ಮಲೆನಾಡಿನ ಒಕ್ಕಲಿಗರು ದೀಪಾವಳಿಯಲ್ಲಿ ಕೃಷಿ ಉಪಕರಣಗಳನ್ನು ಪೂಜಿಸುವ ಪದ್ಧತಿ. ಕೃಷಿ ಕೆಲಸದ ಹಾಗೂ ದೈನಂದಿನ ಬದುಕಿನ ಎಲ್ಲಾ ವಸ್ತುಗಳನ್ನು ತೊಳೆದು ಮನೆಯ ಜಗಲಿಯಲ್ಲಿ ಓರಣವಾಗಿಟ್ಟು, ಬಿಳಿ ಹಾಗೂ ಕೆಂಪು ಬಣ್ಣದ ಪಟ್ಟಿಗಳನ್ನು ಬಳಿದು, ಮಾವು, ಹಿಂಗಾರ, ನೆಲ್ಲಿಸೊಪ್ಪು, ಕಿತ್ತಲೆ, ನಿಂಬೆ, ಕಕ್ಕೆ, ಉತ್ತರಾಣಿ, ಅಂಬಾಡಿ ಎಲೆ, ಹಲಸು, ಏಲಕ್ಕೆ ಕರೆ, ಪಚ್ಚೆತೆನೆ ಇತ್ಯಾದಿಗಳ ಮೇಲು ಚಪ್ಪರ ನಿರ್ಮಿಸುತ್ತಾರೆ. ಮೇಲುಚಪ್ಪರದ ಅಲ್ಲಲ್ಲಿ ಸೌತೆಕಾಯಿ, ಬಾಳೆಹಣ್ಣು, ತೆಂಗಿನಕಾಯಿ, ಕಕ್ಕೆಕಾಯಿ, ಹೀರೆಕಾಯಿ, ಇತ್ಯಾದಿಗಳಿಂದ ಅಲಂಕರಿಸುತ್ತಾರೆ. ಚೆಂಡು ಹೂವು, ಉಗನೆಕಾಯಿಸರ, ಸೇವಂತಿಗೆ ಇತ್ಯಾದಿ ಹೂಗಳ ಹಾರದಿಂದ ಸಿಂಗರಿಸುತ್ತಾರೆ. ಅಕ್ಕಿ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯ ಸರಗಳನ್ನು ಅಲ್ಲಲ್ಲಿ ಕಟ್ಟುತ್ತಾರೆ.

ರೈತಾಪಿ ಬದುಕಿನ ಎಲ್ಲಾ ವಸ್ತುಗಳ ಜೊತೆಗೆ ಕಡಗೋಲು, ಬೀಸುವ ಕಲ್ಲು, ಕೋವಿ, ಪಂಪ್‌ಸೆಟ್, ಔಷಧಿ ಮಿಷನ್ ಇತ್ಯಾದಿಗಳು ಸೇರುತ್ತವೆ. ಒಟ್ಟು ಕೃಷಿ ಬದುಕಿನ ಈ ಎಲ್ಲಾ ವಸ್ತುಗಳ ಗುಚ್ಛವನ್ನು ಬಲೀಂದ್ರ ಎಂದು ಕರೆಯುತ್ತಾರೆ. ಬಲೀಂದ್ರನ ಮುಂದೆ ಇರುವ ಕೊರಡಿನ ಮೇಲೆ ಸಗಣಿ ಹಾಗೂ ಕರ್ಕಿಯಿಂದ ಮಾಡಿದ ಬೆನಕನನ್ನು ಹಾಗೂ ಇನ್ನೊಂದು ಪಕ್ಕದಲ್ಲಿ ಹಣತೆಯ ದೀಪವನ್ನು ಇಟ್ಟು ಉರಿಸುತ್ತಾರೆ. ಅದರ ಮುಂದೆ ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ಕಲಶ ಇಡುತ್ತಾರೆ. ಕಲಶವು ಹಿಂಗಾರ, ಉಗನೆಕಾಯಿ, ಹೂ ಇತ್ಯಾದಿಗಳಿಂದ ಅಲಂಕೃತಗೊಂಡಿರುತ್ತದೆ. ಜೊತೆಗೆ ಸೆಗಣಿ ಹಾಗೂ ಇತರ ಪರಿಕರಗಳಿಂದ ಮಾಡಿದ ಕೆರಕಲನ್ನು ಇಟ್ಟಿರುತ್ತಾರೆ (ನೋಡಿ ಕೆರಕ).

