ಆಚರಣೆಗಳು ಜನಪದ ದೃಷ್ಟಿಯಲ್ಲಿ ದೈವತ್ವದ ಸಂಕೇತ. ದೇವರಿಗಾಗಿ ಕೆಲವರು ಹರಕೆ ಕಟ್ಟಿಕೊಳ್ಳುತ್ತಾರೆ. ಅಂತಹ ಹರಕೆಗಳ ಪೈಕಿ ಮುತ್ತು ಕಟ್ಟುವಿಕೆಯು ಒಂದು. ಇದನ್ನು ‘ಮಣಿಕಟ್ಟಿಸುವ,’ ‘ದೇವರಿಗೆ ಬಿಡುವ’ ಪದ್ಧತಿಯಂತಲೂ ಕರೆಯುತ್ತಾರೆ. ಸಮಾಜದ ಕೆಳಸ್ತರದ ಮಾದಿಗ, ಹೊಲೆಯ, ಲಂಬಾಣಿ, ವಡ್ಡ, ಕುರುಬ, ಕೊರಚ, ಕೊರಮ ಇತ್ಯಾದಿ ಸಮುದಾಯಗಳಲ್ಲಿ ಮೇಲಿನ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಯಲ್ಲಮ್ಮ, ಹುಲಿಗೆಮ್ಮ, ಉಚ್ಚೆಂಗೆಮ್ಮ, ಗಾಳೆಮ್ಮ ಮೊದಲಾದ ದೇವಿಯರ ಹೆಸರಿನಲ್ಲಿ ಬಿಳಿ, ಅರಿಶಿಣ ಹಾಗೂ ಕೆಂಪು ಬಣ್ಣಗಳ ಸಂಯುಕ್ತ ಮಣಿಸರವನ್ನು ಕಟ್ಟಿಸಿ ಕೊಳ್ಳುತ್ತಾರೆ. ಇದನ್ನು ಮುತ್ತು ಕಟ್ಟಿಸುವ ಪದ್ಧತಿ ಎಂದು ಕರೆಯುತ್ತಾರೆ. ಮುತ್ತು ಕಟ್ಟಿಸಿಕೊಂಡವರು ಆಯಾ ದೇವಿಯರ ಅಧೀನದಲ್ಲಿರಬೇಕಾಗುತ್ತದೆ. ಮುತ್ತು ಕಟ್ಟಿಸುವ ಪದ್ಧತಿಯಲ್ಲಿ ಕನ್ಯೆ ಮುತ್ತು, ಗರತಿ ಮುತ್ತು ಹಾಗೂ ಗಂಡಸು ಮುತ್ತು ಎಂಬ ಪ್ರಭೇದಗಳಿವೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ, ದಾವಣಗೆರೆ ಜಿಲ್ಲೆಯ ಉಚ್ಚಂಗಿದುರ್ಗದ ಉಚ್ಚಂಗೆಮ್ಮ, ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಾಲಯಗಳು ಮುತ್ತು ಕಟ್ಟುವ ಪ್ರಧಾನ ಕೇಂದ್ರಗಳಾಗಿವೆ. ಅಲ್ಲದೆ ಬೀದರ್, ಬಿಜಾಪುರ, ಗುಲ್ಬರ್ಗಾ, ಧಾರವಾಡ, ಗದಗ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲ ಊರುಗಳಲ್ಲಿ ಈ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ.  ಕೆಲ ಭಾಗದಲ್ಲಿ ಗಂಡು ದೇವರ ಹೆಸರಿನಲ್ಲಿ ಈ ರೀತಿಯ ಮುತ್ತನ್ನು ಕಟ್ಟಿಸುವ ಪರಿಪಾಠವಿದೆ.

