ಕಾಲಕ್ಕೆ ಸರಿಯಾಗಿ ಮಳೆ ಆಗದೇ ಇರುವಾಗ ಗ್ರಾಮದ ಹುಡುಗರು ಸೇರಿ ಮಾಡುವ ಭಿಕ್ಷಾವಿಧಾನ. ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಆಚರಣೆ ನಡೆಯುತ್ತದೆ. ವಿಶೇಷವಾಗಿ ಗಂಡಸರು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಸಣ್ಣಮಕ್ಕಳು ಇರುತ್ತಾರೆ. ಗುಂಪಿನ ಒಬ್ಬ ಯುವಕನಿಗೆ ಸೀರೆ, ಕುಪ್ಪಸ ಹಾಗೂ ಕೊಕಂಬಳ್ಳಿಯ ಬಳೆ, ಹಣೆಗೆ ಕುಂಕುಮ ಹಚ್ಚಿ ಹೆಣ್ಣು ಮಾಡುತ್ತಾರೆ. ನಂತರ ಒಂದು ಕೈಯಲ್ಲಿ ಮಣ್ಣಿನ ಗಡಿಗೆ ಮತ್ತೊಂದು ಕೈಯಲ್ಲಿ ಉದ್ದನೆಯ ಕೋಲು ಕೊಟ್ಟು, ಜೊತೆಗೆ ಬಗಲಿಗೊಂದು ಮಗು ಎತ್ತಿಕೊಳ್ಳಲು ಕೊಟ್ಟು, ತುತ್ತನ್ನಕ್ಕೂ ಗತಿಯಿಲ್ಲದ ಭಿಕ್ಷುಕಿಯಾಗಿ ಭಿಕ್ಷೆ ಬೇಡಲು ಮುಂದೆ ಬಿಟ್ಟು, ಹಿಂದೆ ಉಳಿದವರಲ್ಲಿ ಒಬ್ಬ ಅವಳ ಗಂಡ, ಚಿಕ್ಕವರು ಮಕ್ಕಳಾಗಿ ಭಿಕ್ಷೆಗೆ ಹೊರಡುತ್ತಾರೆ.

ಮನೆ ಮನೆಗೂ ತೆರಳಿದ ಅವರು “ಯವ್ವ ನೀಡವ್ವ ಯಕ್ಕ ನೀಡವ್ವ ಮಕ್ಕಳು, ಮರಿ ಹಸಗೊಂಡಾವೆ. ಮೂರು ದಿವಸದಿಂದ ಯಾರು ಅಗಳು ಅನ್ನ ಕಂಡಿಲ್ಲ. ಹನಿ ನೀರು ಕುಡಿದಿಲ್ಲ. ಭಿಕ್ಷೆ ನೀಡಿ ನಿಮ್ಮ ಮಕ್ಳು ಮರಿಗೆ ಪುಣ್ಯ ಬರತೈತಿ. ನಿಮ್ಮ ಮನಿ ತಣ್ಣಗೀರತೈತಿ” ಎಂದು ಕಿರುಚುತ್ತಾರೆ. ಹೀಗೆ ಹತ್ತಾರು ಮನೆಗಳ ಮುಂದೆ ಹೋಗಿ ಭಿಕ್ಷೆ ಬೇಡುತ್ತಾರೆ. ಮುಂದೆ ಭಿಕ್ಷೆಗಾಗಿ ಆಯ್ಕೆ ಮಾಡಿಕೊಳ್ಳುವ ಮನೆ, ಮಳೆ ವಾಸವಾಗಿರುವಲ್ಲಿ ಅಶ್ವಿನಿ, ಭರಣಿ, ಕೃತಿಕ, ರೋಹಿಣಿ, ಮೃಗಶಿರದಂತಹ ಮಳೆಗಳಲ್ಲಿ ಅಶ್ವಿನಿಯು ಹೂಗಾರ ಮನೆ, ಭರಣಿಯು ಅಗಸರ ಮನೆ, ಕೃತಿಕೆಯು ತಳವಾರ ಮನೆ, ಕೃತಿಕದಂತೆ ರೋಹಿಣಿಯು ಬಣಜಿಗರ ಮನೆ ಸೇರಿದಂತೆ ಮೃಗಶಿರವು ಕ್ವಾಮಟರ ಮನೆಯಲ್ಲಿ ವಾಸವಾಗಿತ್ತೆಂದರೆ ಅದನ್ನು ಮೊದಲೇ ಪಂಚಾಂಗದ ಮೂಲಕ ತಿಳಿದುಕೊಂಡು ಕ್ವಾಮಟರ (ವೈಶ್ಯ) ಮನೆಯ ಮುಂದೆ ಹೋಗುತ್ತಾರೆ. ಜಿಪುಣರ ಮನೆಯಲ್ಲಿ ವಾಸವಾಗಿರುವ ಮಳೆ ಹೊರ ಬರಬೇಕಾದರೆ ಅದು ಅಸಾಧ್ಯವಾದ ಮಾತು. ಹೇಗಾದರೂ ಮಾಡಿ ಆ ಮಳೆಯನ್ನು ಹೊರಬರುವಂತೆ ಮಾಡಲು “ಯವ್ವ ಸಣ್ಣ ಮಗು ಹಸು ಗೊಂಡಾತಿ, ನೀರು ನೀರು ಅಂತ ಅಳತೈತಿ ಒಂದು ತುತ್ತು ಅನ್ನ, ಹನಿ ನೀರು ಹಾಕು ಯವ್ವ” ಎಂದು ಬೇಡುತ್ತಿರುವಾಗಲೇ ಮನೆ ಒಡತಿ ಹೀಗೆ ಹೇಳುತ್ತಾಳೆ. “ಭಿಕ್ಷೆ ಬೇಡಾಕ ಹೊತ್ತು ಐತೇನು ಇಲ್ಲ ನಿಮಗೆ, ನಿಮಗೇನು ದಾಡಿಯ್ಯಗೇತಿ ದುಡಿದು ತಿನ್ನಾಕ ಬರೋದಿಲ್ಲೇನು”? ಎಂದು ಬೈಯುತ್ತಲೇ ಒಳಗಿನಿಂದ ಬಂದು ಅನ್ನ, ನೀರು ನೀಡಿ ಗೃಹಿಣಿ ಒಳ ಹೋಗುತ್ತಿದ್ದಂತೆಯೇ ಭಿಕ್ಷುಕಿ ನೀರು ತುಂಬಿದ ಗಡಿಗೆಯನ್ನು ಅವರ ಮನೆಯ ಮುಂದೆ ದೊಪ್ಪೆಂದು ಹಾಕಿ ಎಲ್ಲರೂ ಅಲ್ಲಿಂದ ಓಡಿ ಹೋಗುತ್ತಾರೆ. ಈ ಸದ್ದು ಕೇಳಿದ ಮನೆಯೊಡತಿ ಆ ಭಿಕ್ಷುಕ ತಂಡಕ್ಕೆ ಬಾಯಿಗೆ ಬಂದಂತೆ ಬೈಯುತ್ತಾಳೆ. ಇತ್ತ ಓಡಿ ಬಂದ ಯುವಕರು ಗುಡಿ ಗುಂಡಾರ ನೋಡಿ ಜೋಳಿಗೆಯಲ್ಲಿನ ರೊಟ್ಟಿ, ಅನ್ನ ಪಲ್ಲೆ ತಿಂದು ಮನೆಗೆ ತೆರಳುತ್ತಾರೆ.