ದೇವತೆಗಳನ್ನು ಆವಾಹನೆ ಮಾಡಿ, ವಿಶೇಷವಾಗಿ ಪೂಜಿಸಲು ಮಾಡುವ ಮಂಡಲ. ಒಂದೊಂದು ದೇವತೆಗೂ ಒಂದೊಂದು ಮಂಡಲ ರಚಿಸುವ ಪದ್ಧತಿ ಇದೆ. ಸಾಮಾನ್ಯವಾಗಿ ಮಂಡಲ ಪದ್ಧತಿ ಎಲ್ಲಾ ಜನವರ್ಗಗಳಲ್ಲಿಯೂ ಕಾಣಬಹುದು. ಮಂಡಲ ಪೂಜೆಯನ್ನು ಯಾವಾಗ ಬೇಕಾದರೂ ಮಾಡಬಹುದು. ಈ ಪೂಜೆ ಉತ್ತರ ಕನ್ನಡ ಜಿಲ್ಲೆಯ ಗೊಂಡರಲ್ಲಿ ಪ್ರಚಲಿತವಿದೆ. ಭಟ್ಕಳದ ಕೋಗತಿಕಟ್ಟೆ ಮಾಸ್ತಿಯ ಮಂಡಲ ಪೂಜೆಗಿಂತ ಮೊದಲು ಎಲ್ಲಿಯೂ ಮಂಡಲಪೂಜೆ ಮಾಡುವಂತಿಲ್ಲ. ಶನಿವಾರ ದಿನ ಬಿಟ್ಟು ಬೇರೆ ಎಲ್ಲಾ ದಿನಗಳಲ್ಲಿಯೂ, ಎಲ್ಲ ವೇಳೆಯಲ್ಲೂ ಮಾಡಬಹುದು.

ಪ್ರತಿ ವರ್ಷ ಮಂಡಲ ಪೂಜೆ ಮಾಡುವವರು ಹಾಗೂ ಹೊಸದಾಗಿ ಮಂಡಲ ಹರಕೆ ಹೊತ್ತವರು, ಮುಖ್ಯ ಗೊಂಡನ ಹತ್ತಿರ ಹೋಗಿ, ಮಂಡಲ ಪೂಜೆಗೆ ಬರುವಂತೆ ಆಹ್ವಾನ ವೀಳ್ಯ ಕೊಡಬೇಕು. ವೀಳ್ಯದಲ್ಲಿ ಅಡಿಕೆ ಹಾಗೂ ಎಲೆ ಇದ್ದು, ಹಣ ವಿರುವುದಿಲ್ಲ. ನಿಗದಿತ ದಿನದಿಂದು ಗೊಂಡನು ಮಂಡಲ ಮಾಡಿಸುವರ ಮನೆಗೆ ಬರುತ್ತಾನೆ. ಮಂಡಲವನ್ನು ದೇವರ ಮನೆಯಲ್ಲಿ, ದೈವಸ್ಥಾನದಲ್ಲಿ ಅಥವಾ ಗದ್ದೆಗಳಲ್ಲಿ ಬರೆಯುತ್ತಾರೆ.

ಗೊಂಡನು ಮೊದಲು ಮಂಡಲದ ‘ಗರಿ’ ಎಳೆಯುತ್ತಾನೆ. ಗರಿ ಎಂದರೆ ಗೆರೆಯೆಂದು ಕರೆಯುತ್ತಾರೆ. ಮಂಡಲ ಬರೆಯಲು ಅಕ್ಕಿ ಹಿಟ್ಟು, ಅರಿಶಿಣ ಪುಡಿ ಮತ್ತು ಕುಂಕುಮಗಳನ್ನು ಬಳಸುತ್ತಾರೆ. ಮಂಡಲದ ಬಣ್ಣ, ಕಪ್ಪು, ಕೆಂಪು, ಹಳದಿ ಹಾಗೂ ಹಸಿರುಗಳನ್ನು ಒಳಗೊಂಡಿರುತ್ತದೆ. ಸಾಧಾರಣವಾಗಿ ಚೌಕಾಕಾರದ ಮಂಡಲವು ಎರಡು ಅಡಿ ತ್ರಿಜ್ಯದಿಂದ ಕೂಡಿರುತ್ತದೆ. ಮಂಡಲದ ಚಿತ್ರದಲ್ಲಿ ಹಾವಿನ ಆಕಾರವನ್ನು ಬಿಡಿಸಿ, ಮಧ್ಯೆ ಹಿಂಗಾರ ಹಾಗೂ ಅಬ್ಬಲಿ ಹೂವುಗಳಿಂದ ಮಾಡಿದ ಕಳಶವನ್ನು ಪ್ರತಿಷ್ಠಾಪಿಸುತ್ತಾರೆ. ಮಂಡಲ ಮೇಲೆ ಚಪ್ಪರವನ್ನು ಹಾಕಿ, ನಾಲ್ಕು ಕಂಬಗಳಿಗೂ ಬಾಳೆಕಂಬ ಕಟ್ಟಿರುತ್ತಾರೆ. ಚಪ್ಪರದ ಮೇಲ್ಭಾಗದಲ್ಲಿ ಬಿಳಿಯ ವಸ್ತ್ರವೊಂದನ್ನು ಕಟ್ಟಿ, ತೆಂಗಿನ ಗರಿಗಳಿಂದ ಮಾಡಿದ ಹಾವು ಹಾಗೂ ಗಿಳಿಗಳನ್ನು ತೂಗು ಹಾಕಿ ಅಲಂಕರಿಸುತ್ತಾರೆ. ಗೊಂಡನ ಬಳಿಯಿರುವ ಮಚ್ಚು ಇತ್ಯಾದಿಗಳನ್ನು ‘ಬಗಸ’ ಎಂದು ಕರೆಯುವ ಮಂಡಲದ ಕುಕ್ಕೆಯಲ್ಲಿ ತುಂಬಿಸಿಡುತ್ತಾರೆ.

