ಮುಳ್ಳಿನ ರಾಶಿಯ ಮೇಲೆ ನಡೆಯುವ ವಿಶಿಷ್ಟ ಬಗೆಯ ಆಚರಣೆ. ಪ್ರತಿ ವರ್ಷ ಛಟ್ಟಿ ಅಮಾವಾಸ್ಯೆಯಂದು ನಡೆಯುತ್ತದೆ. ಕೊಪ್ಪಳ ಜಿಲ್ಲೆಯ ಲೆಬಗೆರಾ, ಯಲಮಗೇರಾ, ಬಸಾಪುರ, ಆಗಳಿಕೇರಾ, ಕಾಮನೂರು, ಕಲ್‌ತಾವರೆಗೇರಾ, ಅಬ್ಬಿಗೇರಿ, ಹಾಲಹಳ್ಳಿ ಇತ್ಯಾದಿ ಊರುಗಳಲ್ಲಿ ವಿಶಿಷ್ಟವಾಗಿ ನಡೆಯುತ್ತದೆ. ಹನುಮಪ್ಪನನ್ನೇ ‘ಊರಜ್ಜ’ನೆಂದು ಕರೆಯುವುದು ವಾಡಿಕೆ. ಅಂದು ಮನೆ ಮನೆಗಳೆಲ್ಲಾ ಸಿಹಿ ಅಡುಗೆ ಮಾಡಿ ಊರ ಹನುಮನಿಗೆ ನೈವೇದ್ಯ ಅರ್ಪಿಸುತ್ತಾರೆ. ನೂರಾರು ಮಂದಿ ದಿಂಡು ಹಾಕುತ್ತಾರೆ. ಡೊಳ್ಳು, ಭಜನೆಗಳಿಂದ ಮೆರವಣಿಗೆ ಹನುಮನ ಗುಡಿಗೆ ಬಂದು ಸೇರುತ್ತದೆ. ಗುಡಿಯ ಪೂಜಾರಿ, ಪೂಜಿಸಿದ ನಂತರ ಭಕ್ತರಿಗೆ ಹೀಗೆ ಹೇಳುತ್ತಾನೆ. “ಮುಳ್ಳು ಕಿತ್ತಾಕ ಗುಡ್ಡಕ ನಡೀರಿ”. ಅದರಂತೆ ಡೊಳ್ಳು ಹೊತ್ತವರು, ಕಳಶ ಹಿಡಿದವರು, ದೀವಟಿಗೆ ಹಿಡಿದವರು, ಛತ್ತರಿಕೆ ಹೊತ್ತವರು, ಪಲ್ಲಕ್ಕಿ ಹೊತ್ತವರು ಎಲ್ಲರೂ ಮುಳ್ಳು ತರಲು ಕಾಡಿನ ಕಡೆಗೆ ನಡೆಯುತ್ತಾರೆ.

ಕಾರಿಮುಳ್ಳಿನ ಗುಡ್ಡವನ್ನು ತಲುಪಿದ ಮೆರವಣಿಗೆ ಮುಳ್ಳಿನ ಗಿಡಗಳ ಬಳಿಗೆ ತೆರಳುತ್ತದೆ. ಕಾರಿ ಗಿಡದ ಬುಡವನ್ನು ಹಿಡಿದ ವ್ಯಕ್ತಿಗಳು ಕಲ್ಲಿನಿಂದ ಕಾಂಡವನ್ನು ಜಜ್ಜಿ ಕತ್ತರಿಸುತ್ತಾರೆ. ಪಲ್ಲಕ್ಕಿ ಹೊತ್ತವರು, ಪೂಜಾರಿ, ಕಳಶ ಹಿಡಿದವರು, ಜಾಗಟೆ ಬಾರಿಸುವವರು ಅಲ್ಲದೇ ಪೂಜಾ ಕಾರ್ಯದ ಭಾಗಿಯಾದವರು ಸೇರಿದಂತೆ ಹೊಳೆಗೆ ಹೋಗಿ ಮಡಿಯಾಗುತ್ತಾರೆ. ಮಡಿಯಾದ ಪೂಜಾರಿಯು ಪಲ್ಲಕ್ಕಿಯ ಹನುಮನಿಗೆ ಪೂಜೆ ಸಲ್ಲಿಸಿ, ಕಾರೆಮುಳ್ಳಿನ ಗಿಡವೊಂದನ್ನು ಬೇರು ಸಹಿತ ಕೀಳುತ್ತಾನೆ. ಪೂಜಾರಿಯು ಮುಳ್ಳಿನ ಗಿಡವನ್ನು ನೆಲದ ಮೇಲೆ ಹಾಕಿ ಮತ್ತೊಮ್ಮೆ ಹನುಮನಿಗೆ ಪೂಜೆ ಸಲ್ಲಿಸಿ, ಮುಳ್ಳಿನ ರಾಶಿಯ ಮೇಲೆ ಬೀಳುತ್ತಾನೆ. ನಂತರ ಮೆರವಣಿಗೆಯಲ್ಲಿದ್ದ ಭಕ್ತರೆಲ್ಲ ಮುಳ್ಳಿನ ರಾಶಿಯ ಮೇಲೆ ಬೀಳುತ್ತಾರೆ. ಇದೇ ರೀತಿ ಕಾಡಿನಲ್ಲಿ ಎರಡು ಸ್ಥಳದಲ್ಲಿ ಮಾಡುತ್ತಾರೆ. ನಂತರ ಪ್ರತಿಯೊಬ್ಬರು ಕಾರೆಮುಳ್ಳಿನ ಕೊಂಡಿಯನ್ನು ಹಿಡಿದು ಮೆರವಣಿಗೆಯಲ್ಲಿ ಗುಡಿಯನ್ನು ಸೇರುತ್ತಾರೆ. ತಾವು ತಂದ ಮುಳ್ಳುಕೊಂಡಿಗಳನ್ನು ಒಂದು ಸ್ಥಳದಲ್ಲಿ ರಾಶಿ ಹಾಕುತ್ತಾರೆ. ಪೂಜೆಯ ನಂತರ ಹರಕೆ ಹೊತ್ತ ಭಕ್ತರೆಲ್ಲ ಮುಳ್ಳಿನ ರಾಶಿಯ ಮೇಲೆ ಹಾರುತ್ತಾರೆ, ಕುಣಿಯುತ್ತಾರೆ. ಅರ್ಧ ಗಂಟೆಯವರೆಗೆ ನಡೆದ ಕೂಗಾಟ, ಚೀರಾಟದೊಂದಿಗೆ ಹರಕೆ ಮುಗಿಯುತ್ತದೆ. ಆದರೆ ಯಾರ ಕಾಲಿಗೂ, ಮೈಗೂ ಮುಳ್ಳಿಗಳು ಚುಚ್ಚದಿರುವುದು ಸೊಜಿಗದ ಸಂಗತಿ. ಗುಡಿಯ ಮುಂದೆ ರಾಶಿ ತುಳಿಯುವ ಮೊದಲೇ ಊರಿನ ಒಳಗೆ ಎರಡು ಭಾಗದಲ್ಲಿ ಮುಳ್ಳಿನ ರಾಶಿ ಮೇಲೆ ಕುಣಿದಾಡಿರುತ್ತಾರೆ.

ಮುಳ್ಳಿನಿಂದಲೇ ತಯಾರಿಸಿದ ಪಲ್ಲಕ್ಕಿಯ ಮೇಲೆ ಗುಡಿಯ ಪೂಜಾರಿಯನ್ನು ಮಲಗಿಸಿ, ಗಂಗೆ ಪೂಜಿಸಿ, ಗುಡಿಗೆ ಹೊತ್ತು ತರುತ್ತಾರೆ. ನಿಂಬೆ ಹಣ್ಣು ಚುಚ್ಚಿದ ಕತ್ತಿ ಹಿಡಿದ ಪೂಜಾರಿ ಆರ್ಭಟಿಸುತ್ತಾನೆ. ನಂತರ ಪೂಜಾರಿ ಪಾಯಸ ತಯಾರಿಸುವ ಒಲೆಗೆ ಕಿಚ್ಚಿಟ್ಟು, ಕಟ್ಟಿಗೆಯ ಗೂಡಿಗೆ ಬೆಂಕಿ ಇಡುತ್ತಾನೆ. ಈ ಸಮಯಕ್ಕಾಗಲೇ ಗುಡಿಯ ಮುಂದೆ ಜನ ಜಾತ್ರೆ ನೆರೆದಿರುತ್ತದೆ. ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ಪಾಯಸವನ್ನು ಎತ್ತಿ ತೋರಿಸುತ್ತಾನೆ. ತದನಂತರ ಊರ ಉದ್ಧಾರ, ಮಳೆ, ಬೆಳೆಯ ಸಿಂಗಾರದ ಬಗ್ಗೆ ಹೇಳಿಕೆ ನೀಡಿ, ಸುಡುವ ಕೆಂಡದ ಮೇಲೆ ನಡೆಯುತ್ತಾನೆ. ಇಲ್ಲಿಗೆ ಜಾತ್ರೆ ಮುಗಿಯುತ್ತದೆ. ಹಿಂದೆ ಊರಿಗೆ  ಬರಗಾಲ ಬಂದಾಗ ಹನುಮಪ್ಪ ದೇವರಿಗೆ ಮುಳ್ಳಿನ ಸೇವೆ ಮಾಡಿದ್ದರಿಂದ ಮಳೆ ಬಂದು, ವ್ಯವಸಾಯಕ್ಕೆ ಅನುಕೂಲವಾಗಿತ್ತು ಎಂದು ಅಲ್ಲಿಯ ಭಕ್ತರು ಹೇಳುತ್ತಾರೆ.