್ತಾರೆ. ಬೂದು ಬಣ್ಣ ಕಂಬಳಿ ಗಳ ಮೇಲೂ ಅಕ್ಕಿಯ ಸಣ್ಣ ರಾಶಿ ಮಾಡಿ, ಅದರ ಸುತ್ತಲೂ ಹೂ, ವೀಳ್ಯದೆಲೆ ಹಾಗೂ ಕಾಯಿಯೊಂದನ್ನು ಪ್ರತಿಷ್ಠಾಪಿಸಿರುತ್ತಾರೆ. ಮಧ್ಯದ ಕರಿಕಂಬಳಿಯ ಬಲ ಅಂಚಿಗೆ ಎರಡು ಸಾಲಿನಲ್ಲಿ ಸುಲಿದ ತೆಂಗಿನಕಾಯಿಗಳನ್ನು ಜೋಡಿಸಿರುತ್ತಾರೆ. ಅಂಗಳದ ಇನ್ನೊಂದು ಬದಿ ಮನೆಗೆ ಒಂದರಂತೆ ಹಾಲು, ಮೊಸರು, ಮಜ್ಜಿಗೆ ತುಂಬಿದ ಮಡಕೆಗಳನ್ನು ಸಾಲಾಗಿ ಇಟ್ಟು, ಕಾಯಿಯೊಂದನ್ನು ಇಡುವ ಪದ್ಧತಿ ಇದೆ.  ಪ್ರತಿ ಮಂಡಲದ ಹಿಂದೆಯು ಒಬ್ಬ ಹಿರಿಯರು ಕುಳಿತಿರುತ್ತಾರೆ. ಅರಿಶಿಣ ಹಾಗೂ ಕುಂಕುಮಗಳ ತಿಲಕವನ್ನಿಟ್ಟು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಆಗಲೇ ‘ಗಜ ನೃತ್ಯ’ಕ್ಕೆ ವೇಷಕಟ್ಟಿ ನಿಂತ ವೇಷಧಾರಿಗಳು ಮಂಡಲದ ಹಿರಿಯ ವ್ಯಕ್ತಿಗಳಿಂದ ಅರಿಶಿಣದ  ತಿಲಕವನ್ನಿರಿಸಿಕೊಂಡು ನೃತ್ಯ ಮಾಡಲು ಆರಂಭಿಸುತ್ತಾರೆ. ಹೆಣ್ಣುಮಕ್ಕಳು ಗೋಪಿಕಾ ಸ್ತ್ರೀಯರ ವೇಷತೊಟ್ಟು ಕೃಷ್ಣ ವೇಷಧಾರಿಯನ್ನು ಹಿಡಿಯುವ ನೃತ್ಯ ಮಾಡುತ್ತಾರೆ. ನೃತ್ಯದ ನಂತರ ಮಂಡಲ ಪೂಜಿಸಿ, ನೈವೇದ್ಯ ಅರ್ಪಿಸಿ, ಎಲ್ಲರೂ ಹಾಲಿನಿಂದ ಮಾಡಿದ ಅನ್ನದ ಗಂಜಿಯನ್ನು ಸ್ವೀಕರಿಸುತ್ತಾರೆ.

ಅಂದು ಸಂಜೆ ಮಂಡಲವನ್ನು ಪೂಜಿಸಿ, ಹಾಲು, ಮೊಸರು, ಮಜ್ಜಿಗೆ ಮಡಕೆಗಳನ್ನು ಸಂಬಂಧಿಸಿದ ಮನೆಯವರು ಹೆಗಲ ಮೇಲೆ ಹೊತ್ತು, ಓಕುಳಿಗೆ ಸಿದ್ಧವಾಗುತ್ತಾರೆ. ಮನೆಯವರು ಅವರ ಮನೆಯ ವ್ಯಕ್ತಿಗಳೊಂದಿಗೆ ಓಕುಳಿ ಆಡುವಂತಿಲ್ಲ. ಆದರೆ ಭಾವ-ಭಾಮೈದುನರು ಓಕುಳಿ ಆಡಲೇಬೇಕು ಎನ್ನುವ ನಿಯಮವಿದೆ. ಹಾಲು, ಮೊಸರು ಹಾಗೂ ಮಜ್ಜಿಗೆಯನ್ನು ಜನರ ಮೇಲೆ ಚೆಲ್ಲಿ ಓಕುಳಿ ಆಟ ಮುಗಿಸುತ್ತಾರೆ. ಅಂದು ರಾತ್ರಿ ಹಾಲಿನಿಂದ ಮಾಡಿದ ಅನ್ನ ಹಾಗೂ ಹಾಲನ್ನು  ಕುಡಿಯುತ್ತಾರೆ. ಹಾಲಿನಿಂದ ಮಾಡಿದ ಅಡುಗೆಯನ್ನುಳಿದ ಉಳಿದ ಯಾವ ಅಡುಗೆಯನ್ನು ಮಾಡುವಂತಿಲ್ಲ.

ಓಕುಳಿಯ ಮರುದಿನ ಗೌಳಿಗರ ಯುವಕರು ಹಳೆಯ ಖಡ್ಗದಿಂದ ಹೊಟ್ಟೆಗೆ ಹೊಡೆದುಕೊಳ್ಳುತ್ತಾರೆ. ಅವರು ಅದನ್ನು ತಮ್ಮ ಪೂರ್ವಿಕರ ಯುದ್ಧ ಖಡ್ಗವೆಂದು ನಂಬುತ್ತಾರೆ. ಅಲ್ಲದೇ ಶಿವಾಜಿ ಮಹಾರಾಜರೊಂದಿಗೆ ಪೂರ್ವಿಕರು ಸೈನ್ಯದಲ್ಲಿದ್ದರು ಎನ್ನುವುದನ್ನು ಹೇಳುತ್ತಾರೆ. ಅವರ ನೆನಪಿಗಾಗಿ ಈ ಆಚರಣೆ ಎನ್ನುತ್ತಾರೆ. ಖಡ್ಗದ ಪ್ರದರ್ಶನ ಮುಗಿದ ನಂತರ ಮಂಡಲ ಪೂಜಿಸಿ, ನೈವೇದ್ಯ ಅರ್ಪಿಸಿ, ನಂತರ ಎಲ್ಲರೂ ಸಾಮೂಹಿಕವಾಗಿ ಊಟ ಮಾಡುತ್ತಾರೆ. ದಸರಾದಲ್ಲಿ ಶಕ್ತಿದೇವತೆಯನ್ನು ಪೂಜಿಸದೇ ಶ್ರೀಕೃಷ್ಣನನ್ನು ಪೂಜಿಸುವುದು ಇಲ್ಲಿಯ ವಿಶೇಷ. ಆಡಂಬರ, ಅಬ್ಬರವಿಲ್ಲದ ಗೌಳಿಗರ ದಸರಾ ಜೀವಮುಖಿ ಆಚರಣೆಯಾಗಿ ಹೊರಹೊಮ್ಮಿದೆ.