ರೈತ ಬೆಳೆದ ಬೆಳೆಯನ್ನು ಕಣದಿಂದ ಕಣಜಕ್ಕೆ ಸಾಗಿಸುವ ಮೊದಲು ಧಾನ್ಯದ ರಾಶಿಯನ್ನು ಸಾಂಪ್ರದಾಯಿಕವಾಗಿ ಪೂಜಿಸುವುದನ್ನು ರಾಶಿಪೂಜೆ ಎಂದು ಕರೆಯುತ್ತಾರೆ. ಒಕ್ಕಣೆ ಕೆಲಸ ಮುಗಿದ ಬಳಿಕ ಧಾನ್ಯಗಳನ್ನು ಕಣದಲ್ಲಿ ರಾಶಿ ಹಾಕುತ್ತಾರೆ. ಹೊಲದ ವಾರಸುದಾರ ಮತ್ತು ಆತನ ಕುಟುಂಬ ವರ್ಗದವರೊಂದಿಗೆ ಅಕ್ಕಪಕ್ಕದ ರೈತಾಪಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಪದ್ಧತಿಯಂತೆ ಬೆಳೆದ ಬೆಳೆಯಲ್ಲಿ ಒಂದಷ್ಟನ್ನು ಪ್ರಕೃತಿ ಮಾತೆಗೆ ಅರ್ಪಿಸುತ್ತಾರೆ. ರಾಶಿಪೂಜೆಯನ್ನು ಊರಿನ ಗ್ರಾಮ ದೇವತೆಯ ಅರ್ಚಕರ ನೇತೃತ್ವದಲ್ಲಿ ನಡೆಸುತ್ತಾರೆ. ಪ್ರಕೃತಿ ಜೊತೆಗೆ ಅರ್ಪಿ ಸುತ್ತಾರೆ. ರಾಶಿಪೂಜೆ ಯನ್ನು ಊರಿನ ಗ್ರಾಮದೇವತೆಯ ಅರ್ಚಕರ ನೇತೃತ್ವ ದಲ್ಲಿ ನಡೆಸುತ್ತಾರೆ. ಪ್ರಕೃತಿ ಜೊತೆಗೆ ಅರ್ಪಿಸಿದ ಧಾನ್ಯವನ್ನು ಅರ್ಚಕರು ಪಡೆದುಕೊಳ್ಳುತ್ತಾರೆ.

ಸಗಣಿಯಿಂದ ಸಾರಿಸಿ, ರಂಗೋಲಿಯಿಂದ ಅಲಂಕರಿಸಿದ ಕಣದಲ್ಲಿ ರಾಗಿಯನ್ನು ದೊಡ್ಡರಾಶಿ, ದೇವರರಾಶಿ, ಬುದ್ಧವಂತರಾಶಿ, ಗೌರಮ್ಮನ ಗುಡ್ಡೆರಾಶಿ, ಕುಡ್ಡಿರಾಶಿ ಎಂಬುದಾಗಿ ಐದು ರಾಶಿಗಳನ್ನಾಗಿ ವಿಂಗಡಿಸಿಕೊಳ್ಳುತ್ತಾರೆ. ಅಲ್ಲದೆ ಬೇಸಾಯದಲ್ಲಿ ಉಪಯೋಗಿಸಿದ ಎಲ್ಲ ಕೃಷಿ ಉಪಕರಣಗಳನ್ನು ಒಂದೆಡೆ ಓರಣವಾಗಿ ಜೋಡಿಸಲಾಗುತ್ತದೆ. ರಾಶಿಯನ್ನು ಮಾವಿನ ಎಲೆ, ತುಂಬೆಹೂವು, ಕಣಗಲ ಹೂವು, ಅಣ್ಣೆಹೂವು ಇತ್ಯಾದಿಗಳಿಂದ ಶೃಂಗರಿಸುತ್ತಾರೆ. ಹಾಲು, ತುಪ್ಪ, ಊದುಬತ್ತಿ, ಕರ್ಪೂರ, ಎಲೆ-ಅಡಿಕೆ, ಹಣ್ಣು ಇತ್ಯಾದಿ ಪೂಜಾ ಸಾಮಾಗ್ರಿಗಳನ್ನು ಬಿದಿರಿನ ಕೊಳಗದಲ್ಲಿಟ್ಟುಕೊಂಡು ರಾಶಿಯನ್ನು ಮೂರು ಬಾರಿ ಸುತ್ತುತ್ತಾರೆ.

