ಮುಳ್ಳಿನ ರಾಶಿಯ ಮೇಲೆ ಬರಿಗಾಲಿನಲ್ಲಿ ನಡೆದು ಹರಕೆ ತೀರಿಸುವ ವಿಶಿಷ್ಟ ಪದ್ಧತಿ. ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ನಡೆಯುವ ಹನುಮಂತ ಜಾತ್ರೆಯ ಮರುದಿನ ಮುಳ್ಳು ಹರಕೆ ಜರುಗುತ್ತದೆ. ಹನುಮಂತ ದೇವಾಲಯವನ್ನು 16ನೇ ಶತಮಾನದಲ್ಲಿ ಕೆಳದಿಯ ಅರಸರು ಕಟ್ಟಿದ ರೆಂಬುದು ಇತಿಹಾಸ. ಹಿಂದೆ ಬಯಲು ಸೀಮೆಯಿಂದ ಮಲೆನಾಡಿಗೆ, ಮಲೆನಾಡಿನಿಂದ ಬಯಲು ಸೀಮೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಇಲ್ಲಿ ಕುಳಿತು ಹೋಗುತ್ತಿದ್ದ ಸ್ಥಳವಾಗಿದ್ದರಿಂದ ಕುಂತೋರು ಆಗಿ ಕುಂದೂರು ಎಂಬ ಹೆಸರು ಬರಲು ಕಾರಣವಾಗಿದೆ ಎಂದು ಹೇಳುತ್ತಾರೆ.

ಹನುಮಂತ ಜಾತ್ರೆಯ ಮರುದಿನ ದೇವಸ್ಥಾನದ ಮುಂದೆ ಕೌಳಿ ಮುಳ್ಳಿನ ರಾಶಿ ಯನ್ನು ಹಾಕಿರುತ್ತಾರೆ. ಇದು ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿ ಯಂದು ನಡೆಯುತ್ತದೆ. ಆ ಉತ್ಸವಕ್ಕಾಗಿ ಒಬ್ಬರಿಗೆ ಒಂದೊಂದು ಕೆಲಸ. ಕೆಲವರದು ಮುಳ್ಳು ತರೋ ಕೆಲಸವಾದರೆ, ಮತ್ತೆ ಕೆಲವರಿಗೆ ಪಲ್ಲಕಿ ಹೊರೋ ಕೆಲ್ಸ. ದೇವರ ಪಾದ ತೊಳೆಯೋ ಕೆಲ್ಸ, ಇನ್ನ ಕೆಲವರಿಗೆ ದೇವರು ಮೈಮೇಲೆ ಬರೋದು, ಅಲ್ಲದೇ ಕಸಗುಡಿಸೋದು, ನೆಲ ಒರೆಸುವುದು, ಪೂಜಾರಿಕೆ ಕೆಲ್ಸ, ಪೌರೋಹಿತ್ಯ, ತಮಟೆ ಬಾರಿಸುವ ಕೆಲ್ಸ. ಬಣ್ಣ ಹಚ್ಚೋದು, ಪೀಪಿ ಊದೋ ಕೆಲ್ಸ, ಒಡವೆ ವಸ್ತ್ರ ಶೃಂಗಾರ ಮಾಡೋ ಕೆಲ್ಸ ಹೀಗೆ ನೂರೆಂಟು ಕೆಲಸ ವಹಿಸಿಕೊಂಡು ಮಾಡುತ್ತಾರೆ. ಈ ಕೆಲಸ ಮಾಡೋ ಮಂದಿಗೆ ದೇವಾಲಯದ ಆಸ್ತಿಯನ್ನು ನೀಡಲಾಗಿದೆ. ಈ ಕಾರಣದಿಂದ ದೇವಾಲಯದ ಕೆಲಸಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಇಲ್ಲಿ ಲಿಂಗಾಯತರು, ಹರಿಜನರು, ಮಡಿವಾಳರು, ವಿಶ್ವಕರ್ಮರು, ಮುಸ್ಲಿಮರು, ಕುರುಬರು, ಬ್ರಾಹ್ಮಣರು, ಗೌಡಣ್ಣರು, ಜಾಜ್ಞಾನಿಗಳು, ಶೆಟ್ಟರು ಇತ್ಯಾದಿ ಜನವರ್ಗದವರನ್ನು ಕಾಣಬಹುದಾಗಿದೆ.

ಮುಳ್ಳೋತ್ಸವದ ದಿನ ಸಂಜೆಯಾಗುತ್ತಿದ್ದಂತೆ ಜನ ಮುಳ್ಳುರಾಶಿಯ ಸುತ್ತಲೂ ನೆರೆದಿರುತ್ತಾರೆ. ಆ ಮಧ್ಯದಲ್ಲಿ ದೇವರು ಮೈಮೇಲೆ ಬಂದ ಮೂವರು ಓಡಿ ಬಂದು ಮುಳ್ಳು ರಾಶಿಯ ಬಲಕ್ಕೆ ಬಂದು ನಿಲ್ಲುತ್ತಾರೆ. ದೇವರ ಪಲ್ಲಕಿ ಹೊತ್ತವರು ಆವೇಶಗೊಂಡು ಮುಳ್ಳಿನ ಮೇಲೆ ಓಡುತ್ತಾರೆ. ಅವರ ಹಿಂದೆ ನುಗ್ಗುವ ಭರದಲ್ಲಿ ಕೆಲವರು ಮುಳಿನ ಮೇಲೆ ಬೀಳುತ್ತಾರೆ. ಹರಕೆ ಹೊತ್ತ ಭಕ್ತರೆಲ್ಲ ಓಡುತ್ತಾರೆ. ಹೆಂಗಸರು, ಗಂಡಸರು ಮಕ್ಕಳು ಸೇರಿ ಹರಕೆ ತೀರಿಸುವ ಹೊತ್ತಿಗೆ ಕೌಳಿಮುಳ್ಳಿನ ರಾಶಿ ನುಚ್ಚುನೂರಾಗುತ್ತದೆ. ಆದರೆ ಯಾರಿಗೂ ಮುಳ್ಳು ಚುಚ್ಚಿ ಗಾಯವಾಗಿರುವುದಿಲ್ಲ.. ಮುಖದಲ್ಲಿ ಹರಕೆ ತೀರಿಸಿದ ಕೃತಜ್ಞತಾ ಭಾವ ಎದ್ದು ಕಾಣುತ್ತದೆ.

ಅಲ್ಲಿ ಸುಮಾರು ೧೪ ವರ್ಷಗಳಿಂದ ವೈದ್ಯ ಸೇವೆ ಸಲ್ಲಿಸುತ್ತಿರುವ ಡಾ. ಎಸ್.ಎಸ್. ಚಕ್ಕೇರಿ ಹೀಗೆ ಹೇಳುತ್ತಾರೆ. “ಪ್ರತಿ ವರ್ಷ ಸಾವಿರಾರು ಜನ ಮುಳ್ಳು ತುಳಿಯುತ್ತಾರೆ. ಅವರಲ್ಲಿ ರೋಗಿಷ್ಟರಿರಬಹುದು, ಡಯಾಬಿಟಿಸ್ ಇರಬಹುದು. ಕೌಳಿಮುಳ್ಳು ಚುಚ್ಚಿ, ಮುಳ್ಳೋತ್ಸವದ ಮುಳ್ಳು ಚುಚ್ಚಿ ಟ್ರೀಟ್‌ಮೆಂಟಿಗೆ ಅಂತಾ ಯಾರೂ ಬಂದಿಲ್ಲ”.