ಮಲೆನಾಡಿನ ಕೃಷಿಕರಲ್ಲಿ ಕೃಷಿಸಂಬಂಧೀ ಪದ್ಧತಿ. ಮಲೆನಾಡಿನ ಕಾಡಿನಲ್ಲಿ ದೊರಕುವ ವಾಟೆಸೊಪ್ಪು, ನೆಲ್ಲಿಸೊಪ್ಪು, ಮುಕ್ಕುಡಕನ ಸೊಪ್ಪುಗಳನ್ನು ಕಡಿದು ತಂದು, ಎಲ್ಲಾ ಗದ್ದೆಗಳಲ್ಲೂ ಗೂಟ ಹೊಡೆದು ನಿಲ್ಲಿಸುತ್ತಾರೆ. ಅಲ್ಲದೆ ಗದ್ದೆಗಳ ಒಳಭಾಗದಲ್ಲಿ ಮಾರಿಗೊಂದರಂತೆ ಸೊಪ್ಪಿನ ತುಂಡೇ  ನೆಡುತ್ತಾರೆ. ಗಂಡಸರು ಮಾತ್ರ ಭಾಗವಹಿಸುತ್ತಾರೆ. ಕಾಡಿನಿಂದ ಸೊಪ್ಪು ತರಲು ಹೋಗುವ ವ್ಯಕ್ತಿ ನಸುಕಿನಲ್ಲಿಯೇ ಎದ್ದು ಯಾರೊಂದಿಗೂ ಮಾತನಾಡದೇ ಬೆತ್ತಲೆ ಹೋಗಬೇಕೆಂಬ ನಿಯಮವಿದೆ. ಈಚಿನ ದಿನಗಳಲ್ಲಿ ಸೊಪ್ಪು ತರುವ ವ್ಯಕ್ತಿ ಬೆತ್ತಲಾಗಿರುವುದಿಲ್ಲ. ನಾಟಿ ಮಾಡಿದ ಸಸಿಗಳು ಬಹಳ ಎಳಸಾಗಿದ್ದು, ಅತಿವೃಷ್ಟಿಯಾಗಿ ಕರಗಿ ಹೋಗುತ್ತಿದ್ದರೆ ಅಂಥ ಗದ್ದೆಗಳಿಗೆ ಎರಕ್ಲು ತುಂಡೇ ಹಾಕುತ್ತಾರೆ. ಸುಮಾರು ಮೂರು ಅಡಿ ಉದ್ದದ ನೆಲ್ಲಿ ಹರೆಯನ್ನು ಹವರು ಕವೆಗೋಲು ಇಟ್ಟು ಕಡಿದು ಅದಕ್ಕೆ ಕೂಳೆ ಬಳ್ಳಿಯ ಒಂದು ಉಂಗುರ ಮಾಡಿ ಹಾಕಿ, ಬೈನೆಸೊಪ್ಪನ್ನು ಸಿಕ್ಕಿಸಿ ಗದ್ದೆ ಎಲ್ಲಿ ಹೆಚ್ಚು ಕರಗುತ್ತದೋ ಅಲ್ಲಿ ಹೂಳುವುದು ಕ್ರಮ. ಕೃಷಿಕರು ಮಾಂತ್ರಿಕ ಶಕ್ತಿಯಲ್ಲಿ ನಂಬಿಕೆಯಿಟ್ಟು ಸೊಪ್ಪು ಇತ್ಯಾದಿ ವಸ್ತುಗಳನ್ನು ಭಕ್ತಿಪೂರ್ವಕವಾಗಿ ಹಾಕುತ್ತಾರೆ. ಮಾಂತ್ರಿಕಾಚರಣೆಯಲ್ಲಿ ಬಳಸಿದ ವಸ್ತುಗಳ ಔಷಧೀ ಗುಣದಿಂದ ಕ್ರಿಮಿಕೀಟಾದಿಗಳು ದೂರವಾದವೇ ಹೊರತು ಮಾಂತ್ರಿಕಾಚರಣೆಯಿಂದಲ್ಲ. ಆಚರಣೆಯ ನೆವದಿಂದ ಗದ್ದೆಗಳಿಗೆ ಅನುಕೂಲವಾಗುವುದನ್ನು ಮರೆಯುವಂತಿಲ್ಲ.