ರಾಶಿಪೂಜೆಯ ಸಂದರ್ಭದಲ್ಲಿ ಕೃಷಿ ಉಪಕರಣಗಳನ್ನು ಅವುಗಳ ನಿಜ ಹೆಸರಿನಿಂದ ಕರೆಯುವುದು ನಿಷಿದ್ಧ. ಪೂರ್ವದಲ್ಲಿ ಮಹಿಳೆಯರು ನಿಜ ಹೆಸರಿನಿಂದ ಕರೆದಿದ್ದರಿಂದ ರಾಶಿ ಹಾಗೂ ಉಪಕರಣಗಳೆಲ್ಲ ಕಲ್ಲಾಗಿ ಹೋದುವಂತೆ. ಕತೆಯ ಪ್ರಕಾರ ರೈತ ಮಹಿಳೆಯು ಕಣದಲ್ಲಿ ಹಾಕಿದ ರಾಶಿಯನ್ನು ಕಂಡು ಬೆರಗಾಗಿ ಇಷ್ಟೊಂದು ರಾಗಿ ರಾಶಿಯನ್ನು ಬೀಸಿ ಹಿಟ್ಟಾಗಿ ಮಾಡಿ ಮುದ್ದೆ ಮಾಡುವುದು ನನ್ನಿಂದ ಸಾಧ್ಯವೇ ಎಂದು ಉದ್ಗಾರ ತೆಗೆದಳಂತೆ. ಕೂಡಲೇ ಕಣದ ಅಂಗಳದಲ್ಲಿದ್ದ ರಾಗಿ ರಾಶಿಯು ಸೇರಿದಂತೆ ಒಕ್ಕಣೆ ಕಾರ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಕಲ್ಲಾಗಿಬಿಟ್ಟುವಂತೆ. ಅಂದಿನಿಂದ ಮುಂದೆ ನಿಜ ಹೆಸರಿನಿಂದ ಕರೆಯುವುದಿಲ್ಲವೆಂದು ಹೇಳುತ್ತಾರೆ.

ಊಟವನ್ನು ಕವಳವೆಂದು, ಪೊರಕೆಯನ್ನು ಬುದ್ದಿವಂತನೆಂದು, ಬೂದಿಗೆ ವಿಭೂತಿ ಎಂದು, ಗುಡಿಸುವುದಕ್ಕೆ ಬೆಳಗು ಎಂದು, ರಾಶಿಗೆ ಕೆಂಪು ಅಥವಾ ರಜ ಎಂದು, ಗುಂಡು ಕಲ್ಲಿಗೆ ರಥ ಎಂದು, ಉದ್ದಿಗೆಗೆ ಕುದುರೆ ಎಂದು, ಮರೆಗೋಲಿಗೆ ಮರೆಬಸವನೆಂದು, ಎತ್ತುಗಳಿಗೆ ಬಸ್ವನೆಂದು, ಕುಡುಗೋಲಿಗೆ ಆಯುಧವೆಂದು ಕರೆಯುತ್ತಾರೆ. ಹೀಗೆ ಎಲ್ಲ ಕೃಷಿ ಉಪಕರಣಗಳಿಗೆ ಒಂದೊಂದು ಹೆಸರನ್ನಿಟ್ಟು ಕರೆಯುವುದು ವಾಡಿಕೆಯಾಗಿದೆ.

ರಾಶಿಗೆ, ಪೂಜಾ ಸಾಮಾಗ್ರಿಗಳಿಂದ ತುಂಬಿದ ಕೊಳಗವನ್ನು ಹಿಡಿದು ಮೂರು ಬಾರಿ ಸುತ್ತುತ್ತಾರೆ. ನಂತರ ನೀರಿನ ಕೊಡವೊಂದರಿಂದ ರಾಶಿಗೆ ಚಿಮುಕಿಸುತ್ತಾರೆ. ನಂತರ ರಾಶಿಯನ್ನು ಅಲಂಕೃತಗೊಳಿಸಿ, ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ರಾಶಿಯಿಂದ ಕೃಷಿ ಕೆಲಸದಲ್ಲಿ ನೆರವಾದ ಜನರಿಗೆ ದಾನ ನೀಡುತ್ತಾರೆ. ರಾಶಿಪೂಜೆಯ ನಂತರ ಹೋರಿಗಳನ್ನು ‘ಅಕ್ಕಲು’ ಬಿಡುತ್ತಾರೆ. ಅಂದಿನಿಂದ ಬೀಜ ಹಾಕುವವರೆಗೆ ದನಕರುಗಳು ಯಾವುದೇ ನಿರ್ಬಂಧವಿಲ್ಲದೇ ಮೇಯುತ್ತವೆ.