ಉಜ್ಜಿನಿಯ ಒಂಭತ್ತು ಜನ ಆಯಗಾರರು ಸಿಂದೋಗಿಯಿಂದ ಸಾಂಕೇತಿಕವಾಗಿ ಮಳೆ ಬೀಜ ತರುವ ಆಚರಣೆ. ಐದು ವರ್ಷಕ್ಕೆ ಒಂದು ಸಾರಿ ನಡೆಯುವ ಈ ಆಚರಣೆಯಲ್ಲಿ ಮಡಿವಾಳರು, ವಾಲ್ಮೀಕಿಗಳು, ಕುಂಬಾರರು, ಕೊರವರು ಸೇರಿಕೊಂಡಿರುತ್ತಾರೆ. ಒಂಭತ್ತು ಜನ ಆಯಗಾರರು ಬುತ್ತಿ ಗಂಟು, ಹೆಗಲಿಗೊಂದು ಕಂಬಳಿ, ಕೈಲೊಂದು ಬೆತ್ತ ಹಿಡಿದು ಉಜ್ಜಿನಿಯ ಸದ್ಧರ್ಮ ಪೀಠದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಮಳೆ ಬೀಜ ತರಲು ಮೆರವಣಿಗೆಯಲ್ಲಿ ಹೊರಡುತ್ತಾರೆ. ಮೆರವಣಿಗೆಯಲ್ಲಿ ಡೋಲಿನವರು, ನಂದಿಕೋಲು, ಕರಡಿ ಸಮಳದವರು ಹಾಗೂ ಮೇಳದವರು ಇರುತ್ತಾರೆ. ಆಯಗಾರರಿಗೆ ಶ್ರೀಪೀಠ ಮತ್ತು ಗ್ರಾಮಸ್ಥರು ಕೆಲ ಷರತ್ತುಗಳನ್ನು ವಿಧಿಸಿರುತ್ತಾರೆ. ಇದು ನಿಷ್ಠೆಯಿಂದ ಜರುಗುವ ಪಾದಯಾತ್ರೆ. ಕಣ್ಣಿನ ನೇರಕ್ಕೆ ನಡೆಯಬೇಕು. ಅದೇ ದಾರಿ. ಹೊಲ ಕಾಡುಗಳನ್ನು ನಡೆಸಿ ಸಾಗಬೇಕು. ಚಪ್ಪಲಿ ಮೆಟ್ಟುವಂತಿಲ್ಲ. ಯಾವ ಕಾರಣಕ್ಕೂ ಗ್ರಾಮಗಳ ಮಧ್ಯೆ ಹಾಯುವಂತಿಲ್ಲ. ಅವರವರ ಮಧ್ಯದಲ್ಲಿ ಮಾತ್ರ ಸಂಭಾಷಣೆ ನಡೆಸಬಹುದು.