ಮಂಡಲದಲ್ಲಿ ಪ್ರತಿಷ್ಠಾಪಿಸಿರುವ ಕಳಶವನ್ನು ತಲೆಯ ಮೇಲೆ ಹೊತ್ತ ಗೊಂಡನು ಕಳಶವನ್ನು ಹಿಡಿಯದೇ ನೃತ್ಯ ಮಾಡುತ್ತಾನೆ. ಅಕ್ಕಿ, ತೆಂಗಿನಕಾಯಿ, ಹೂ, ಹಣ್ಣುಗಳನ್ನು ತುಂಬಿದ ‘ಅಡಿಯಕ್ಕಿ’ ಬುಟ್ಟಿಯನ್ನು ತುಳಸಿ ಕಟ್ಟೆಯಲ್ಲಿಟ್ಟು, ತುಳಸಿಗೆ ಕಾಯಿ ಒಡೆದು, ವೀಳ್ಯದ ಪಟ್ಟಿಗೆ ನಾಲ್ಕಾಣೆ ಇಟ್ಟು ಪೂಜಿಸುತ್ತಾರೆ. ಮಂಡಲಕ್ಕೆ ‘ದೆವ್ವ ಕರೆದ ಹಾಡು’ ಎಂಬ ಪದದಲ್ಲಿ ಹೆಸರಿಟ್ಟು ಒಂದೊಂದಾಗಿ ಆಹ್ವಾನಿಸುತ್ತಾರೆ. ಮಂಡಲ ಪೂಜೆಯಲ್ಲಿ ಹಾಡಿ, ನೃತ್ಯ ಮಾಡುವುದಕ್ಕಾಗಿ ಮೊದಲೆ ವೀಳ್ಯ ಕೊಟ್ಟು ಕರೆಯಿಸಿಕೊಂಡಿರುತ್ತಾರೆ. ನೃತ್ಯ ಮಾಡಲು ಬಂದವರು ತಂಡದಲ್ಲಿ ನಾಲ್ಕರಿಂದ ಎಂಟು ಜನರಿರುತ್ತಾರೆ. ಸೊಂಟಕ್ಕೆ ನೇವಾಳ ಧರಿಸಿ, ಕೊರಳಿಗೆ ಬಂಗಾರದ ಸರ ಹಾಕಿಕೊಂಡಿರುತ್ತಾರೆ. ತಲೆಗೆ ಅಬ್ಬಲಿಗೆ ಹೂವುಗಳಿಂದ ಸಿಂಗರಿಸಿಕೊಂಡ ಅವರು ಕಾಲಿಗೆ ಕಡಗ ಹಾಗೂ ಗೆಜ್ಜೆಗಳನ್ನು ಕಟ್ಟಿಕೊಂಡಿರುತ್ತಾರೆ. ಕಂಚಿನ ಡಕ್ಕೆಯನ್ನು ಬಾರಿಸುತ್ತ ಹಾಡು ಹೇಳಿಕೊಂಡು ನೃತ್ಯ ಮಾಡುತ್ತಾರೆ. ಮಂಡಲದ ಆಚೆ ಒಬ್ಬ ಹಾಗೂ ಉಳಿದವರು ಈಚೆ ನಿಂತುಕೊಂಡು, ಒಬ್ಬನು ಹೇಳಿದಂತೆ ಉಳಿದವರು ಹೇಳುತ್ತಾರೆ. ಅವರು ಹಾಡುತ್ತಾ ಒಂದೊಂದೇ ದೇವತೆಗಳ ಹೆಸರು ಹೇಳಿ ಆಹ್ವಾನಿಸುತ್ತಾರೆ. ಇದನ್ನು ಹಳಬು ಕರೆಯುವುದು ಎಂದು ಕರೆಯುತ್ತಾರೆ. ಈ ಮಂಡಲ ಪೂಜೆ ಸಂಜೆಯಿಂದ ಬೆಳಗಿನವರೆಗೆ ನಡೆಯುತ್ತದೆ.

ಮಂಡಲದ ನೈವೇದ್ಯಕ್ಕಾಗಿ ಬಾಳೆಹಣ್ಣು ಬಳಸುತ್ತಾರೆ. ಹೆಂಡ ಹಾಗೂ ಮಾಂಸಾಹಾರ ನಿಷಿದ್ಧವಾಗಿದ್ದು, ಬಲಿ ಕೊಡುವಂತಿಲ್ಲ. ಪೂಜೆಯಲ್ಲಿ ಮಂತ್ರವನ್ನು ಹೇಳುವುದಿಲ್ಲ. ದೀಪ, ಧೂಪ, ಜಾಗಟೆ, ಗಂಟೆಗಳನ್ನು ಬಳಸುತ್ತಾರೆ. ಕೊನೆಯಲ್ಲಿ ಆಹ್ವಾನಿಸಿದ ದೇವರುಗಳನ್ನು ತಳಮನೆಗೆ ಕಳಿಸಲು ಪದ ಹೇಳುತ್ತಾರೆ. ಈ ಸಂದರ್ಭದಲ್ಲಿ ಮಂಡಲದ ಒಂದು ಕಡೆ ಎರಡು ಜನವಿದ್ದು, ಉಳಿದವರು ಇನ್ನೊಂದು ಕಡೆ ಇರುತ್ತಾರೆ. ಈ ಪದಗಳು ಸ್ವಲ್ಪ ತುಳುಪಾಡ್ದನಗಳನ್ನು ಹೋಲುತ್ತವೆ.