ಉಡುಪಿ ಜಿಲ್ಲೆಯ ಸುತ್ತಮುತ್ತ ಭೂಮಿಗೆ ಮೊದಲ ಬೀಜ ಬಿತ್ತುವಾಗ ಮಾಡುವ ಆಚರಣೆ. ಯುಗಾದಿಯ ದಿನ ಹಬ್ಬ ಮುಗಿಸಿಕೊಂಡ ಜನ ಪಂಚಾಂಗ ಫಲ ಕೇಳಿ ಹೊಸ ವರ್ಷದ ಮಳೆ – ಬೆಳೆಯ ಲೆಕ್ಕಾಚಾರ ಮಾಡಿಕೊಳ್ಳುವುದು ರೂಢಿ. ಪಂಚಾಂಗ ಫಲದಂತೆ ಮುಂದಿನ ವ್ಯವಸಾಯಕ್ಕೆ ತೊಡಗುತ್ತಾರೆ. ಯುಗಾದಿಗೂ ಮುನ್ನ ಭತ್ತದ ಗದ್ದೆಗಳನ್ನು ಉತ್ತಿ ಹದಗೊಳಿಸಿಕೊಂಡಿರುತ್ತಾರೆ. ಹಬ್ಬದ ದಿನ ಬೆಳಿಗ್ಗೆ ಪೂರ್ವ ನಿರ್ಧಾರಿತ ಮುಹೂರ್ತದ ಹೊತ್ತಿಗೆ ಪೂಜೆಗಾಗಿ ಆಯ್ದ ಗದ್ದೆಯ ಮೂಲೆಯೊಂದರಲ್ಲಿ ಬಿತ್ತನೆಯ ಕಾರ್ಯ ನಡೆಯುತ್ತದೆ. ಕುಟುಂಬದ ಸದಸ್ಯರು, ಯಜಮಾನ, ಮಕ್ಕಳು ಎಲ್ಲರೂ ಸೇರಿ ಪೊಲಿ….ಪೊಲಿ… ಪೊಲಿ… ಎಂದು ಹಾರೈಸುತ್ತಾ ಭಕ್ತಿಯಿಂದ ಬೀಜದ ಭತ್ತವನ್ನು ಅದರಲ್ಲಿ ಹಾಕುತ್ತಾರೆ.

ಬಿತ್ತನೆಯ ಬೀಜಕ್ಕಾಗಿ ಆಯ್ಕೆ ಮಾಡಿ ಸಂಗ್ರಹಿಸಿಟ್ಟ ಬೀಜಗಳು ಪರಿಣಾಮಕಾರಿಯೇ ಅಲ್ಲವೇ ಎಂದು ತಿಳಿಯಲು ಈ ಆಚರಣೆಯಲ್ಲಿ ಅಡಗಿದ ತಿರುಳು. ಈ ಬಗೆಯ ಬೀಜ ಮೂಹೂರ್ತ ಸಾಮಾನ್ಯವಾಗಿ ಬೈಲುಗದ್ದೆಗಳಲ್ಲಿ ನಡೆ ಯುತ್ತದೆ. ಇದಾದ ನಂತರ ಬೆಟ್ಟಗದ್ದೆಯಲ್ಲಿ ಉಳುಮೆ ಆರಂಭದ ಸಂಕೇತವಾಗಿ ಒಂದಿಷ್ಟು ನಿಗದಿತ ಸಂಖ್ಯೆಯ ಗೆರೆಗಳನ್ನು ಎತ್ತುಗಳಿಂದ ಕಟ್ಟಿದ ನೇಗಿಲಿಂದ ಗೀರಿಸಿ, ಗೆರೆಗಳು ಒಂದಾಗುವ ಸ್ಥಳದಲ್ಲಿ ಭೂಮಿಗೆ ಸಿಹಿಯಾದ ಗೊಬ್ಬರ ಹಾಕುತ್ತಾರೆ. ಬಳಿಕ ಅದೇ ಸ್ಥಳದಲ್ಲಿ ಕಾಸರಕನ ಸೊಪ್ಪು ಹಾಕಿ ಭೂಮಿಗೆ ಸಿಹಿಯ ಜೊತೆಗೆ ಕಹಿಯನ್ನು ಉಣಿಸುತ್ತಾರೆ. ಇದೇ ಬಗೆಯ ಆಚರಣೆಗಳನ್ನು ತೀರ್ಥಹಳ್ಳಿ ಸುತ್ತಮುತ್ತಲ ಊರುಗಳಲ್ಲಿಯು ಕಾಣಬಹುದು. ಆದರೆ ಭೂಮಿಗೆ ಕಹಿ ಉಣಿಸುವ ಆಚರಣೆ ಇಲ್ಲ. ಗೊಬ್ಬರ ಹಾಕಿ, ಬೀಜ ಮುಹೂರ್ತ ಮಾಡುವುದು ಮಾತ್ರ ಕಂಡುಬರುತ್ತದೆ.