ಮಳೆ ಬೀಜ ತರುವ ಆಯಗಾರರು ಶನಿವಾರವೇ ಹೊರಡಬೇಕೆಂಬ ನಿಯಮವಿದೆ. ಅಂದು ರಾತ್ರಿ ಕಾಡಿನ ಮಧ್ಯೆ ಮಲಗಿ, ತಂದಿದ್ದ ಬುತ್ತಿ ಉಂಡು, ಭಾನುವಾರ ಮತ್ತೆ ಯಾತ್ರೆಯನ್ನು ಆರಂಭಿಸಬೇಕು. ದಾರಿಯಲ್ಲಿ ಸಿಗುವ ಹೊಳೆ ಹಳ್ಳಗಳನ್ನು ಆಯಾ ಊರಿನ ಅಂಬಿಗರು ಹರಿಗೋಲಿನ ಮೂಲಕ ದಾಟಿಸುತ್ತಾರೆ. ಉಜ್ಜಿನಿಯಿಂದ ಸಿಂದೋಗಿ ನೂರು ಕಿಲೋಮೀಟರ್ ದೂರದಲ್ಲಿದೆ. ಆಯಗಾರರ ಗುಂಪಿನ ಪ್ರಮುಖನಿಗೆ ವಿಭೂತಿ ಉಂಡೆ ಗಳನ್ನು ಅರ್ಪಿಸಲಾಗುತ್ತದೆ. ಪವಿತ್ರವಾದ ಕರಿ ಶಿಖರದ ಮೇಣದ ಉಂಡೆ ಕೊಟ್ಟು, ಹೊಚ್ಚ ಹೊಸ ಕರಿ ಕಂಬಳಿ ನೀಡಲಾಗುತ್ತದೆ. ಜೊತೆಗೆ ಶ್ರೀ ಪೀಠದವರು ನೀಡಿದ ವಿವರವಾದ ಪತ್ರ, ಗ್ರಾಮ ಪಂಚಾಯ್ತಿಯವರು ನೀಡಿದ ಪತ್ರ, ತಹಸೀಲ್ದಾರರು ಹಾಗೂ ಪೋಲೀಸ್ ಠಾಣೆಗಳು ನೀಡಿದ ಪತ್ರಗಳು ದಾರಿಯಲ್ಲಿನ ಜನರಿಂದಾಗುವ ತೊಂದರೆಗಳನ್ನು ತಪ್ಪಿಸುತ್ತವೆ. ಪೂರ್ವ ಕಾಲದಿಂದಲೂ ನಡೆದುಕೊಂಡು ಬರುವ ಮಳೆಬೀಜ ತರುವ ಪದ್ಧತಿ ಗೊತ್ತಿರುವುದರಿಂದ ದಾರಿ ಮಧ್ಯದಲ್ಲಿ ಬರುವ ಹಳ್ಳಿಗಳ ಜನರು ಆಯಗಾರರನ್ನು ಕಂಡೊಡನೆ ಪೂಜ್ಯ ಭಾವನೆಯಿಂದ ನೋಡಿ ದಾರಿ ಬಿಟ್ಟು ಸರಿಯುತ್ತಾರೆ.

ಎರಡು ದಿನಗಳ ಸತತ ನಡಿಗೆಯಿಂದಾಗಿ ಆಯಗಾರರ ಕಾಲುಗಳು ನೋವಿನಿಂದ ಬಳಲಿ ಪಾದಗಳಲ್ಲಿ ಬೊಬ್ಬೆಗಳು ಕಾಣಿಸಿಕೊಂಡರೂ ಯಾತ್ರೆಯನ್ನು ನಿಲ್ಲಿಸುವಂತಿಲ್ಲ. ಆಸ್ಪತ್ರೆ ಸೇರುವಂತಿಲ್ಲ. ಭಾನುವಾರ ರಾತ್ರಿ ಆಯಗಾರರ ತಂಡ ಸಿಂದೋಗಿಗೆ ತಲುಪಿದಾಗ ಅಲ್ಲಿಯ ಗ್ರಾಮಸ್ಥರು ಅವರನ್ನು ಸ್ವಾಗತಿಸಿ, ಮೆರವಣಿಗೆಯಲ್ಲಿ ಮರುಳ ಸಿದ್ದಪ್ಪನ ದೇವಸ್ಥಾನಕ್ಕೆ ಕರೆತರುತ್ತಾರೆ. ಇಲ್ಲಿಯ ಉಜ್ಜಿನಿ ಸದ್ಧರ್ಮ ಪೀಠದ ಶಾಖಾ ಮಠವಿದೆ. ಮಳೆ ಮಲ್ಲಿಕಾರ್ಜುನ ಜಗದ್ಗುರುಗಳ ಗದ್ದಿಗೆಯೂ ಅಲ್ಲಿದೆ.

