ತಲೆಯ ಮೇಲೆ ಕಪ್ಪೆಯನ್ನು ಹೊತ್ತು, ನೀರಿನಲ್ಲಿ ತೋಯ್ದು ಮಳೆ ಭಿಕ್ಷೆ ಬೇಡುವ ಪದ್ಧತಿಯನ್ನು ಗುರ್ಚಿ ಆಚರಣೆ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಕಂಡುಬರುವ ಈ ಆಚರಣೆಯನ್ನು ಮಳೆ ಇಲ್ಲದೆ ಬರ ಬಂದಾಗ ಆಚರಿಸುತ್ತಾರೆ. ಈ ಆಚರಣೆಯಲ್ಲಿ ಹುಡುಗ, ಹುಡುಗಿಯರು, ಭೇದವಿಲ್ಲದಂತೆ ಸೇರಿ ಮಾಡುತ್ತಾರೆ. ಗುಂಪಿನ ಒಬ್ಬ ಯುವಕನ ತಲೆಯ ಮೇಲೆ ರೊಟ್ಟಿ ಸುಡುವ ಹಂಚಿನ ಮೇಲೆ ಸಗಣಿಯ ಒಳಗೆ ಕಪ್ಪೆಯನ್ನಿಟ್ಟು ಅದನ್ನೇ ಉತ್ತರಾಣಿ ಕಡ್ಡಿ, ಮೊಸರು ಕಡ್ಡಿ ಇಟ್ಟು ತಯಾರಿಸಿದ ಗುರ್ಜಿಯನ್ನು ಇಡುತ್ತಾರೆ. ಗುರ್ಜಿ ಹೊತ್ತವನ ಹಿಂದೆ ಪುಟ್ಟ ತಾಟು, ಜೋಳಿಗೆ ಹಿಡಿದವರು ಹಿಂಬಾಲಿಸುತ್ತಾರೆ. ನಂತರ ಊರ ಗೌಡರ ಮನೆಯ ಮುಂದೆ ಬಂದು

“ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ
ಹಳ್ಳಕೊಳ್ಳ ತಿರುಗ್ಯಾಡಿ ಬಂದೆ
ಹದ್ನಾರ ಎಮ್ಮಿ ಕಾಯಾಲಾರೆ
ಬಿಸಿ ಬಿಸಿ ಸಗಣಿ ತುಳಿಯಲಾರೆ
ಬಣ್ಣ ಕೊಡ್ತಿನಿ ಬಾರಲೆ ಮಳೆಯೇ
ಸುಣ್ಣ ಕೊಡ್ತಿನಿ ಸುರಿಯಲೆ ಮಳೆಯೇ.”

ಎಲ್ಲಾ ಕಡೆ ಸುತ್ತಾಡಿ ಬಂದಿದ್ದೇವೆ. ವ್ಯವಸಾಯ ಸಂಬಂಧಿ ಕೆಲಸ ಮಾಡಿ ಮಾಡಿ ಸಾಕಾಗಿ ಹೋಗಿದೆ. ಮಳೆ ಬರುವ ಲಕ್ಷಣ ಇಲ್ಲ. ಈ ಕಾರಣದಿಂದ ದೇಶಾಂತರ ಹೊಂಟಿವಿ. ಬರು ಮುಂದ ಮಳೆ ತಂದಾ ತರ್ತೀವಿ ತುತ್ತನ್ನ, ಬೊಗಸಿ ಕಾಳು ನೀಡಿ ಎಂಬಂತಹ ನುಡಿಗಳನ್ನು ಜೊತೆಗೆ ಹಾಡುಗಳನ್ನು ಹೇಳಿ ಮುಗಿಸುವಾಗಲೇ ಮನೆಯ ಗರತಿ ನೀರು ತುಂಬಿದ ಕೊಡವನ್ನು ಗುರ್ಜಿಯ ಮೇಲೆ ಸುರಿಯುತ್ತಾಳೆ. ಗುರ್ಜಿ ಹೊತ್ತ ಯುವಕ ಗರಗರ ತಿರುಗುತ್ತ ನೀರಲ್ಲಿ ನೀರಾಗುತ್ತಾನೆ. ಇತ್ತ ಗರತಿಯ ಮಗಳು ಮೊರದಲ್ಲಿ ಜೋಳ ತಂದು ನೀಡುತ್ತಾಳೆ. ಹೀಗೆ ಪ್ರತಿ ಮನೆಯ  ಮುಂದೆ ನೀರನ್ನು ಎರೆಸಿಕೊಂಡು ಭಿಕ್ಷೆ ತೆಗೆದುಕೊಳ್ಳುತ್ತಾರೆ. ಈ ಆಚರಣೆ ಐದು ದಿನ ನಡೆಯುತ್ತದೆ. ಐದನೇ ದಿನ ಭಿಕ್ಷೆಯಿಂದ ಸಂಗ್ರಹಿಸಿದ ಜೋಳದಿಂದ ಸಂಗ್ಟಿ ಹಾಗೂ ಅದಕ್ಕೆ ಸರಿಹೊಂದುವ ಸಾರು ತಯಾರಿಸುತ್ತಾರೆ. ಈ ಔತಣಕ್ಕೆ ತಮ್ಮ ಬೀದಿಯ ಜನರನ್ನೆಲ್ಲ ಕರೆಯುತ್ತಾರೆ. ಈ ಆಚರಣೆಯನ್ನು ಉತ್ತರ ಕರ್ನಾಟಕದ ಇರಕಲ್ಲಗಡ, ಯಲಮಗೇರಾ, ಕೊಡದಾಳ್, ಕಿನ್ನಾಳ, ಚಿನ್ನಾಪುರ, ಮಾದಿನೂರು ಮೊದಲಾದ ಗ್ರಾಮಗಳಲ್ಲಿ ಕಾಣಬಹುದು.