ತಾವು ಪೂಜಿಸುವ ದೇವರಿಗೆ ತಮ್ಮ ಕೇಶವನ್ನು ಅರ್ಪಿಸುವುದು. ಮುತ್ತತ್ತಿಯ ಮುತ್ತತ್ತಿರಾಯನಿಗೆ ಅರ್ಪಿಸುವ ಮುಡಿ ವಿಶಿಷ್ಟವಾದುದು. ಮಕ್ಕಳು, ಗಂಡಸರು ಅಲ್ಲದೆ ಹೆಂಗಸರು ಮುಡಿ ಅರ್ಪಿಸುತ್ತಾರೆ. ಮಕ್ಕಳಿಗೆ ಒಂದು ವರ್ಷ ತುಂಬಿದ ಬಳಿಕ ಮುಡಿ ಅರ್ಪಿಸಿ ಹರಕೆ ತೀರಿಸುತ್ತಾರೆ. ಮುಡಿ ಕೊಡುವ ಮುನ್ನ ನದಿಯ ನೀರನ್ನು ಮೂರು ಬಾರಿ ಕೇಶದ ಮೇಲೆ ಹಾಕಿಕೊಳ್ಳಲಾಗುತ್ತದೆ. ಶಾಸ್ತ್ರದಂತೆ ಮುಡಿ ತೆಗೆಯುವ ವ್ಯಕ್ತಿಗೆ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಹಣ ಇತ್ಯಾದಿಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಮುಡಿ ಅರ್ಪಿಸಿದ ಭಕ್ತನನ್ನು ನದಿಯಲ್ಲಿ ಮೂರು ಬಾರಿ ಮುಳುಗಿಸಿ, ಸ್ನಾನ ಮಾಡಿಸಲಾಗುತ್ತದೆ. ನಂತರ ತಾವು ತಂದಿರುವ ಹೊಸ ಬಟ್ಟೆಗಳನ್ನು ತೊಡಿಸಿ, ದಾಸಯ್ಯನಿಂದ ವೈಷ್ಣವ ಸಂಪ್ರದಾಯದಂತೆ ಹಣೆಯ ಮೇಲೆ ಮೂರು ನಾಮ ಮತ್ತು ಅದರ ಕೆಳಗೆ ಒಂದು ಅಡ್ಡನಾಮವನ್ನು ಹಾಕಿಸುತ್ತಾರೆ. ಮಧ್ಯದಲ್ಲಿರುವ ನಾಮವು ಕೆಂಪು ಅಥವಾ ಕೇಸರಿ ಬಣ್ಣದಲ್ಲಿರುತ್ತದೆ. ದಾಸಯ್ಯನಿಗೆ ಸೂಕ್ತ ಕಾಣಿಕೆ ನೀಡಿ ಕೈಮುಗಿದು ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ತೀರ್ಥವನ್ನು ತಲೆಯ ಮೇಲೆ ಹಾಕಿಸಿ ಕೊಳ್ಳುತ್ತಾರೆ.

ಸೇವೆಯ ರೂಪದಲ್ಲಿ ಮುಡಿ ಅರ್ಪಿಸುವ ಭಕ್ತರು, ಕುರಿ, ಮೇಕೆ, ಕೋಳಿಯನ್ನು ದೇವರಿಗೆ ಅರ್ಪಿಸಿ, ಕರಿಯಣ್ಣ, ಕೆಂಚಣ್ಣ ಮತ್ತು ದೊಡ್ಡದೇವರಿಗೆ ಎಡೆ ಅರ್ಪಿಸಿ ಸಹಭೋಜನ ಮಾಡುತ್ತಾರೆ. ದಾಸಯ್ಯನು ಕರಿಯಣ್ಣ ಕೆಂಚಣ್ಣ, ದೊಡ್ಡದೇವರನ್ನು ಊರಿನಿಂದ ತಂದಿರುತ್ತಾನೆ. ಎಡೆ ಅರ್ಪಿಸುವ ಸಂದರ್ಭದಲ್ಲಿ ದಾಸಯ್ಯನು ಮುತ್ತತ್ತಿರಾಯನ ಪಾದಕ್ಕೆ ಗೋವಿಂದಾ, ಗೋವಿಂದಾ ಪಾದ್ದಾರಪ್ಪನ ಪಾದಕ್ಕೆ ಗೋವಿಂದಾ, ಗೋವಿಂದಾ, ಹೊಳೆ ಸಾಲಯ್ಯ ನಿನ್ನ ಪಾದಕ್ಕೆ ಗೋವಿಂದ ಎಂದು ಗೋವಿಂದ ಹಾಕುತ್ತಾನೆ. ದಾಸಯ್ಯನೆಂದರೆ ಗ್ರಾಮೀಣ ಜನರಿಗೆ ಅತೀವ ಭಕ್ತಿ ಮತ್ತು ನಂಬಿಕೆ. ಅವನು ದೇವರನ್ನು ಪೂಜಿಸಿ ದೇವರನ್ನು ನಮಗೆ ಒಲಿಸಿಕೊಡುತ್ತಾನೆ ಎಂದು ನಂಬುತ್ತಾರೆ. ಅಲ್ಲಿ ಬಂದಿರುವ ಭಕ್ತರಿಗೆಲ್ಲ ಹಣೆಯ ಮೇಲೆ ನಾಮ ಹಾಕುತ್ತಾನೆ. ಭಕ್ತ ಗಂಡಸಾದರೆ ಮೂರು ನಾಮ, ಹೆಂಗಸರಾದರೆ ಕೆಂಪಿನ ಒಂದೇ ನಾಮ ಹಾಕುತ್ತಾನೆ. ಭಕ್ತರೆಲ್ಲ ದಾಸಯ್ಯನ ಕಾಲಿಗೆ ನಮಸ್ಕರಿಸುತ್ತಾರೆ. ದೇವರಿಗೆ ಇಟ್ಟ ಎಡೆಯನ್ನು ಕೈಯಲ್ಲಿ ಹಿಡಿದ ದಾಸಯ್ಯ ಭಕ್ತರಿಂದ ಕಾಣಿಕೆ ಪಡೆದು ಅವರನ್ನು ಆಶೀರ್ವದಿಸಿ, ಅಂದಿನ ಆಚರಣೆಯನ್ನು ಮುಗಿಸುತ್ತಾನೆ. ಅಲ್ಲದೆ ದಾಸಯ್ಯನಿಗೆ ಅಕ್ಕಿಪಡಿ ಎಂಬ ಕಾಣಿಕೆ ನೀಡುವ ಸಂಪ್ರದಾಯವು ಇದೆ. ಬೆಲ್ಲ, ಬಾಳೆಹಣ್ಣು ಹಾಗೂ ಕಾಯಿಗಳು ಸೇರಿ ಅಕ್ಕಿಪಡಿ ಎನಿಸಿಕೊಳ್ಳುತ್ತದೆ. ಇದೇ ಬಗೆಯ ಅಕ್ಕಿಪಡಿಯನ್ನು ಮುತ್ತತ್ತಿರಾಯನ  ತಮ್ಮಡಿಗೆ ನೀಡುತ್ತಾರೆ. ನಂತರ ದೆೀವಾಲಯದ ಹುಂಡಿಗೆ ಕಾಣಿಕೆ ಅರ್ಪಿಸಿ, ದೇವತೆಯನ್ನು ಪೂಜಿಸಿ, ತೀರ್ಥವನ್ನು ಬಾಟಲಿಗಳಲ್ಲಿ ಸಂಗ್ರಹಿಸಿ, ತಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಹಾಕಿ ಧನ್ಯರಾಗುತ್ತಾರೆ.