ಜನರ ದೃಷ್ಟಿಯಲ್ಲಿ ಮುತ್ತು ಕಟ್ಟಿಸಿಕೊಳ್ಳುವುದು ಒಂದು ಪವಿತ್ರ ಪದ್ಧತಿಯಾಗಿದೆ. ದೇವದಾಸಿ, ಜೋಗತಿ ಹಾಗೂ ಜೋಗಪ್ಪ ಆಗಬೇಕಾದವರು ಕಡ್ಡಾಯವಾಗಿ ಮುತ್ತುಗಳನ್ನು ಕಟ್ಟಿಸಿಕೊಳ್ಳಬೇಕಾಗುತ್ತದೆ. ಈ ಆಚರಣೆ ಒಂದು ಮದುವೆ ಕಾರ್ಯಗಳ ವೈಖರಿಯಂತೆ; ಅದಕ್ಕಾಗಿ ತಿಂಗಳಾನುಗಟ್ಟಲೆ ತಯಾರಿ ನಡೆಯುತ್ತದೆ. ಮುತ್ತು ಕಟ್ಟಿಸಿಕೊಳ್ಳುವವರು ಆ ದಿನ ಮಡಿಯಿಂದ ಉಪವಾಸವಿರಬೇಕು. ಅಂದು ಅವರನ್ನು ಮುತ್ತು ಕಟ್ಟುವ ದೇವಾಲಯಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವರಿಗೆ ಅರಿಶಿಣ ಹಚ್ಚಿ ಸುರಗಿ ನೀರು ಹಾಕುತ್ತಾರೆ. ಹೊಸ ಬಟ್ಟೆಯನ್ನು ತೊಡಿಸಿ, ತಲೆಯ ಮೇಲೆ ಹೂವಿನ ದಂಡೆ ಕಟ್ಟಿ ಕಳಶವನ್ನು ಬೆಳಗಿಸುತ್ತಾರೆ. ನಂತರ ಹಿರಿಯ ಜೋಗತಿ ಅಥವಾ ಅರ್ಚಕರು ಮುತ್ತನ್ನು ಕಟ್ಟುತ್ತಾರೆ. ಮುತ್ತು ಕಟ್ಟಿಸಿಕೊಂಡವರು ದೇವತೆಗೆ ಉಡಿ ತುಂಬಿಸಿ ಪಡಲಿಗೆ ಪಡೆಯುತ್ತಾರೆ. ಹೀಗೆ ‘ಪಡಲಿಗೆ’ ಪಡೆದವರು ಪ್ರತಿ ಹುಣ್ಣಿಮೆ ಅಮಾವಾಸ್ಯೆ ಮಂಗಳವಾರ ಮತ್ತು ಶುಕ್ರವಾರ ಸಂಪ್ರದಾಯದಂತೆ ಭಿಕ್ಷೆಗೆ ಹೋಗಬೇಕು. ಕನಿಷ್ಟ ಐದು ಮನೆಗಾದರೂ ಹೋಗಿ ಬರಬೇಕೆಂಬ ನಿಯಮವಿದೆ. ಅವರಲ್ಲಿ ಚೌರಿ, ಪಡಲಗಿ ಕೆಲವು ದೇವರ ಫೋಟೋಗಳು ಇರುತ್ತವೆ.

ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳಿಗೆ ದೇವತೆಯ ಹೆಸರಿನಲ್ಲಿ ಮುತ್ತು ಕಟ್ಟಿಸಿದರೆ ಅದು ಕನ್ಯೆ ಮುತ್ತು ಎಂದು ಕರೆಯುತ್ತಾರೆ. ಅವರನ್ನು ದೇವರಿಗೆ ಬಿಟ್ಟವರೆಂದು, ದೇವದಾಸಿಯರೆಂದು, ಬಸವಿ ಅಥವಾ ಲೇಸಿಗಳೆಂದು ಕರೆಯುತ್ತಾರೆ. ಹೀಗೆ ಒಮ್ಮೆ ಮುತ್ತು ಕಟ್ಟಿಸಿಕೊಂಡವರು ಮದುವೆ ಆಗದೇ ಜೀವನಪೂರ್ತಿ ಹಾಗೇ ಉಳಿದಿರಬೇಕಾಗುತ್ತದೆ. ಲೈಂಗಿಕ ಸಂಪರ್ಕವನ್ನು ಪರಪುರುಷರೊಂದಿಗೆ ಇಟ್ಟುಕೊಳ್ಳಬಹುದು. ಅವರು ಭಿಕ್ಷೆ ಬೇಡಬೇಕೆಂಬ ನಿಯಮವಿಲ್ಲ.