ಗೋಪೂಜೆಯ ಸಂಜೆ ಬಲೀಂದ್ರನಿಗೆ ‘ಜೈನ ಎಡೆ’ ಎಂದು ಕರೆಯುವ ಸಿಹಿ ಅಡುಗೆಯ ವಿವಿಧ ಬಗೆಗಳನ್ನು ನೈವೇದ್ಯ ಮಾಡಿ, ದೀಪ ಬೆಳಗುತ್ತಾರೆ. ಬಾಳೆ ಕಂಬ ಮೇಲೆ ಸುತ್ತಲೂ ಚುಚ್ಚಿದ ಎಣ್ಣೆ ಬಟ್ಟೆ ಕಟ್ಟಿಗಳನ್ನು ಹೊತ್ತಿಸಿ, ದೀವೋಳ್ಗೆ ದೇವರದೀಪೋಳ್ಗೆ ಎಂದು ಎಲ್ಲಾ ಒಕ್ಕೊರಲಿನಿಂದ ಹಾಡಿ, ಕೈಮುಗಿಯುತ್ತಾರೆ. ನಂತರ ತುಳಸಿಗೂ ಗೂಡುದೀಪ ಬೆಳಗುತ್ತಾರೆ. ಅಂದು ದನಕರುಗಳಿಗೆ ಎಡೆ ತೋರಿಸಿ, ಅವುಗಳಿಗೆ ಅದನ್ನು ತಿನ್ನಲು ನೀಡುತ್ತಾರೆ. ಬಲೀಂದ್ರನನ್ನು ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನೆಯವರೆಗೆ ದೀಪ ಆರದಂತೆ ನೋಡಿಕೊಳ್ಳುತ್ತಾರೆ. ಬಲಿಂದ್ರನಿಗೆ ಭಯವಾಗಬಾರದೆಂದು ಅಲ್ಲಿಯೇ ಕೆಲವರು ಮಲಗುತ್ತಾರೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಗಂಟೆ ಬಾರಿಸಿ, ಧೂಪ ಹಾಕಿ, ಆರತಿ ಬೆಳಗುತ್ತಾರೆ.

‘ವರ್ಷ ತೊಡಕು’ ದಿನ ಬಲೀಂದ್ರನಿಗೆ ಹೊಸ ಹೂವುಗಳಿಂದ ಅಲಂಕರಿಸುತ್ತಾರೆ. ಆ ದಿನ ಬಲೀಂದ್ರನ ಎಡೆಗಾಗಿ ಹೆಂಗಸರು ೧೫ ರಿಂದ ೨೦ ಬಗೆಯ ಅಡುಗೆಯನ್ನು ಮಾಡುತ್ತಾರೆ. ಅದರಲ್ಲಿ ವಿಶೇಷವಾಗಿ ಬಾಳೆದಿಂಡಿನ ಪಚ್ಚಡಿ ಇರಲೇಬೇಕು. ಅಂದು ಹೊಸ ಬೆಳೆಯನ್ನು ಕೆಲವರು ಮನೆ ತುಂಬಿಸಿಕೊಳ್ಳುತ್ತಾರೆ. ಹೊಸ ತೆನೆಯನ್ನು ಬಲೀಂದ್ರನಿಗೂ ಅರ್ಪಿಸುತ್ತಾರೆ. ಮರುದಿನ ಮೇಲುಚಪ್ಪರದ ಸೊಪ್ಪು, ಬಾಳೆ ಕಂಬ, ಕಬ್ಬಿನ ಕೋಲು ಇತ್ಯಾದಿಗಳನ್ನು ಹತ್ತಿರದ ಹಳ್ಳ ಅಥವಾ ಹೊಳೆಗೆ ಹಾಕಿ ಬರುತ್ತಾರೆ. ಕೃಷಿ ಉಪಕರಣ ಹಾಗೂ ಇತರ ವಸ್ತುಗಳನ್ನು ಅವುಗಳ ಸ್ವಸ್ಥಳಗಳಿಗೆ ಸಾಗಿಸುತ್ತಾರೆ.