ಒಂದು ಕಥೆಯ ಪ್ರಕಾರ ನೂರಾರು ವರ್ಷಗಳ ಹಿಂದೆ ಮಳೆ ಮಲ್ಲಿಕಾರ್ಜುನರು ಉಜ್ಜಿನಿ ಪೀಠದಲ್ಲಿ ಜಗದ್ಗುರುಗಳಾಗಿದ್ದರು. ವೀರಶೈವ ಧರ್ಮ ಪ್ರಚಾರ  ಕೈಗೊಂಡು ಶ್ರೀಗಳು ಸಂಚರಿಸುತ್ತಾ ಸಿಂದೋಗಿಗೆ ಬಂದರಂತೆ. ಶಿವತತ್ವಕ್ಕೆ ಮಾರುಹೋದ ಚರ್ಮಕಾರರಿಗೂ ಅವರು ಲಿಂಗ ದೀಕ್ಷೆ ನೀಡಿದರಂತೆ. ಈ ಕರ್ಮಯೋಗಿಗಳು ವೃತ್ತಿಯಲ್ಲಿ ಚರ್ಮಕಾರರಾದರೂ ಆಚರಣೆಯಲ್ಲಿ ಶೈವರಾದರು. ಶ್ರೀಗಳು ಸಿಂದೋಗಿಯಿಂದ ಹಿಂದೆ ಮರಳುವಾಗ ಮಳೆಬೀಜವನ್ನು ಮರೆತು ಬಂದರು ಎಂಬುದು ಉಜ್ಜಿನಿಯ ಗ್ರಾಮಸ್ಥರ ನಂಬಿಕೆ. ಇದು ಘಟಿಸಿ ಶತಮಾನಗಳು ಉರುಳಿವೆ. ಅಂದಿನಿಂದ ಐದು ವರ್ಷಕ್ಕೊಂದು ಬಾರಿ ಮಳೆಬೀಜ ತರುವ ಸಂಪ್ರದಾಯ ನಡೆಯುತ್ತ ಬಂದಿದೆ.

ಆಯಗಾರರು ಮಳೆ ಮಲ್ಲಿಕಾರ್ಜುನರ ಗದ್ದುಗೆಗೆ ತಾವು ಉಜ್ಜಿನಿಯಿಂದ ತಂದ ಕಂಬಳಿ ಹಾಗೂ ವಿಭೂತಿಗಳನ್ನು ಅರ್ಪಿಸುತ್ತಾರೆ. ಸೇರು ಜೋಳದ ಬೀಜ ಅಲ್ಲಿ ಅದಲಿ ಬದಲಿಯಾಗುತ್ತವೆ. ಗದ್ದುಗೆಗೆ ವಿಶೇಷ ಪೂಜೆ ಉತ್ಸವ ನಡೆಯುತ್ತದೆ. ಆಯಗಾರರು ಸಿಂದೋಗಿಯನ್ನು ಸೋಮವಾರ ಬಿಟ್ಟು, ಮಂಗಳವಾರ ರಾತ್ರಿ ಉಜ್ಜಿನಿ ತಲುಪುತ್ತಾರೆ.

ಮಳೆ ಬೀಜ ತಂದ ಆಯಗಾರರು ವರ್ಣದೇವನ ಪ್ರತಿನಿಧಿಗಳಂತೆ ಊರನ್ನು ಪ್ರವೇಶಿಸುತ್ತಾರೆ. ಉಜ್ಜಿನಿ ಗ್ರಾಮಸ್ಥರು ಅವರನ್ನು ಮೆರವಣಿಗೆಯ  ಮೂಲಕ ಊರೊಳಗೆ ಕರೆತರುತ್ತಾರೆ. ಮರುದಿನ ಊರಿನ ರೈತರು ಸೇರು ಜೋಳವನ್ನು ತಂದು ಪೀಠದಲ್ಲಿ ರಾಶಿ ಹಾಕುತ್ತಾರೆ. ಆ ರಾಶಿಗೆ ಆಯಗಾರರು ತಂದ ಜೋಳವನ್ನು ಸೇರಿಸಿ ಅದರಿಂದ ಒಂದೊಂದು ಹಿಡಿ ಜೋಳವನ್ನು ಮನೆಗೆ ಒಯ್ದು ತಮ್ಮ ಮನೆಯ ಜೋಳದ ಜೊತೆಗೆ ಸೇರಿಸುತ್ತಾರೆ. ಹೀಗೆ ಜೋಳದ ಬದಲಾವಣೆ ಮಾಡುವುದರಿಂದ ಉತ್ತಮ ಬೆಳೆ, ಸಕಾಲಕ್ಕೆ ಮಳೆ, ಅಧಿಕ ಇಳುವರಿ ಬರುತ್ತದೆಂದು ಜನ ನಂಬುತ್ತಾರೆ.  ಮಸಲಹಟ್ಟಿ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ವರ್ಣನನ್ನು ಆರಾಧಿಸಿ ಅನ್ನ ಸಂತರ್ಪಣೆಯಲ್ಲಿ ಮಳೆಬೀಜ ತರುವ ಆಚರಣೆ ಕೊನೆಗೊಳ್ಳುತ್ತದೆ.