ಯಲ್ಲಮ್ಮ, ಹುಲಿಗೆಮ್ಮ ಮತ್ತು ಉಚ್ಚೆಂಗೆಮ್ಮ ಮುಂತಾದ ದೇವತೆಗಳನ್ನು ಮನೆ ದೇವರನ್ನಾಗಿ ಮಾಡಿಕೊಂಡವರು ತಮ್ಮ ಕಷ್ಟಕಾಲದಲ್ಲಿ ಪರಿಹಾರಕ್ಕಾಗಿ ತಮ್ಮ ಮಗಳನ್ನೇ ‘ಬಸವಿ’ ಬಿಡುವ ಹರಕೆ ಹೊರುತ್ತಾರೆ. ಗಂಡು ಸಂತಾನವಿಲ್ಲದ ತಂದೆ ತಾಯಿಯರು ತಮ್ಮ ಆಸ್ತಿಯನ್ನು ಅನುಭವಿಸಲು ತಮ್ಮ ಮಗಳನ್ನು ಮನೆಯಲ್ಲಿ ಉಳಿಸಿಕೊಂಡು ‘ಬಸವಿ’ ಮಾಡುತ್ತಾರೆ. ಆಸ್ತಿಯಲ್ಲಿ ಗಂಡು ಮಕ್ಕಳಂತೆ ಸಮಪಾಲನ್ನು ಬಸವಿ ಹೆಣ್ಣು ಮಗಳಿಗೂ ಕೊಡುತ್ತಾರೆ. ಗೃಹಿಣಿಯೊಬ್ಬಳು ಮುತ್ತು ಕಟ್ಟಿಸಿಕೊಳ್ಳುವ ಪದ್ಧತಿಗೆ ಗರತಿ ಮುತ್ತು ಎಂದು ಕರೆಯುತ್ತಾರೆ. ಹುಲಿಗೆಮ್ಮ, ಯಲ್ಲಮ್ಮ, ಉಚ್ಚೆಂಗಮ್ಮರನ್ನು ಕುಲದೇವತೆಯಾಗಿ ಮಾಡಿಕೊಂಡವರು ಈ ಮುತ್ತನ್ನು ಕಟ್ಟಿಸಿಕೊಳ್ಳುತ್ತಾರೆ. ಗರತಿಗೆ ಇದ್ದಕ್ಕಿದ್ದ ಹಾಗೆ ಜಡೆ ಬಂದಾಗ, ಅವರವರ ಕುಲದೇವತೆ ಕನಸಿನಲ್ಲಿ ಬಂದು ಪೀಡಿಸಿದಾಗ ಗೃಹಿಣಿ ಮುತ್ತು ಕಟ್ಟಿಸಿಕೊಳ್ಳುತ್ತಾಳೆ. ಅವರನ್ನು ‘ದೇವತೆ ಒಲಿದವರು’ ಎಂದು ಕರೆಯುತ್ತಾರೆ. ದೇವರನ್ನು ಹೊತ್ತು ಭಿಕ್ಷೆ ಬೇಡುತ್ತಾರೆ. ಅವರನ್ನು ಜೋಗಮ್ಮಗಳೆಂದು ಕರೆಯುತ್ತಾರೆ. ಮೇಲುನೋಟಕ್ಕೆ ಅವರೆಲ್ಲ ದೈವ ಸ್ವರೂಪರಾಗಿ ಕಂಡರೂ ಅವರ ಬದುಕು ಯಾತನಾಮಯ ಎನ್ನುವುದನ್ನು ಮರೆಯುವಂತಿಲ್ಲ. ಈ ಪದ್ಧತಿಯನ್ನು ಕಾನೂನುಬಾಹಿರವೆಂದು ಸರ್ಕಾರ ಘೋಷಿಸಿದೆ.